Asianet Suvarna News Asianet Suvarna News

Bharat Jodo Yatra: ಕರ್ನಾಟಕದಲ್ಲಿ ರಾಹುಲ್‌ ಯಾತ್ರೆ ಫೋಟೋ ಶೋ..!

ಯಾತ್ರೆಯ ಮುಂದುವರಿದ ಭಾಗ ಏರ್ಪಾಟಿಗೆ ಧ್ರುವನಾರಾಯಣ ನೇತೃತ್ವದ ಸಮಿತಿ, ರಾಹುಲ್‌ ಸಂವಾದ ವೇಳೆ ವ್ಯಕ್ತವಾದ ಸಲಹೆ, ಸೂಚನೆ ಪ್ರಣಾಳಿಕೆಗೆ ಸೇರ್ಪಡೆ: ಡಿಕೆಶಿ

Rahul Gandhi Bharat Jodo Yatra Photo Show in Karnataka grg
Author
First Published Oct 26, 2022, 12:00 PM IST

ಬೆಂಗಳೂರು(ಅ.26): ರಾಜ್ಯದಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ನಡೆಸಿದ ಭಾರತ ಐಕ್ಯತಾ ಯಾತ್ರೆ ಸಂಪೂರ್ಣ ಯಶಸ್ವಿಯಾಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿದೆ. ದೇಶದ ರಾಜಕಾರಣವನ್ನು ಹೊಸ ದಿಕ್ಕಿಗೆ ತಿರುಗಿಸಿದೆ. ಈ ಯಾತ್ರೆ ವೇಳೆ ರಾಜ್ಯದ ಜನರಿಂದ ವ್ಯಕ್ತವಾದ ಅಭಿಪ್ರಾಯ, ನೋವು, ಸಲಹೆ, ಸೂಚನೆಗಳನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸೇರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಈ ಯಾತ್ರೆಯನ್ನು ಇಲ್ಲಿಗೇ ನಿಲ್ಲಿಸದೆ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆಯ ಛಾಯಾಚಿತ್ರ ಪ್ರದರ್ಶನ ಮಾಡಲಾಗುವುದು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಅವರ ಅಧ್ಯಕ್ಷತೆಯ ಸಮಿತಿ ಈ ಯಾತ್ರೆ ಬಗ್ಗೆ ಅಧ್ಯಯನ ಮಾಡಿ ಯಾತ್ರೆಯನ್ನು ಯಾವ ರೀತಿ ಮುಂದುವರಿಸಬೇಕು ಎಂಬ ವರದಿ ನೀಡಲಿದೆ. ಇದರ ಆಧಾರದ ಮೇಲೆ ನಮ್ಮ ನಾಯಕರ ಜತೆ ಚರ್ಚಿಸಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ರಾಹುಲ್‌ ಟೀಕಾಕಾರರಿಗೆ ಯಾತ್ರೆ ಉತ್ತರ: ಸಿದ್ದರಾಮಯ್ಯ

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಐಕ್ಯತಾ ಯಾತ್ರೆ ಕೇವಲ ಯಾತ್ರೆಯಾಗಿ ಉಳಿದಿಲ್ಲ ಆಂದೋಲನವಾಗಿ ಮಾರ್ಪಟ್ಟಿದೆ. ಯಾತ್ರೆಯಲ್ಲಿ ಜನರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಚರ್ಚಿಸಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದರು.

