ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಿರಿಯ ನಾಯಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಪರ ವಾತಾವರಣ ನಿರ್ಮಾಣ ಮಾಡಬೇಕು: ರಾಹುಲ್‌ ಗಾಂಧಿ  

ಬೆಂಗಳೂರು(ಆ.05):  ‘ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇದಕ್ಕೆ ವ್ಯತಿರಿಕ್ತವಾದ ವಿಚಾರ ಮುಂದಿಟ್ಟುಕೊಂಡು ಆಂತರಿಕ ರಾಜಕೀಯದಲ್ಲಿ ತೊಡಗುವವರು ಅದೆಷ್ಟೇ ದೊಡ್ಡ ನಾಯಕರಾಗಿದ್ದರೂ ಹೈಕಮಾಂಡ್‌ ಸಹಿಸುವುದಿಲ್ಲ.’ ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವ ಸಮಾರಂಭದ ಹಿಂದಿನ ದಿನ ರಾಜ್ಯ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ 35 ಮಂದಿ ನಾಯಕರನ್ನು ಉದ್ದೇಶಿಸಿ ವರಿಷ್ಠ ರಾಹುಲ್‌ ಗಾಂಧಿ ಇಂತಹದೊಂದು ಸ್ಪಷ್ಟನಿರ್ದೇಶನ ನೀಡಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳು ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು, ರಾಜ್ಯ ನಾಯಕರ ನಡುವೆ ನಡೆದಿರುವ ಸಿಎಂ ಹುದ್ದೆ ರೇಸ್‌ ವಿಚಾರವನ್ನು ಪ್ರಸ್ತಾಪಿಸಿದರು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೈಕಮಾಂಡ್‌ ಹೇಳಿದ್ದರೂ ರಾಜ್ಯದ ಕೆಲ ನಾಯಕರು ಹಾಗೂ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪಿಸಿ ಗೊಂದಲ ನಿರ್ಮಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಮಾಸ್ ಲೀಡರ್‌ನನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸಿಕೊಂಡಿದ್ದೇ ಇಲ್ಲ. ಆದರೆ....?!

ಆಗ ಮಧ್ಯಪ್ರವೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ಬಿಜೆಪಿಯ ದುರಾಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್‌ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ. ಇಂತಹ ಪೂರಕ ವಾತಾವರಣ ಇರುವ ಸನ್ನಿವೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಪ್ರತಿಯೊಬ್ಬರೂ ತಮ್ಮ ಗಮನ ಕೇಂದ್ರೀಕರಿಸಬೇಕು. ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ. ಇದಕ್ಕೆ ಭಿನ್ನವಾಗಿ ಯಾರಾದರೂ ಆಂತರಿಕ ರಾಜಕೀಯದಲ್ಲಿ ತೊಡಗಿದರೆ, ಅಂತಹವರು ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಹೈಕಮಾಂಡ್‌ನ ಸಂಪೂರ್ಣ ಸಹಮತಿ ಇರುತ್ತದೆ. ಇಂತಹ ನಡವಳಿಕೆಯನ್ನು ಹೈಕಮಾಂಡ್‌ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಂತಹ ವಿಚಾರಗಳು ಪಕ್ಷಕ್ಕೆ ಸಮಸ್ಯೆ ತಂದೊಡ್ಡುತ್ತವೆ. ಇಂತಹ ವಿಚಾರಗಳು ಮತ್ತೆ ಮತ್ತೆ ಪ್ರಸ್ತಾಪವಾಗಬಾರದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದಾರಮಯ್ಯ ಅವರೊಂದಿಗೆ ಈ ವಿಚಾರದ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ. ಅವರು ಸಹ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ಆಗಾಗ ಈ ವಿಚಾರ ಪ್ರಸ್ತಾಪಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಮುಂದುವರೆದರೆ ಕ್ರಮ ಅನಿವಾರ್ಯ ಎಂದರು ಎಂದು ಮೂಲಗಳು ಹೇಳಿವೆ.

ಅಲ್ಲದೆ, ಶಿವಕುಮಾರ್‌, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಿರಿಯ ನಾಯಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಪರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು ಎನ್ನಲಾಗಿದೆ. ರಾಹುಲ್‌ ಗಾಂಧಿ ಅವರ ಈ ಸೂಚನೆಗಳಿಗೆ ಸಭೆಯಲ್ಲಿದ್ದ ಎಲ್ಲ ನಾಯಕರು ಸಹಮತ ಸೂಚಿಸಿದರು ಎಂದೂ ಮೂಲಗಳು ಹೇಳುತ್ತವೆ.

ರಾಹುಲ್‌ಗೆ ಲಿಂಗದೀಕ್ಷೆ ನೀಡಿ ಮುರುಘಾಶ್ರೀ ಹೇಳಿದ್ದೇನು?

ಇದೇ ವೇಳೆ ರಾಜ್ಯದ ಕರಾವಳಿ ಜಿಲ್ಲೆಗಳ ಪರಿಸ್ಥಿತಿ, ಅಲ್ಲಿ ಬಿಜೆಪಿ ವಿರುದ್ಧ ಜನ ಸಿಟ್ಟಿಗೆದ್ದಿರುವುದು ಮತ್ತು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಈ ಬಗ್ಗೆ ಅಸಮಾಧಾನಗೊಂಡಿರುವ ಲಿಂಗಾಯತ ಸಮುದಾಯವನ್ನು ಪಕ್ಷದತ್ತ ಸೆಳೆಯುವ ದಿಸೆಯಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.

ರಾಹುಲ್‌ ಹೇಳಿದ್ದೇನು?

- ಬಿಜೆಪಿ ಬಗ್ಗೆ ಜನ ಬೇಸತ್ತು ಕಾಂಗ್ರೆಸ್‌ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ
- ಇಂತಹ ಸನ್ನಿವೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಶ್ರಮಿಸಿ
- ಪಕ್ಷ ಗೆದ್ದ ಬಳಿಕ ಸಿಎಂ ವಿಚಾರವನ್ನು ಹೈಕಮಾಂಡ್‌ ನಿರ್ಧರಿಸುತ್ತೆ
- ಇದಕ್ಕೆ ಭಿನ್ನವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಿ
- ವಿವಾದಾಸ್ಪದ ಹೇಳಿಕೆ ತಡೆ ಬಗ್ಗೆ ಸಿದ್ದು, ಡಿಕೆಶಿ ಜತೆ ಚರ್ಚಿಸಿದ್ದೇನೆ