ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ರೆ ಕಬ್ಬಿಗೆ ಏಕರೂಪ ದರ ನಿಗದಿ: ರಾಹುಲ್ ಗಾಂಧಿ
ರಾಮದುರ್ಗದಲ್ಲಿ ರೈತರು, ಗದಗದಲ್ಲಿ ಯುವ ಮತದಾರರ ಜತೆ ಸಂವಾದ, 40% ಸರ್ಕಾರಕ್ಕೆ 40 ಸೀಟು ಮಾತ್ರ ಕೊಡಿ, ಚೀನಾದ ಪ್ರತಿಯೊಬ್ಬರ ಕೈಯಲ್ಲೂ ಮೇಡ್ ಇನ್ ಇಂಡಿಯಾ ವಸ್ತು ಇರಬೇಕೆಂಬುದು ನನ್ನ ಕನಸು: ರಾಹುಲ್ ಗಾಂಧಿ
ರಾಮದುರ್ಗ/ಗದಗ(ಏ.25): ರಾಜ್ಯದಲ್ಲಿರೋದು ಜನರಿಂದ ಚುನಾಯಿತವಾದ ಸರ್ಕಾರವಲ್ಲ. ಹಣದಿಂದ ಶಾಸಕರನ್ನು ಖರೀದಿಸಿದ ಹಾಗೂ ಜನರನ್ನು ಲೂಟಿ ಮಾಡುತ್ತಿರುವ ಸರ್ಕಾರ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದರು. ಜತೆಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಬ್ಬಿಗೆ ಏಕರೂಪದ ದರ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸೋಮವಾರ ರೈತರೊಂದಿಗೆ, ಗದಗನ ಸಹಕಾರಿ ಕೈಗಾರಿಕಾ ಪ್ರದೇಶದ ತಿರಂಗಾ ಪಾರ್ಕ್ನಲ್ಲಿ ಯುವ ಮತದಾರರೊಂದಿಗೆ ಮಾತನಾಡಿದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಶೇ.40 ಕಮಿಷನ್ ಸರ್ಕಾರವನ್ನು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 40 ಸೀಟುಗಳಿಗೆ ಸೀಮಿತಗೊಳಿಬೇಕು. ಕಾಂಗ್ರೆಸ್ ಅನ್ನು 150 ಸ್ಥಾನಗಳಲ್ಲಿ ಗೆಲ್ಲಿಸಬೇಕು. ನಾವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.
ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ‘ಮೋದಿ’ ಮಾನನಷ್ಟ ಕೇಸಿಗೆ ಹೈಕೋರ್ಟ್ ತಡೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಕಬ್ಬಿಗೆ ಏಕರೂಪದ ದರ ನಿಗದಿ ಮಾಡಲಾಗುವುದು. ಅದು ಈಗಿರುವ ದರಕ್ಕಿಂತ ಅತಿ ಹೆಚ್ಚಾಗಿದೆ. ಕೃಷಿ ಪರಿಕರಗಳಿಗೂ ಜಿಎಸ್ಟಿ ವಿಧಿಸುವ ಮೂಲಕ ಬಿಜೆಪಿ ಸರ್ಕಾರ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಮುಂದಿನ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಜಿಎಸ್ಟಿಯನ್ನು ಸಂಪೂರ್ಣ ಬದಲಿಸುತ್ತೇವೆ. ಐದು ರೀತಿಯ ಜಿಎಸ್ಟಿತೆಗೆದುಹಾಕಿ, ಏಕರೂಪದ ಹಾಗೂ ಅತಿ ಕಡಿಮೆ ತೆರಿಗೆ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಚೀನಾದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನ: ರಾಹುಲ್
ದೇಶದಲ್ಲಿಂದು ನಾವಿಂದು ಬಳಸುವ ಅತೀ ಚಿಕ್ಕವಸ್ತುಗಳಿಂದ ಹಿಡಿದು ಎಲ್ಲವೂ ಚೀನಾದಲ್ಲಿ ತಯಾರಾಗುತ್ತವೆ(ಮೇಡ್ ಇನ್ ಚೈನಾ). ಆದರೆ ಚೀನಾದ ಪ್ರತಿಯೊಬ್ಬರ ಕೈಯ್ಯಲ್ಲೂ ‘ಮೇಡ್ ಇನ್ ಇಂಡಿಯಾ’ ಬರಹ ಇರುವ, ಅಂದರೆ ಭಾರತದಲ್ಲೇ ತಯಾರಾಗುವ ವಸ್ತುಗಳು ಇರಬೇಕು ಎನ್ನುವುದು ನನ್ನ ಜೀವನದ ಬಹುದೊಡ್ಡ ಕನಸು ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದ್ದಾರೆ.
