ಲೋಕಸಭೆ ಚುನಾವಣೆ, ಸರ್ಕಾರದ ಕಾರ್ಯವೈಖರಿ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು (ಆ.01): ಲೋಕಸಭೆ ಚುನಾವಣೆ, ಸರ್ಕಾರದ ಕಾರ್ಯವೈಖರಿ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಜ್ಞಾನಭಾರತಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಾಗಲೇ ಸಭೆ ನಡೆಸಬೇಕಿತ್ತು. ಆದರೆ, ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನರಾದ ಕಾರಣ ಸಭೆ ರದ್ದಾಗಿತ್ತು. ಇದೀಗ ದೆಹಲಿಯಲ್ಲಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಲೋಕಸಭಾ ಚುನಾವಣೆ, ಹಿರಿಯ ನಾಯಕರಿಗೆ ಯಾವೆಲ್ಲ ಜವಾಬ್ದಾರಿ ನೀಡಬೇಕು, ಅಭ್ಯರ್ಥಿಗಳ ಆಯ್ಕೆ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಕುರಿತಂತೆ ಚರ್ಚಿಸಲಾಗುತ್ತದೆ ಎಂದರು. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ಸಮಿತಿ ಮಾಡಲಾಗುತ್ತದೆ ಎಂಬುದು ಸುಳ್ಳು. ಸಮನ್ವಯ ಸಾಧಿಸಲು ನಾನೇ ಇದ್ದೇನೆ. ನಾನು ಸರ್ಕಾರವೂ ಹೌದು, ಪಕ್ಷವೂ ಹೌದು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪಕ್ಷದವರೂ ಹೌದು, ಸರ್ಕಾರವೂ ಹೌದು. ಹೀಗಾಗಿ ಸಮನ್ವಯ ಸಮಿತಿ ಅವಶ್ಯಕತೆಯಿಲ್ಲ. ಏನೇ ಸಮಸ್ಯೆ ಬಂದರೂ ನಾವೇ ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಆರಂಭ: ಸಿ.ಟಿ.ರವಿ
ಪೆರಿಫೆರಲ್ ರಸ್ತೆ ಯೋಜನೆ ಸ್ಥಗಿತ ಅಸಾಧ್ಯ: ಪೆರಿಫೆರಲ್ ರಿಂಗ್ ರಸ್ತೆಗೆ ಭೂಮಿ ನೀಡುವ ರೈತರ ಹಿತ ಕಾಪಾಡುವ ಸಲುವಾಗಿ ಬದಲಿ ಭೂಮಿ ಹಂಚಿಕೆ, ಹೆಚ್ಚಿನ ಪರಿಹಾರ ನೀಡುವ ವಿಚಾರದಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಆದರೆ, ರಸ್ತೆ ನಿರ್ಮಾಣ ಯೋಜನೆ ಜಾರಿ ಮಾಡೇ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸುವ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಭೂಮಿ ನೀಡಲಿರುವ ರೈತರು ಹಾಗೂ ಭೂ ಮಾಲಿಕರೊಂದಿಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಾಗಿ ಒಟ್ಟು 2,565.30 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಭೂ ಸ್ವಾಧೀನ ಸೇರಿದಂತೆ ಯೋಜನೆಗೆ .25 ಸಾವಿರ ಕೋಟಿ ವೆಚ್ಚವಾಗಲಿದೆ. 5 ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. 2005ರಲ್ಲಿ ಯೋಜನೆಗೆ ಮೊದಲ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಯಿತು. ಆಗಿನಿಂದಲೂ ಒಂದಿಲ್ಲೊಂದು ಕಾರಣದಿಂದ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ ಎಂದರು.
ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದಾಗ 2013ಕ್ಕಿಂತ ಹಿಂದಿನ ಭೂಸ್ವಾಧೀನ ಕಾಯ್ದೆಯಂತೆ ಭೂಮಾಲಿಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಹೀಗಾಗಿ 2013ರ ಭೂ ಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೂ, ರೈತರ ಹಿತ ಕಾಪಾಡಲು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಿ, ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ಹೆಚ್ಚಿನ ಪರಿಹಾರ ನೀಡುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಗಸ್ಟ್ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್
ಯೋಜನೆಗಾಗಿ ಬೇಕಿರುವ ಭೂಮಿಗೆ ಸಂಬಂಧಿಸಿದಂತೆ ಈಗಾಗಲೇ ನೋಟಿಫಿಕೇಷನ್ ಹೊರಡಿಸಲಾಗಿದೆ. ಅದನ್ನು ಡಿ-ನೋಟಿಫೈ ಮಾಡಲು ಸಾಧ್ಯವಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಏಕ ಸದಸ್ಯ ಪೀಠ ಆದೇಶ ನೀಡಿದ ನಂತರ ರೈತರಾರಯರೂ ಮೇಲ್ಮನವಿ ಸಲ್ಲಿಸಲಿಲ್ಲ. ಬೇಕಿದ್ದರೆ ಈಗ ರೈತರು ಮೇಲ್ಮನವಿ ಸಲ್ಲಿಸಬಹುದು. ಅದರಲ್ಲಿ ನನ್ನದು ತಕರಾರಿಲ್ಲ. ಏನೇ ಅಡೆತಡೆ ಬಂದರೂ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
