*  ಕರ್ನಾಟಕ, ಬೆಂಗಳೂರಿನ ವರ್ಚಸ್ಸು-ಭವಿಷ್ಯಕ್ಕೆ ಇದರಿಂದ ಹೊಡೆತ, ಆರ್ಥಿಕ ನಷ್ಟ*  ಐಟಿ ಉದ್ಯಮ ಬೆಂಗಳೂರು ತೊರೆದು ಕೊರಿಯಾ, ಸಿಂಗಾಪುರಕ್ಕೆ ಹೋಗುವ ಸಾಧ್ಯತೆ*  ಯುವ, ಮಹಿಳಾ, ವಿದ್ಯಾರ್ಥಿ ಕಾಂಗ್ರೆಸ್‌ ಸದಸ್ಯರೊಂದಿಗೆ ರಾಹುಲ್‌ ಸಂವಾದ 

ಬೆಂಗಳೂರು(ಏ.02): ಬಿಜೆಪಿ(BJP) ಪ್ರೇರಿತ ಕೋಮು ದ್ವೇಷದಿಂದ ಕರ್ನಾಟಕ ಹಾಗೂ ಬೆಂಗಳೂರಿನ ವರ್ಚಸ್ಸು ಮತ್ತು ಭವಿಷ್ಯಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಐಟಿ ಕ್ಷೇತ್ರದ ಮೇಲೆ ಮಾರಕ ಪರಿಣಾಮವಾಗಿ ಆರ್ಥಿಕ ನಷ್ಟಕ್ಕೂ ಕಾರಣವಾಗಲಿದ್ದು, ತನ್ಮೂಲಕ ಭವಿಷ್ಯದಲ್ಲಿ ಯುವ ಸಮುದಾಯ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ(Rahul Gandhi) ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಯುವ, ಮಹಿಳಾ ಮತ್ತು ವಿದ್ಯಾರ್ಥಿ ಕಾಂಗ್ರೆಸ್‌(Congress) ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ಮಾಹಿತಿ ತಂತ್ರಜ್ಞಾನ (ಐಟಿ) ವಲಯವು ಕರ್ನಾಟಕ(Karnataka) ಮತ್ತು ಬೆಂಗಳೂರಿನ(Bengaluru) ವರ್ಚಸ್ಸು ಹಾಗೂ ಆರ್ಥಿಕ ಶಕ್ತಿಗೆ ಕಾರಣ. ಎಚ್‌ಎಎಲ್‌, ಬಿಇಎಲ್‌ನಂತಹ ದೊಡ್ಡ ಕಂಪನಿಗಳು ಇಲ್ಲಿವೆ. ಇದರಿಂದಲೇ ವಿಶ್ವದ ಮೂಲೆ-ಮೂಲೆಯಿಂದ ಜನರು ಬಂದು ಇಲ್ಲಿ ನೆಲೆಸಿದ್ದು, ಉದ್ಯಮಿಗಳು ಲಕ್ಷಾಂತರ ಕೋಟಿ ರು. ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೀಗಿರುವಾಗ ಬಿಜೆಪಿಯು ತನ್ನ ಅಧಿಕಾರಕ್ಕಾಗಿ ಹುಟ್ಟು ಹಾಕುತ್ತಿರುವ ಮುಸ್ಲಿಂ-ಹಿಂದೂ(Hindu-Muslim) ವೈರತ್ವ ಹಾಗೂ ಧರ್ಮಾಧಾರಿತ ರಾಜಕಾರಣವು ಇವುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದರು.

ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವೆ, ರಾಹುಲ್ ಗಾಂಧಿಗೆ ಭರವಸೆ ಕೊಟ್ಟ ಡಿಕೆ ಶಿವಕುಮಾರ್

ಐಟಿ ಹೂಡಿಕೆ ಬೇರೆಡೆಗೆ ವರ್ಗವಾಗಲಿದೆ:

ಕೋಮು ದ್ವೇಷದ ವಾತಾವರಣದಿಂದ ನಿಧಾನವಾಗಿ ವಿದೇಶಿಗರು ಬೆಂಗಳೂರಿನಿಂದ ಹಿಂದೆ ಸರಿಯುತ್ತಾರೆ. ಬೆಂಗಳೂರಿಗೆ ಹೋಗಿ ಕೋಮು ವೈರತ್ವಕ್ಕೆ ಬಲಿಯಾಗುವುದೇಕೆ ಎಂಬ ನಿರ್ಧಾರಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಐಟಿ ಉದ್ಯಮವನ್ನು ಬೆಂಗಳೂರು ಬದಲಾಗಿ ಕೊರಿಯಾ, ವಿಯೆಟ್ನಾಂ, ಸಿಂಗಾಪುರದ ಕಡೆ ವರ್ಗಾಯಿಸುವ ಸಾಧ್ಯತೆಗಳಿವೆ. ಇದರಿಂದ ಸಾವಿರಾರು ಕೋಟಿ ರು.ಬಂಡವಾಳ ಕರ್ನಾಟಕದಿಂದ ದೂರ ಹೋಗಬಹುದು. ಈ ಮೂಲಕ ರಾಜ್ಯ ಮತ್ತು ರಾಜಧಾನಿಯ ಆರ್ಥಿಕ ಶಕ್ತಿ ನಾಶವಾಗುವುದಲ್ಲದೆ ಯುವಜನತೆಯ ಭವಿಷ್ಯ ಹಾಳಾಗಲಿದೆ ಎಂದು ಹೇಳಿದರು.

