"ಅವರು ಅತ್ಯಾಚಾರಿಗಳ ಜೊತೆಗಿದ್ದಾರೆ": Bilkis Bano ಅತ್ಯಾಚಾರಿಗಳ ಬಿಡುಗಡೆ, ಮೋದಿ ಟೀಕಿಸಿದ ರಾಹುಲ್
Bilkis Bano Convicts Release: ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಕೂಡ ಅನುಮತಿ ನೀಡಿತ್ತು ಎಂಬ ಸತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅವರು ಅತ್ಯಾಚಾರಿಗಳ ಪರ ನಿಂತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು ಅತ್ಯಾಚಾರಿಗಳ ಜೊತೆಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆಯಲ್ಲಿ ಕೇವಲ ಗುಜರಾತ್ ಸರ್ಕಾರದ ಪಾತ್ರವಲ್ಲದೇ ಕೇಂದ್ರ ಸರ್ಕಾರದ ಪಾತ್ರವೂ ಇದೆ ಎಂಬುದು ಬೆಳಕಿಗೆ ಬಂದ ನಂತರ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. "ಕೆಂಪು ಕೋಟೆಯ ಮೇಲೆ ಮಹಿಳೆಯರನ್ನು ಗೌರವಿಸುವ ಬಗ್ಗೆ ಮಾತನಾಡುತ್ತಾರೆ, ಆದರೆ ಅತ್ಯಾಚಾರಿಗಳ ಪರ ನಿಲ್ಲುತ್ತಾರೆ," ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಪ್ರಧಾನಿ ಮೋದಿಯವರ ಭರವಸೆಗೂ ಮತ್ತು ಆಲೋಚನೆಗೂ ನಡುವೆ ಇರುವ ವ್ಯತ್ಯಾಸ ಸ್ಪಷ್ಟವಾಗಿದೆ. ಪ್ರಧಾನಿ ಕೇವಲ
ಮಹಿಳೆಯರನ್ನು ವಂಚಿಸಿದ್ದಾರೆ," ಎಂದು ಹೇಳಿದ್ದಾರೆ. ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ಮಾತನಾಡಿದ್ದ ಮೋದಿ ಮಹಿಳಾ ಸಬಲೀಕರಣ ಕುರಿತು ಮಾತನಾಡಿದ್ದರು. ಅದೇ ದಿನ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳು ಬಿಡುಗಡೆಯಾಗಿದ್ದರು. ಸನ್ನಡತೆಯ ಆಧಾರದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಗುಜರಾತ್ ಸರ್ಕಾರ ತಿಳಿಸಿತ್ತು. ಅಪರಾಧಿಗಳನ್ನು ಹೀರೋಗಳಂತೆ ಕೆಲ ಸಂಘಟನೆಗಳ ಕಾರ್ಯಕರ್ತರು ಬರಮಾಡಿಕೊಂಡಿದ್ದರು.
ಸ್ವತಂತ್ರ ದಿನೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಮಹಿಳಾ ಸಬಲೀಕರಣ ಮತ್ತು ಮಹಿಳೆಯರನ್ನು ಗೌರವಯುತವಾಗಿ ಕಾಣುವ ಕುರಿತು ಮಾತನಾಡಿದ್ದರು. ನಮ್ಮ ಮಾತಿನಲ್ಲಿ, ಕಾರ್ಯದಲ್ಲಿ ಮಹಿಳೆಯರನ್ನು ಗೌರವಿಸಬೇಕು. ಮಹಿಳಾ ಸಬಲೀಕರಣ ಮತ್ತು ಉನ್ನತೀಕರಣ ಆಗುವತ್ತ ಕೆಲಸ ಮಾಡಬೇಕು. ದೇಶದ ಪ್ರತಿಯೊಬ್ಬರಿಗೂ ನಾನು ಮಾಡುವ ಮನವಿಯೆಂದರೆ ಹೆಣ್ಣನ್ನು ನೋಡುವ ಮನಸ್ಥಿತಿ ಬದಲಾಯಿಸಿಕೊಳ್ಳಿ, ಎಂದು ಮೋದಿ ಹೇಳಿದ್ದರು. ಆದರೆ ಅದರ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳು ಬಿಡುಗಡೆಯಾಗಿದ್ದರು.
