ಅತ್ತ ಕಾಂಗ್ರೆಸ್ ನಾಯಕನಿಗೆ ಬಿಜೆಪಿ ಶಾಸಕ ಬಹಿರಂಗ ಸ್ವಾಗತ, ಇತ್ತ ಸೋಮಶೇಖರ್ ರೆಡ್ಡಿಗೆ ಕಾಂಗ್ರೆಸ್ ಆಹ್ವಾನ
* ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ
* ರಾಜಕೀಯ ಚಟುವಟಿಕೆಗಳು ಬಿರುಸು
* ಸದ್ದು ಮಾಡುತ್ತಿದೆ ನಾಯಕರ ಪಕ್ಷಾಂತರ ಪರ್ವ
ಬೆಂಗಳೂರು, (ಫೆ.18): ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು, ಆಗಲೇ ರಾಜ್ಯ ರಾಜಕಾರಣದಲ್ಲಿ ರಾಜಕೀಯ(Karnataka Politics) ಚಟುವಟಿಕೆಗಳು ಬಿರುಸುಗೊಂಡಿವೆ. ಅದರಲ್ಲೂ ನಾಯಕರ ಪಕ್ಷಾಂತರ ಪರ್ವ ಜೋರಾಗಿದೆ.
ಹೌದು..ರಾಜಕೀಯವಾಗಿ ಒಂದು ನೆಲೆ ಕಾಣಲು ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಚಿಂತನೆಯಲ್ಲಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಪ್ರಮೋದ್ ಮಧ್ವರಾಜ್ (Pramod Madhwaraj) ಸಹ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಮೋದಿ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುವುದು ಖಚಿತ ಎನ್ನುವ ಸುದ್ದಿ ಹರಿದಾಡುತ್ತಿವೆ.
Karnataka Politics ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್, ಪ್ರಭಾವಿ ಮುಖಂಡರು ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧ
ಇದೀಗ ಖುದ್ದು ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಶಾಸಕ ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರ್ಪಡೆ ಆದರೆ ಸ್ವಾಗತ ಮಾಡುತ್ತೇನೆ ಎಂದು ಶಾಸಕ ರಘುಪತಿ ಭಟ್ ಬಹಿರಂಗವಾಗಿ ಹೇಳಿದ್ದಾರೆ.
ಪ್ರಮೋದ್ ಅವರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಮೋದ್ ಬಿಜೆಪಿಗೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಬಳಿ ಕೇಳಿ ಯಾರನ್ನೂ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಅವರು ಬಿಜೆಪಿ ಸೇರ್ಪಡೆ ಆದರೆ ಸ್ವಾಗತ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಜನಾರ್ಧನ ರೆಡ್ಡಿ ಹೇಳಿದ್ರೆ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಕಾಂಗ್ರೆಸ್ ಸೇರುವಂತೆ ಪಕ್ಷದ ಸದಸ್ಯರು ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ.
ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜೊತೆಗೆ ಮಾತನಾಡುವಾಗ ಸೋಮಶೇಖರ ರೆಡ್ಡಿ ಅವರಿಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್ ರೆಡ್ಡಿ, ಜನಾರ್ಧನರೆಡ್ಡಿ ಹೇಳಿದರೆ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದರೆ ಸೋದರ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಸೇರ್ತಾರಾ? ಇಲ್ಲವೇ ಕಾಂಗ್ರೆಸ್ ಸ್ನೇಹಿತರು ಪಕ್ಷ ಸೇರಲು ಆಹ್ವಾನಿಸಿದಾಗ ಸಂದರ್ಭಕ್ಕೆ ತಕ್ಕಂತೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆಯೇ ಎನ್ನುವುದು ಚರ್ಚೆಗೆ ಕಾರಣವಾಗಿದೆ.
ಎಚ್‌ಡಿಕೆ ಕ್ಷೇತ್ರದಲ್ಲಿ ಬಿಜೆಪಿ ಆಪರೇಷನ್
ಚನ್ನಪಟ್ಟಣದಲ್ಲಿ ತಮ್ಮ ವಿರೋಧಿ ಪಕ್ಷಗಳಿಂದ ಮುಖಂಡರನ್ನು ಬಿಜೆಪಿಗೆ ಸೆಳೆಯಲು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಶತಪ್ರಯತ್ನ ನಡೆಸಿದ್ದಾರೆ.
ಚನ್ನಪಟ್ಟಣದ ಜೆಡಿಎಸ್, ಕಾಂಗ್ರೆಸ್‌ನ ಹಲವು ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಸ್ವತಃ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ತಿಳಿಸಿದ್ದಾರೆ.
ಇದೇ ಫೆ. 21ರಂದು ಸಂಜೆ 6ಕ್ಕೆ ಬೆಂಗಳೂರಿನಲ್ಲಿರುವ ಮಲ್ಲೇಶ್ವರ ಕಚೇರಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು, ಜೆಡಿಎಸ್‌ನ ಇನ್ನಷ್ಟು ಸ್ಥಳೀಯ ಮುಖಂಡರೂ ಅವರೊಟ್ಟಿಗೆ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣದ ಜೆಡಿಎಸ್ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಲಿಂಗೇಶ್‌ಕುಮಾರ್ ಬಿಜೆಪಿ ಸೇರುವುದು ಖಚಿತವಾಗಿದೆ. ಹತ್ತಾರು ವರ್ಷದಿಂದ ಅವರು ಜೆಡಿಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಬಮುಲ್ ನಿರ್ದೇಶಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿದ್ದರು. ಈಚೆಗೆ ತಾಲ್ಲೂಕು ಜೆಡಿಎಸ್ ಘಟಕದಲ್ಲಿ ಜಯಮುತ್ತು ಹಾಗೂ ಲಿಂಗೇಶ್‌ಕುಮಾರ್ ಬಣಗಳ ನಡುವೆ ಸಾಕಷ್ಟು ಜಟಾಪಟಿ ನಡೆಯುತ್ತಲೇ ಇತ್ತು.
ಕಳೆದ ಬಮೂಲ್ ಆಡಳಿತ ಮಂಡಳಿ ಚುನಾವಣೆಯಲ್ಲೂ ಇದು ಬಹಿರಂಗವಾಗಿದ್ದು, ಇಬ್ಬರು ನಾಯಕರೇ ನೇರ ಸ್ಪರ್ಧೆಗೆ ನಿಂತಿದ್ದರು. ಬಳಿಕ ಲಿಂಗೇಶ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯವಿದೆ. ಆದರೆ ಈಗಿನಿಂದಲೇ ಚುನಾವಣೆಗೆ ಬೇಕಾದ ತಯಾರಿಗಳು ನಡೆಯುತ್ತಿರುವುದನ್ನು ಗಮನಿಸಿದರೆ ಚುನಾವಣೆ ವೇಳೆಗೆ ಇನ್ನು ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆಯೋ? ಎಂಬ ಕುತೂಹಲ ಮೂಡಿಸಿದೆ.