ಆಲೂರು ತಾಲ್ಲೂಕಿನಲ್ಲಿ ಬಿಳಿಸುಳಿ ರೋಗದಿಂದ ಜೋಳದ ಬೆಳೆ ಹಾನಿಗೊಳಗಾದ ರೈತರನ್ನು ಆರ್. ಅಶೋಕ್ ಭೇಟಿ ಮಾಡಿ ಸಾಂತ್ವನ ಹೇಳಿದರು. ಕಾಂಗ್ರೆಸ್‌ನ ಸಿಎಂ ಸ್ಥಾನದ ಹಂಚಿಕೆ ವಿಚಾರವನ್ನು 'ಮ್ಯಾಚ್ ಫಿಕ್ಸಿಂಗ್' ಎಂದು ವ್ಯಂಗ್ಯವಾಡಿದರು.

ಹಾಸನ: ಆಲೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ಜೋಳ ಬೆಳೆ ಮೇಲೆ ಬಿಳಿಸುಳಿ ರೋಗ ಆರ್ಭಟಿಸಿ, ಬೃಹತ್ ಮಟ್ಟದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಧೈರ್ಯ ನೀಡಲು ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾರಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಜೋಳದ ಬೆಳೆ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಹಾನಿಯ ಪ್ರಮಾಣ ವಿವರಿಸುತ್ತಾ ರೈತರು, ಬೆಳೆ ಹಾನಿಯಿಂದ ಸಂಪೂರ್ಣ ಕಂಗಾಲಾಗಿದ್ದೇವೆ ಎಂದು ತಮ್ಮ ನೋವನ್ನು ಅಶೋಕ್ ಅವರ ಮುಂದೆ ಹಂಚಿಕೊಂಡರು.

ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ವಿಚಾರ ‘ಮ್ಯಾಚ್ ಫಿಕ್ಸಿಂಗ್’ ಎಂಬ ಆರ್. ಅಶೋಕ್ ವ್ಯಂಗ್ಯ:

ಇನ್ನು ಆಲೂರು ತಾಲ್ಲೂಕಿನ ಧರ್ಮಪುರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆರ್. ಅಶೋಕ್ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಹಂಚಿಕೆ ವಿಚಾರವಾಗಿ ತೀವ್ರ ಟೀಕೆ ಮಾಡಿದ್ದಾರೆ. “ಸಿಎಂ ಸ್ಥಾನ, ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತಗಳೇ ಹೆಚ್ಚು. ಕೆಲವರು ‘ಅಶೋಕ್ ಗಿಳಿ ಶಾಸ್ತ್ರ ಹೇಳ್ತಾರೆ’ ಅಂತ ಆರೋಪಿಸುತ್ತಿದ್ದಾರೆ. ನಾನು ಯಾವ ಗಿಳಿ ಶಾಸ್ತ್ರವನ್ನೂ ಮಾಡುವವನಲ್ಲ. ಕಾಂಗ್ರೆಸ್‌ನ ಏಕಾ ಏಕಿ ನಾನು ಟೀಕೆ ಮಾಡುವವನಲ್ಲ. ನನ್ನ ಶಾಸ್ತ್ರನೇ ನಿಜವಾಗಿ ಹೋಯ್ತಲ್ಲ. ಅವರದೇ ಶಾಸಕರು ರಾಮನಗರದ ಎಂಎಲ್‌ಎ ಹೇಳ್ತಿದ್ದಾರೆ. ನೋಟೀಸ್ ಕೊಟ್ಟ ಮೇಲೂ ಏನ್ ಮಾಡಿಕೊಳ್ತಿರೋ ಮಾಡ್ಕಳ್ಳಿ ಅಂತ ಹೇಳ್ತಿದ್ದಾರೆ ಅವರನ್ನು ಸಸ್ಪೆಂಡ್ ಮಾಡ್ತಾರಾ? ಅಥವಾ ಗುಂಡಿಕ್ಕಿ ಹೊಡಿತಾರಾ?”

