2018ರಲ್ಲಿ ಅಮಿತ್ ಶಾ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸುಲ್ತಾನ್ಪುರ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದು, ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಕಾಂಗ್ರೆಸ್ ಸ್ವಾಗತಿಸಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಸುಲ್ತಾನ್ಪುರದ ವಿಶೇಷ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. 2018ರಲ್ಲಿ ಕೇಂದ್ರ ಗೃಹ ಸಚಿವ, ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ವಿರುದ್ಧ ನೀಡಿದ್ದರೆನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ನ್ಯಾಯಾಲಯವು ಸಂಪೂರ್ಣವಾಗಿ ವಜಾಗೊಳಿಸಿ, ರಾಹುಲ್ ಗಾಂಧಿ ಅವರನ್ನು ಖುಲಾಸೆಗೊಳಿಸಿದೆ.
ಪ್ರಕರಣದ ತೀರ್ಪು ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಬಿಗಿ ಭದ್ರತೆಯ ನಡುವೆ ರಸ್ತೆ ಮಾರ್ಗವಾಗಿ ಸುಲ್ತಾನ್ಪುರ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶುಭಂ ವರ್ಮಾ ಅವರ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ರಾಹುಲ್ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ ಏನು?
ಈ ಪ್ರಕರಣವು 2018ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಬೆಂಗಳೂರಿನಲ್ಲಿ ನಡೆದ ಬೃಹತ್ ರಾಜಕೀಯ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಅಮಿತ್ ಶಾ ಅವರ ವಿರುದ್ಧ ಕೊ**ಲೆ ಆರೋಪಿ ಎಂಬ ಪದ ಬಳಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಹೇಳಿಕೆಯಿಂದ ಬಿಜೆಪಿ ಮತ್ತು ಪಕ್ಷದ ನಾಯಕರ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಸುಲ್ತಾನ್ಪುರದ ಸ್ಥಳೀಯ ಬಿಜೆಪಿ ನಾಯಕ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ವಿಜಯ್ ಮಿಶ್ರಾ ಅವರು 2018ರ ಆಗಸ್ಟ್ 4ರಂದು ಸುಲ್ತಾನ್ಪುರ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ವರ್ಷಗಳ ಕಾಲ ನಡೆದ ಈ ವಿಚಾರಣೆಯಲ್ಲಿ ನ್ಯಾಯಾಲಯವು ನವೆಂಬರ್ 27, 2023 ರಂದು ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿತ್ತು. ತದನಂತರ, ಫೆಬ್ರವರಿ 20, 2024 ರಂದು ಸುಲ್ತಾನ್ಪುರ ನ್ಯಾಯಾಲಯಕ್ಕೆ ಶರಣಾಗಿದ್ದ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಈ ಸುದೀರ್ಘ ಕಾನೂನು ಪ್ರಕ್ರಿಯೆಯಲ್ಲಿ ದೂರುದಾರ ವಿಜಯ್ ಮಿಶ್ರಾ, ಅನಿಲ್ ಮಿಶ್ರಾ ಮತ್ತು ರಾಮಚಂದ್ರ ದುಬೆ ಸೇರಿದಂತೆ ಮೂವರು ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು. ವಿಚಾರಣೆಯ ಮಧ್ಯದಲ್ಲಿ ದೂರುದಾರರು ಬೆಂಗಳೂರಿನ ರ್ಯಾಲಿಯ ಆಡಿಯೋ ರೆಕಾರ್ಡಿಂಗ್ನೊಂದಿಗೆ ರಾಹುಲ್ ಗಾಂಧಿಯವರ ಧ್ವನಿ ಮಾದರಿಯನ್ನು ಹೋಲಿಸಿ ಪರೀಕ್ಷಿಸಲು ಮನವಿ ಸಲ್ಲಿಕೆ ಮಾಡಿದ್ದರು. ಆದರೆ ವಿಚಾರಣಾ ನ್ಯಾಯಾಲಯ, ಸೆಷನ್ಸ್ ನ್ಯಾಯಾಲಯ ಹಾಗೂ ಅಲಹಾಬಾದ್ ಹೈಕೋರ್ಟ್ ಮೂರೂ ಹಂತಗಳಲ್ಲೂ ದೂರುದಾರರ ಈ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾಗೊಳಿಸಿದ್ದರು.
ಪ್ರಕರಣದ ಟೈಂಲೈನ್ ಹೀಗಿದೆ
- ಅಗಸ್ಟ್ 4, 2018: ಸುಲ್ತಾನ್ಪುರ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ವಿಜಯ್ ಮಿಶ್ರಾ ಅವರಿಂದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು.
- ನವೆಂಬರ್ 27, 2023: ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿದ ಸುಲ್ತಾನ್ಪುರ ವಿಶೇಷ ನ್ಯಾಯಾಲಯ.
- ಫೆಬ್ರವರಿ 20, 2024: ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
- ಅಕ್ಟೋಬರ್ 12, 2026: ಎರಡೂ ಕಡೆಯ ವಾದ-ಪ್ರತಿವಾದಗಳು ಪೂರ್ಣಗೊಂಡು ಅಂತಿಮ ತೀರ್ಪನ್ನು ಅಕ್ಟೋಬರ್ 26ಕ್ಕೆ ಕಾಯ್ದಿರಿಸಿದ ಪೀಠ.
- ಅಕ್ಟೋಬರ್ 26, 2026: ಪ್ರಕರಣದಲ್ಲಿದ್ದ ಎಲ್ಲಾ ಆರೋಪಗಳಿಂದ ರಾಹುಲ್ ಗಾಂಧಿಯವರನ್ನು ಮುಕ್ತಗೊಳಿಸಿ ಖುಲಾಸೆಗೊಳಿಸಿದ ಸುಲ್ತಾನ್ಪುರ ನ್ಯಾಯಾಲಯ.
ಸತ್ಯಕ್ಕೆ ಸಿಕ್ಕ ಜಯ ಎಂದ ಕಾಂಗ್ರೆಸ್
ನ್ಯಾಯಾಲಯದ ಅಂತಿಮ ತೀರ್ಪನ್ನು ಉತ್ತರ ಪ್ರದೇಶ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ನಾಯಕರು ಹರ್ಷದಿಂದ ಸ್ವಾಗತಿಸಿದ್ದಾರೆ. ಸತ್ಯ ಯಾವಾಗಲೂ ಗೆಲ್ಲುತ್ತದೆ, ಈ ಖುಲಾಸೆಯು ರಾಜಕೀಯ ಪ್ರೇರಿತ ಆರೋಪಗಳಿಗೆ ನ್ಯಾಯಾಲಯ ನೀಡಿದ ಸೂಕ್ತ ಉತ್ತರವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಆದೇಶದೊಂದಿಗೆ ಕಳೆದ ಆರು ವರ್ಷಗಳಿಂದ ಕಾಡುತ್ತಿದ್ದ ಪ್ರಮುಖ ರಾಜಕೀಯ ಕಾನೂನು ಹೋರಾಟವೊಂದು ಕೊನೆಯಾದಂತಾಗಿದೆ.