ದೇಶಾದ್ಯಂತ ಜನಸಾಮಾನ್ಯರ ಬಳಿಗೆ ಹೋಗಿ ಅವರ ನೋವನ್ನು ಖುದ್ದಾಗಿ ಆಲಿಸಿರುವ ಏಕೈಕ ನಾಯಕ ರಾಹುಲ್‌ ಗಾಂಧಿ. ಇಂದಿರಾ ಗಾಂಧಿ ಅವರನ್ನು ನೋಡಲು ಜನರ ನೂಕುನುಗ್ಗಲು ಕಂಡುಬರುತ್ತಿದ್ದಂತೆ ರಾಹುಲ್‌ ಗಾಂಧಿ ಅವರನ್ನು ನೋಡಲು ಯುವಕರು, ಮಹಿಳೆಯರು, ವಯಸ್ಕರು, ವೃದ್ಧರು, ಅಂಗವಿಕಲರು, ಮಕ್ಕಳು ಎಲ್ಲರೂ ಆಗಮಿಸುತ್ತಿದ್ದರು. ಇದರಿಂದ ರಾಹುಲ್‌ ಗಾಂಧಿ ಅವರ ನಡಿಗೆ ಜನಸಾಮಾನ್ಯರ ಕಡೆಗೆ ಎಂಬುದಾಗಿತ್ತು. ರಾಜ್ಯದ ಜನರಿಂದ ಸಿಕ್ಕ ಅಭೂತಪೂರ್ವ ಸಹಕಾರ, ಬೆಂಬಲ ವರ್ಣಿಸಲಸಾಧ್ಯ. ಪಕ್ಷದ ಎಲ್ಲ ನಾಯಕರು, ಮುಖಂಡರು, ಕಾರ್ಯಕರ್ತರ ಶ್ರಮದಿಂದ ಇದು ಯಶಸ್ವಿಯಾಗಿದೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಇದು ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಡೆಯ ಯಾತ್ರೆ ಆಗಿತ್ತು. ಅದೇ ರೀತಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಆಯ್ಕೆ ಆದರು. ಇದರಿಂದ ದೇಶಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಯಾತ್ರೆ ಅಂತಿಮ ದಿನ ರಾಯಚೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ನನ್ನ ಕಾಲದಲ್ಲಿ ಇಂತಹ ಐತಿಹಾಸಿಕ ಘಟ್ಟದಾಖಲಿಸುವ ಅವಕಾಶ ಸಿಕ್ಕಿತಲ್ಲ ಎಂಬ ತೃಪ್ತಿ ಮತ್ತು ಸಂತೋಷ ನನಗಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದರೆ 60 ಸಾವಿರ ಹುದ್ದೆ ಭರ್ತಿ: ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿ ಅವರು ಕೇವಲ ರಾಷ್ಟ್ರೀಯ ಸಮಸ್ಯೆ ಮಾತ್ರವಲ್ಲ, ರಾಜ್ಯದಲ್ಲಿನ ಸಮಸ್ಯೆ ಬಗ್ಗೆಯೂ ಹೆಚ್ಚು ಗಮನ ಹರಿಸಿದರು. ರಾಜ್ಯದಲ್ಲಿ ದಕ್ಷ ಆಡಳಿತ ನೀಡಬೇಕು, ಭ್ರಷ್ಟಸರ್ಕಾರ ಕಿತ್ತೊಗೆಯಬೇಕು, ಯುವಕರಿಗೆ ಆಗುತ್ತಿರುವ ಮೋಸ ತಡೆಯಬೇಕು ಎಂದು ಹೇಳಿದರು. ಸ್ಥಳೀಯ ಭಾಷೆ, ಕೇಂದ್ರದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ, ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು ಎಂಬ ಸ್ಪಷ್ಟಸಂದೇಶ ನೀಡಿದರು. ನಿರುದ್ಯೋಗಿ ಯುವಕರ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸಿದ್ದಾರೆ. ಅವರು ಈ ಯಾತ್ರೆಯಲ್ಲಿ ಎಲ್ಲಾ ಜಾತಿ, ಧರ್ಮಗಳ ಮಂದಿರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದು ಭಾರತದ ಭಾವೈಕ್ಯತೆಯನ್ನು ಎತ್ತಿಹಿಡಿಯುವ ಪ್ರತೀಕ ಎಂದರು.

10 ಲಕ್ಷ ರು. ಪರಿಹಾರ:

ಈ ಯಾತ್ರೆಯಲ್ಲಿ ನೋವು ತಂದ ವಿಚಾರ ಎಂದರೆ ನಮ್ಮ ಕಾರ್ಯಕರ್ತರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು ಹಾಗೂ ಪೊಲೀಸ್‌ ಹೆಣ್ಣು ಮಗಳೊಬ್ಬಳು ನಿಧನರಾಗಿದ್ದು. ನಾನು ಇದೇ 28ರಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಆ ಕಾರ್ಯಕರ್ತನ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ 10 ಲಕ್ಷ ರು.ಪರಿಹಾರ ನೀಡುತ್ತೇನೆ ಎಂದರು.
 

Follow Us:
Download App:
  • android
  • ios