ಗದಗದ ಸಹಕಾರಿ ಕೈಗಾರಿಕಾ ಪ್ರದೇಶದ ತಿರಂಗಾ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಯುವ ಮತದಾರರೊಂದಿಗಿನ ಸಂವಾದದಲ್ಲಿ ಮಾತನಾಡಿ, ದೇಶದ ಕೆಲವೇ ಕೆಲ ಉದ್ಯೋಗ ಪತಿಗಳ ಕೈಗೆ ದೇಶದ ಕೈಗಾರಿಕಾ ವಲಯವನ್ನು ಮೋದಿ ಸರ್ಕಾರ ಮಾರಿ ಬಿಟ್ಟಿದೆ. ಉದ್ಯೋಗಪತಿಗಳು ಚೀನಾದಿಂದ ಉತ್ಪನ್ನಗಳನ್ನು ತಂದು ಇಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಇದರಿಂದ ದೇಶದಲ್ಲಿ ಯಾವುದೇ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ದೂರಿದರು.
ಇಂದು ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ!
ಸತ್ಯ ಹೇಳೋದ್ರಿಂದ ಶಕ್ತಿ ಬರುತ್ತೆ: ರಾಗಾ
ಸತ್ಯ ಹೇಳುವುದರಿಂದ ಶಕ್ತಿ ಬರುತ್ತದೆ. ಅದೇ ಶಕ್ತಿಯೇ ನನ್ನನ್ನು ದೇಶದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡಲು ಸಶಕ್ತಗೊಳಿಸಿತ್ತು. ಅದಕ್ಕಾಗಿ ನೀವು ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ. ನಮ್ಮದು ಬ್ರಿಟಿಷರ ವಿರುದ್ಧ ಹೋರಾಡಿದ ಕುಟುಂಬ. ನನ್ನ ತಾತ, ಅಜ್ಜಿ, ಅಪ್ಪ ಹೀಗೆ ಎಲ್ಲರಿಂದಲೂ ಒಂದಿಷ್ಟುಹೋರಾಟದ ಮನೋಭಾವ ನನ್ನಲ್ಲಿ ಒಡಮೂಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕನ್ನಡದಲ್ಲೇ ಮಾತನಾಡಿ ಎಂದ ರಾಹುಲ್
ಯುವ ಮತದಾರರೊಂದಿಗೆ ಸಂವಾದದ ವೇಳೆ ಎಲ್ಲರೂ ಇಂಗ್ಲಿಷ್‌ನಲ್ಲಿಯೇ ಪ್ರಶ್ನೆ ಕೇಳುತ್ತಿದ್ದಂತೆ ರಾಹುಲ್ ಗಾಂಧಿ ನಾವು ಕರ್ನಾಟಕದಲ್ಲಿದ್ದೇವೆ, ಕನ್ನಡದಲ್ಲಿಯೇ ಪ್ರಶ್ನೆ ಕೇಳಿ ಎಂದು ಪದೇ ಪದೆ ಹೇಳಿದರೂ ಎಲ್ಲಾ ಯುವಕರು ಇಂಗ್ಲಿಷಿನಲ್ಲಿ ಪ್ರಶ್ನೆ ಕೇಳಿದರು. ನೆರೆದಿದ್ದ ಸಾವಿರಾರು ಯುವಕರಲ್ಲಿ ಕೇವಲ 5 ಜನರ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ ಅವರಿಗೆ ಕೊನೆಯದಾಗಿ ಪ್ರಶ್ನೆ ಕೇಳಿದ ರಿಯಾ ಜಾಧವ್, ರಾಹುಲ್ ಜಿ ನೀವು ಮುಂದಿನ ಪ್ರಧಾನಿಯಾಗಬೇಕು ಎಂದಾಗ, ಖುಷಿಯಿಂದಲೇ ರಾಹುಲ್ ಧನ್ಯವಾದ ತಿಳಿಸಿದರು.