Asianet Suvarna News Asianet Suvarna News

ಬಿಜೆಪಿ, ಆರ್‌ಎಸ್‌ಎಸ್‌ ಜನರಲ್ಲಿ ಕೋಮುದ್ವೇಷ ಹರಡುತ್ತಿದೆ: ರಾಹುಲ್‌ ಗಾಂಧಿ

ನಮ್ಮದು ದ್ವೇಷ ಮತ್ತು ಅಸೂಯೆಗಳಿಂದ ಕೂಡಿದ ದೇಶವಲ್ಲ. ಅವುಗಳಿಂದಲೂ ಸಹ ಯಾವುದೇ ಲಾಭವಿಲ್ಲ: ರಾಹುಲ್‌ ಗಾಂಧಿ

Rahul Gandhi Slams BJP and  RSS grg
Author
First Published Oct 22, 2022, 8:30 PM IST

ರಾಯಚೂರು(ಅ.22): ದೇಶದುದ್ದಕ್ಕು ಕೈಗೊಂಡಿರುವ ಜೋಡೋ ಪಾದಯಾತ್ರೆಯಲ್ಲಿ ಜನರೇ ನಮಗೆ ಪ್ರೇರಣೆಯನ್ನು ನೀಡುತ್ತಿದ್ದು, ಅವರ ಶಕ್ತಿಯನ್ನು ತುಂಬಿ ಹೋದ ಕಡೆಯಲ್ಲೆಲ್ಲಾ ಪ್ರೀತಿ, ವಿಶ್ವಾಸನ್ನು ವ್ಯಕ್ತಪಡಿಸುತ್ತಿದ್ದಾರೆ ಅದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ತಾಲೂಕಿನ ಯರಗೇರಾ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಮೊದಲ ದಿನದ ಶುಕ್ರವಾರ ಸಂಜೆ ಕಾರ್ನರ್‌ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ನಿತ್ಯ ಆರರಿಂದ ಎಂಟು ತಾಸು ನಡೆಯುತ್ತೇವೆ. ಆ ಸಮಯದಲ್ಲಿ ನಾವು ಏನೂ ಮಾತನಾಡುವುದಿಲ್ಲ. ಕಾರ್ಮಿಕರು, ಯುವಕರು, ಬಡವರ ಮಾತುಗಳನ್ನು ಆಲಿಸುತ್ತೇವೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತೇವೆ. ಇದಾದ ನಂತರ ಬರೀ 15 ನಿಮಿಷ ಮಾತ್ರ ಮಾತನಾಡುತ್ತೇವೆ ಎಂದರು.

ಸಂಸತ್ತಲ್ಲಿ ರೈತರ ಪರ ದನಿ ಎತ್ತುವೆ: ಅನ್ನದಾತರಿಗೆ ರಾಹುಲ್‌ ಭರವಸೆ

ದೇಶದ ಧ್ವಜವನ್ನು ಎತ್ತಿಹಿಡಿದು, ರಾಷ್ಟ್ರ ರಕ್ಷಣೆ ಮಾಡುತ್ತಿದ್ದಾರೆ. 3,500 ಕಿ.ಮೀ. ಪಾದಯಾತ್ರೆ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಯಾರೇ ಆಗಲಿ ಮೊದಲನೆ ಹೆಜ್ಜೆ ಇಡುವುದು ಸುಲಭ. ಸಂಜೆವರೆಗೂ ಆ ಹೆಜ್ಜೆಗಳನ್ನು ಹಾಕುವುದು ಕಷ್ಟ. ಆದರೆ, ಯಾತ್ರೆಯಲ್ಲಿ ಹಗಲು-ರಾತ್ರಿ ಎನ್ನದೇ ಅಸಂಖ್ಯಾತ ಜನರು ಭಾಗವಹಿಸಿ ನಮಗೆ ಉತ್ಸಾಹ ತುಂಬುತ್ತಿದ್ದಾರೆ ಎಂದರು.