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳನ್ನು ತರಾತುರಿಯಲ್ಲಿ ಗುಜರಾತ್ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದುವರೆಗೂ ಗುಜರಾತ್ ಸರ್ಕಾರ ಮಾತ್ರ ಈ ವಿವಾದದ ಕೇಂದ್ರ ಬಿಂದುವಾಗಿತ್ತು. ಆದರೆ ಕೇಂದ್ರ ಸರ್ಕಾರವೂ ಇದರಲ್ಲಿ ಭಾಗಿಯಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಮತ್ತು ಬಾನೊರ ಮಗುವನ್ನು ಕೊಲೆ ಮಾಡಲಾಗಿತ್ತು. ಸಿಬಿಐ ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಬಾರದು ಎಂದು ಆಕ್ಷೇಪಿಸಿದ್ದರೂ ಅತ್ಯಾಚಾರಿಗಳನ್ನು ಸ್ವತಂತ್ರೋತ್ಸವದಂದು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಗೊಳಿಸಲು ಅನುಮತಿ ಕೋರಿ ಗುಜರಾತ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಜೂನ್ 28ತಂದು ಕೋರಿತ್ತು. ಅದಾಗಿ ಕೇವಲ ಎರಡು ವಾರಗಳೊಳಗೆ ಗೃಹ ಸಚಿವಾಲಯ ಜುಲೈ 11ರಂದು ಅನುಮತಿ ನೀಡಿ ಆದೇಶಿಸಿದೆ. ಈ ಬಗ್ಗೆ ದಾಖಲೆಗಳು ಲಭ್ಯವಾಗಿದ್ದು ಗೃಹ ಸಚಿವಾಲಯ ಕೂಡ ಅತ್ಯಾಚಾರ ಪ್ರಕರಣದ ಅಪರಾಧಿಗಳು ಬಿಡುಗಡೆಯಾಗಲು ಸಹಕರಿಸಿರುವುದು ಬೆಳಕಿಗೆ ಬಂದಿದೆ.
ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಉತ್ತರ ನೀಡಿದ್ದು, ಅಪರಾಧಿಗಳು 14 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಮತ್ತು ಅವರು ಜೈಲಿನಲ್ಲಿ ಉತ್ತಮ ರೀತಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ದ ಒಪ್ಪಿಗೆ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಉತ್ತರಿಸಿದೆ.
ಇದನ್ನೂ ಓದಿ: Bilkis Bano ಅತ್ಯಾಚಾರಿಗಳ ಬಿಡುಗಡೆ ವಿವಾದ: ತರಾತುರಿಯಲ್ಲಿ ಒಪ್ಪಿಗೆ ನೀಡಿದ್ದ ಕೇಂದ್ರ
ಆಗಸ್ಟ್ 15ರಂದು ಅತ್ಯಾಚಾರಿಗಳನ್ನು ಬಿಡುಗಡೆ ಗೊಳಿಸಿದಾಗ ಅವರನ್ನು ಹೀರೋಗಳಂತೆ ಜನ ಸಂಭ್ರಮಾಚರಣೆಗಳೊಂದಿಗೆ ಬರಮಾಡಿ ಕೊಂಡಿದ್ದರು. ಆದರೆ ಗುಜರಾತ್ ಸರ್ಕಾರದ ಈ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಬಿಡುಗಡೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಅಪರಾಧಿಗಳು ಅರ್ಜಿ ಸಲ್ಲಿಸಿದ್ದರು. ಇದನ್ನು ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಕಟುವಾಗಿ ವಿರೋಧಿಸಿತ್ತು. ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣ ಗಂಭೀರವಾಗಿದ್ದು, ಅಪರಾಧಿಗಳು ಅತ್ಯಂತ ಕ್ರೂರತೆಯಿಂದ ಅಪರಾಧ ಮಾಡಿದ್ದಾರೆ. ಅವರಿಗೆ ಯಾವುದೇ ರೀತಿಯ ಕನಿಕರ ತೋರಬಾರದು ಎಂದು ಸಿಬಿಐ ಹೇಳಿತ್ತು. ಆದರೆ ಗುಜರಾತ್ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಿಬಿಐ ವಿರೋಧವನ್ನು ವಜಾಗೊಳಿಸಿ ಬಿಡುಗಡೆಗೆ ಅಂಕಿತ ನೀಡಿತ್ತು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರೂ ಸಹ ಅಪರಾಧಿಗಳು ಸಂತ್ರಸ್ಥರು ಒಂದು ಕೋಮಿಗೆ ಸೇರಿದವರು ಎಂಬ ಕಾರಣಕ್ಕೆ ಹೀನ ಕೃತ್ಯ ಮೆರೆದಿದ್ದಾರೆ. ಈ ಪ್ರಕರಣ ಕೋಮು ದ್ವೇಷದ ಪರಾಕಾಷ್ಠೆಯಾಗಿದೆ. ಚಿಕ್ಕ ಮಕ್ಕಳನ್ನೂ ಈ ಅಪರಾಧಿಗಳು ಬಿಟ್ಟಿಲ್ಲ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೆಲ್ಲದರ ಹೊರತಾಗಿಯೂ ವಿವಾದಾತ್ಮಕ ನಿರ್ಧಾರವನ್ನು ಗುಜರಾತ್ ಮತ್ತು ಕೇಂದ್ರ ಸರ್ಕಾರ ತೆಗೆದುಕೊಂಡಿತ್ತು.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಸನ್ಮಾನಿಸುವುದು ಹಿಂದೂ ಸಂಸ್ಕೃತಿಯೇ..?: ಶಿವಸೇನೆ
ಇದರ ಜತೆಗೆ ಅಪರಾಧಿಗಳು ಸಾವಿರಾರು ದಿನಗಳ ಕಾಲ ಪೆರೋಲ್ ಮೇಲೆ ಆಚೆ ಇರುವ ಬಗ್ಗೆಯೂ ದಾಖಲೆಗಳಿವೆ. ಹೆಸರಿಗೆ ಜೈಲು ಶಿಕ್ಷೆಗೆ ಒಳಗಾಗಿದ್ದರೂ, ಒಂದಲ್ಲಾ ಒಂದು ಕಾರಣದ ಮೇಲೆ ಅತಿ ಹೆಚ್ಚು ದಿನಗಳ ಕಾಲ ಪೆರೋಲ್ ಮೇಲೆ ಈ ಅಪರಾಧಿಗಳು ಆಚೆ ಇದ್ದಾರೆ. ಪೆರೋಲ್ ಮೇಲಿದ್ದಾಗ ಬಿಲ್ಕಿಸ್ ಬಾನೊ ಮತ್ತವರ ಕುಟುಂಬಕ್ಕೆ ಹಿಂಸೆ ನೀಡಿದ ಬಗ್ಗೆಯೂ ಬಿಲ್ಕಿಸ್ ಬಾನೊ ದೂರು ನೀಡಿದ್ದರು. ಹಾಗಾದರೆ ಇದು 'ಸನ್ನಡತೆ'ಯೇ ಎಂಬ ಗಂಭೀರ ಪ್ರಶ್ನೆ ಏಳುತ್ತದೆ. ಅಪರಾಧಿಗಳನ್ನು ಬಿಡುಗಡೆ ಮಾಡುವ ವೇಳೆಯೂ ಬಿಲ್ಕಿಸ್ ಬಾನೊ ಅವರ ಸುರಕ್ಷತೆ ಬಗ್ಗೆ ತೆಗೆದುಕೊಳ್ಳಲಿರುವ ಕ್ರಮದ ಬಗ್ಗೆ ಗುಜರಾತ್ ಪೊಲೀಸ್ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.