ಕಳೆದ ಎರಡು ವರ್ಷದಿಂದ ರಾಜ್ಯ ಬಿಜೆಪಿ ಸರ್ಕಾರ ಕಾಲಹರಣ ಮಾಡುತ್ತಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಸಿಲ್ಲ. ಉದ್ಯಮ, ಆರ್ಥಿಕ ಚೇತರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕನಿಷ್ಠ ಅವುಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಸಮಾಜದಲ್ಲಿ ಹಿಂದೂ ಮುಸ್ಲಿಂ ನಡುವೆ ವೈರತ್ವವನ್ನು ಹರಡುತ್ತಿದೆ. ಈ ಕುರಿತು ಬಹುರಾಷ್ಟ್ರೀಯ ಕಂಪನಿ, ಐಟಿ ವಲಯ, ವಿದೇಶಿ ಪ್ರಜೆಗಳು, ಉದ್ಯಮಿಗಳ ಅಭಿಪ್ರಾಯ ಏನಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಂತಾಗಿದೆ. ಬಂಡವಾಳ ಹೂಡಿಕೆ ಕಡಿಮೆಯಾಗಿ, ಉದ್ಯೋಗ ಕೊರತೆ ಉಂಟಾದರೆ ಯುವ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅಭಿಪ್ರಾಯಪಟ್ಟರು.

ರಾಹುಲ್‌ ಸಭೆಗೆ ಜೂಮ್‌ ಆ್ಯಪ್‌ ಮೂಲಕ 70000 ಮಂದಿ ಭಾಗಿ

ಬೆಂಗಳೂರು: ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ 60 ಲಕ್ಷ ಸದಸ್ಯರನ್ನು ನೋಂದಣಿ ಮಾಡಿರುವ ಸುಮಾರು 70,000 ಕಾರ್ಯಕರ್ತರು ಜೂಮ್‌ ಆ್ಯಪ್‌ ಮೂಲಕ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ವರ್ಚುಯಲ್‌ (Virtual Meeting) ಮೂಲಕ ಭಾಗವಹಿಸಿದ್ದು, ಈ ಪೈಕಿ ಕೆಲವರೊಂದಿಗೆ ರಾಹುಲ್‌ ಸಂವಾದ ನಡೆಸಿದರು.

ಮೊದಲಿಗೆ ಶಿವಶಂಕರ್‌ (Shivshankar) ಎಂಬುವರನ್ನು ಅಭಿನಂದಿಸಿದ ರಾಹುಲ್‌ ಗಾಂಧಿ, ಸದಸ್ಯತ್ವ ನೋಂದಣಿ ಅನುಭವ ಹಂಚಿಕೊಳ್ಳುವಂತೆ ಕೋರಿದರು. ಆಗ ಶಿವಶಂಕರ್‌, 3900 ಮಂದಿಯ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ಸಾರ್ವಜನಿಕರು ಆರಂಭದಲ್ಲಿ ನಾನಾ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆಲ್ಲಾ ಉತ್ತರಿಸಿ ಕಾಂಗ್ರೆಸ್‌ ಕೊಡುಗೆಗಳ ಬಗ್ಗೆಯೂ ತಿಳಿಸಿದೆ. ನಂತರ ಸದಸ್ಯತ್ವ ಪಡೆದರು ಎಂದು ಜನರ ಪ್ರತಿಕ್ರಿಯೆಯನ್ನು ವಿವರಿಸಿದರು.

ನಟ ಪುನೀತ್‌ ರಾಜ್‌ಕುಮಾರ್‌ ಮನೆಗೆ ರಾಹುಲ್‌ ಗಾಂಧಿ ಭೇಟಿ

ನಿಮಗೆ ಕಾಂಗ್ರೆಸ್‌ ಏಕೆ ಇಷ್ಟಎಂಬ ರಾಹುಲ್‌ ಗಾಂಧಿ ಪ್ರಶ್ನೆಗೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಹೊಳಲ್ಕೆರೆಯ ಸವಿತಾ ರಘು (Savitha Raghu), ನನಗೆ ಕಾಂಗ್ರೆಸ್‌ ಎಂದರೆ ಅಚ್ಚುಮೆಚ್ಚು. ನಮ್ಮ ಅಜ್ಜಿ ಇಂದಿರಾ ಗಾಂಧಿಯವರ (Indira Gandhi) ಕೊಡುಗೆ ಬಗ್ಗೆ ಹೇಳುತ್ತಿದ್ದರು. ನಾವು ಆ ಕಾಲದಿಂದಲೂ ಕಾಂಗ್ರೆಸ್‌. ಇಂದು ಸಾಮಾನ್ಯ ಜನ ಸಂಕಷ್ಟದಲ್ಲಿದ್ದು, ಕಾಂಗ್ರೆಸ್‌ನ ಕೊಡುಗೆಗಳನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ನಾನು 11,000 ಸದಸ್ಯತ್ವ ನೋಂದಣಿ ಮಾಡಿದ್ದೇನೆ ಎಂದು ವಿವರಿಸಿದರು.

ಸಂಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಹೊಸಕೋಟೆಯ ನಾಣಿ, ಬೂತ್‌ ಕಮಿಟಿಗಳನ್ನು ಬಲವರ್ಧನೆಗೊಳಿಸಬೇಕು. ಬ್ಲಾಕ್‌ ಅಧ್ಯಕ್ಷರು ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿ ಮೇಲ್ವಿಚಾರಣೆ ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು. ಇದಕ್ಕೆ ರಾಹುಲ್‌ ಗಾಂಧಿ ಖಂಡಿತ ನಿಮ್ಮ ಸಲಹೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.