ನಮ್ಮ ದೇಶದಲ್ಲಿ ಪರಿಸ್ಥಿತಿ ದಾರುಣವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನವರು ಜನರಲ್ಲಿ ಕೋಮುದ್ವೇಷ ಹರಡುತ್ತಿದ್ದಾರೆ. ನಮ್ಮದು ದ್ವೇಷ ಮತ್ತು ಅಸೂಯೆಗಳಿಂದ ಕೂಡಿದ ದೇಶವಲ್ಲ. ಅವುಗಳಿಂದಲೂ ಸಹ ಯಾವುದೇ ಲಾಭವಿಲ್ಲ. ಇದರಿಂದಾಗಿ ಕೆಲ ದಿನಗಳ ಹಿಂದೆ ಕನ್ಯಾಕುಮಾರಿಯಿಂದ ಭಾರತ್‌ ಜೋಡೋ ಯಾತ್ರೆ ಆರಂಭಿಸಿ ಜನರ ಸಂಕಷ್ಟಗಳನ್ನು ಅರಿತು, ಅವರನ್ನು ಒಂದಾಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಮೊದಲ ಸಲ ರೈತರು ತೆರಿಗೆ ಕಟ್ಟುತ್ತಿದ್ದಾರೆ:

ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿಯೇ ರೈತರು ಮೊದಲ ಸಲ ತೆರಿಗೆ ಕಟ್ಟುವ ದುಸ್ಥಿತಿ ನಿರ್ಮಾಣಗೊಂಡಿದೆ. ರಸಗೊಬ್ಬರಕ್ಕೆ ಶೇ.5, ಟ್ರ್ಯಾಕ್ಟರ್‌ ಖರೀದಿಸಿದರೆ ಶೇ.12 ಹಾಗೂ ಕೀಟನಾಶಕಗಳಿಗೆ ಜಿಎಸ್‌ಟಿ ರೂಪದಲ್ಲಿ ಶೇ.18 ರಷ್ಟುತೆರಿಗೆ ರೈತರು ಕಟ್ಟುತ್ತಿದ್ದಾರೆ. ಇಷ್ಟೇ ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಏಳು ವರ್ಷ ರೈತರು ಕೃಷಿಯಲ್ಲಿ ಲಾಭಗಳಿಸಿಲ್ಲ, ಏಳು ವರ್ಷಗಳಿಂದ ಬರೀ ಕಷ್ಟಎದುರಿಸುತ್ತಿದ್ದಾರೆ. ಬರೀ ಮೂರು ವರ್ಷಗಳಿಂದ ಮಾತ್ರ ಅಲ್ಪ-ಸ್ವಲ್ಪ ಆದಾಯವನ್ನು ಗಳಿಸಿರುವುದಾಗಿ ರೈತರು ಅನುಭಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರೈತರು ಕನಿಷ್ಠ ಬೆಂಬಲ ಬೆಲೆ, ಬೆಳೆಹಾನಿ ಪರಿಹಾರ ಮತ್ತು ನೀರಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದು ಅವುಗಳೆಲ್ಲವನ್ನು ಆಲಿಸಲಾಗುತ್ತಿದೆ.

ನೋಟ್‌ ರದ್ದು, ಜಿಎಸ್‌ಟಿ ಅಜೈಜ್ಞಾನಿ:

ಪ್ರಧಾನಮಂತ್ರಿ ಮೋದಿ ಅವರು ನೋಟ್‌ ರದ್ದು ಮಾಡಿದರು. ವಿನಾಕಾರಣಕ್ಕೆ ದೇಶದ ಜನರ ಮೇಲೆ ಜಿಎಸ್‌ಟಿ ಹೇರಿದ್ದಾರೆ. ನೋಟ್‌ ರದ್ದು, ಜಿಎಸ್‌ಟಿಯಿಂದ ಯಾರಿಗಾದರೂ ಲಾಭವಾಗಿದೆಯೇ? ಅವುಗಳಿಂದ ಸಣ್ಣ, ಮಧ್ಯಮ ಹಾಗೂ ಬೀದಿ ವ್ಯಾಪಾರಿಗಳ ಬದುಕು ಸಂಪೂರ್ಣ ನಾಶಗೊಂಡಿದೆ. ದೇಶದಲ್ಲಿ ದಿನೇ ದಿನೆ ನಿರುದ್ಯೋಗಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಯುವಕರಿಗೆ ನೌಕರಿ ಕೊಡುವುದು ಅಸಾಧ್ಯವಾಗುತ್ತಿದೆ. ಪಾದಯಾತ್ರೆಯಲ್ಲಿ ಭೇಟಿಯಾಗುವ ಯುವಕರು ಪದವಿ ಮುಗಿಸಿದರೂ ಸಹ ನನಗೆ ಉದ್ಯೋಗ ದೊರಕಿಲ್ಲ ಎನ್ನುವ ಅತಾಶಯ ಮನೋಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು ಮೇಲಿದ್ದಾರೆ. ಇಂಥವರ ಕೈಗೆ ಪ್ರಧಾನಿ ಮೋದಿ ಅವರು ದೇಶದ ಸಂಪನ್ಮೂಲಗಳನ್ನು ಕೊಟ್ಟಿದ್ದಾರೆ. ವಿಮಾನ ನಿಲ್ದಾಣ, ಬಂದರುಗಳನ್ನು ನೀಡಿದ್ದಾರೆ. ದೂರ ಸಂಪರ್ಕ ಕ್ಷೇತ್ರವನ್ನು ಅವರಿಗೆ ವಹಿಸಿಕೊಡಲು ಮುಂದಾಗಿದ್ದಾರೆ. ಒಂದು ಕಡೆ ಇಡೀ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರಿದ್ದರೆ ಮತ್ತೊಂದು ಕಡೆ ಅತೀ ಹೆಚ್ಚು ನಿರುದ್ಯೋಗಿಗಳು ಇದೇ ದೇಶದಲ್ಲಿ ನೆಲೆಸಿದ್ದಾರೆ. ಇದಕ್ಕೆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾಗಿವೆ ಎಂದು ಆರೋಪಿಸಿದರು.

ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಂಧಿ ಕುಟುಂಬದ ಮೊದಲ ಕುಡಿ: ರಾಯರ ದರ್ಶನ ಪಡೆದ ರಾಹುಲ್‌ ಗಾಂಧಿ..!

ಪ್ರತಿಯೊಂದರಲ್ಲಿಯೂ ಲಂಚ:

ರಾಜ್ಯ ಸರ್ಕಾರ ಪ್ರತಿಯೊಂದರಲ್ಲಿಯೂ ಲಂಚ ಪಡೆಯುತ್ತಿದ್ದು, ಶೇ.40 ರಷ್ಟುಕಮಿಷನ್‌ ತೆಗೆದುಕೊಳ್ಳದೆ ಯಾವ ಕೆಲಸನೂ ಮಾಡುವುದಿಲ್ಲ. ಕಾಂಗ್ರೆಸ್‌ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ಭಾರತ್‌ ಜೋಡೋ ಯಾತ್ರೆಯನ್ನು ಕೈಗೊಂಡಿದೆ. ದೇಶದ ಜನರನ್ನು ಒಗ್ಗೂಡಿಸುವುದು. ಅವರಲ್ಲಿ ಬಿತ್ತಿರುವ ದ್ವೇಷ ಮತ್ತು ಅಸೂಯೆಗಳನ್ನು ತೆಗೆದು ಹಾಕುವುದೇ ಯಾತ್ರೆಯ ಉದ್ದೇಶವಾಗಿದೆ. ಬಸವಣ್ಣ, ಅಂಬೇಡ್ಕರ್‌, ನಾರಾಯಣ ಗುರುಜೀ ಅವರ ವಿಚಾರಧಾರೆಗಳ ಜಾರಿಗಾಗಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಪ್ರಧಾನಮಂತ್ರಿ ವಾಗ್ದಾನ ನೀಡಿದ್ದರು ಇದನ್ನು ಈಡೇರಿಸಬೇಕು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದರ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಈ ಮೂಲಕ ಒತ್ತಾಯಿಸಲಾಗುತ್ತಿದೆ.

371 (ಜೆ) ಕೊಟ್ಟವರು ಯಾರು:

ಈ ಭಾಗಕ್ಕೆ 371 (ಜೆ) ತಿದ್ದುಪಡಿ ತಂದವರು ಯಾರು ಎನ್ನುವುದನ್ನು ಎಲ್ಲರು ತಿಳಿದುಕೊಳ್ಳಬೇಕು. ಹಿಂದೆ ವಾಜಪೇಯಿ ಮತ್ತು ಅಡ್ವಾಣಿ ಅವರು 371(ಜೆ) ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ನಾವು ಅದನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದೇವು ಅದರಂತೆ ಮಾತನ್ನು ಉಳಿಸಿಕೊಂಡಿದ್ದೇವೆ. ಇದರಿಂದಾಗಿ ಈ ಭಾಗದವರಿಗೆ 40 ಸಾವಿರ ಸರ್ಕಾರಿ ಹುದ್ದೆಗಳು ಸಿಕ್ಕಿವೆ. ಲಕ್ಷಾಂತರ ಯುವಕರು ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಹೇಳಿದ ಮಾತನ್ನು ಉಳಿಸಿಕೊಂಡಿದೆ. ನುಡಿದಂತೆ ನಡೆಯುವ ಮೌಲ್ಯವನ್ನು ಬಸವಣ್ಣನವರಿಂದ ಕಲಿಯಲಾಗಿದೆ.
 

Follow Us:
Download App:
  • android
  • ios