ಡಿಕೆಶಿ ಅಭಿಮಾನದಿಂದ ಸಿಎಂ ಆಗಲಿ

ಡಿಕೆ ಶಿವಕುಮಾರ್ ಅವರು, ‘ಅಭಿಮಾನದಿಂದ ಸಿಎಂ ಆಗಲಿ’ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಒಮ್ಮೆ ನೋಟಿಸ್ ಕೊಡುತ್ತಾರೆ, ಇನ್ನೊಮ್ಮೆ ಅಭಿಮಾನ ವ್ಯಕ್ತಪಡಿಸುತ್ತಾರೆ. ಇದರಿಂದ ಸ್ಪಷ್ಟವಾಗುತ್ತೆ, ಇವೆಲ್ಲ ‘ಮ್ಯಾಚ್ ಫಿಕ್ಸಿಂಗ್.’ ಎರಡು ವರ್ಷ ಸಿದ್ದರಾಮಯ್ಯ, ಉಳಿದ ಎರಡು ವರ್ಷ ಶಿವಕುಮಾರ್ ಇಷ್ಟೆಲ್ಲಾ ಮುಂಚೆಯೇ ಫಿಕ್ಸ್ ಮಾಡಿರುವ ರೀತಿಯ ಮಾತುಗಳು Congressನಲ್ಲಿ ನಡೆಯುತ್ತಿವೆ.

ನಾನು ಕಾಂಗ್ರೆಸ್ ನಾಯಕರಿಗೆ ಓಪನ್ ಚಾಲೆಂಜ್ ಕೊಡ್ತಿದ್ದೇನೆ. ಅಂತಿಮ ನಿರ್ಧಾರ ಘೋಷಣೆ ಯಾರಿಗೆ ಮಾಡಲು ಸಾಧ್ಯ? ಅದು ಖರ್ಗೆಯವರು. ಖರ್ಗೆ ಅವರ ಬಾಯಿಂದ ಹೇಳಿಸಿ ‘ಸಿದ್ದರಾಮಯ್ಯ 5 ವರ್ಷ ಸಿಎಂ ಆಗ್ತಾರೆ’ ಅಂತ ಘೋಷಣೆ ಮಾಡಿಸಿ. ಆಗ ವಿಷಯ ಮುಗಿದಂತೆ. ನಾವ್ ಕವಡೆಶಾಸ್ರ್ತನೂ ಇಲ್ಲ, ಗಿಳಿ ಶಾಸ್ತ್ರ , ಎಲೆ ಶಾಸ್ತ್ರ ನೂ ಇಲ್ಲ. ಕಾಂಗ್ರೆಸ್‌ನ ಕರ್ನಾಟಕ ಅಧ್ಯಕ್ಷರು ಹೇಳಲಿ ‘ನಾನು ಸಿಎಂ ಆಗಲ್ಲ’ ಅಂತ. ಅವರು ಘೋಷಿಸಿದರೆ, ನಾನೆ ನಾಳೆಯೇ ರಾಜಕೀಯ ಬಿಟ್ಟು ಬಿಡ್ತೀನಿ,” ಎಂದು ಅಶೋಕ್ ಹೇಳಿದರು.

“ಮಾಧ್ಯಮವು ದೇಶದ ನಾಲ್ಕನೇ ಸ್ಥಂಭ ಎಂದು ಹೇಳುತ್ತಾರೆ. ಅದನ್ನು ಸುಳ್ಳು ಅಂತ ಹೇಳುವುದು ಕಾಂಗ್ರೆಸ್‌ನ ದುರಾಸೆ. ಜನತೆಯ ಮುಂದೆ ಸತ್ಯವನ್ನು ಒಗೆಯುವುದು ಮಾಧ್ಯಮದ ಹೊಣೆ ಎಂದು ಕೊನೆಯಲ್ಲಿ ಅಶೋಕ್ ಹೇಳಿದರು.