ಅಧಿವೇಶನದಲ್ಲಿ ನಾವು ರೈತರಿಗೋಸ್ಕರ ಹೋರಾಟ ಮಾಡುತ್ತೇವೆ. ಕಳೆದ 2 ವರ್ಷದಲ್ಲಿ ರಾಜ್ಯದಲ್ಲಿ 400 ರೈತರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸರ್ಕಾರದಿಂದ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರ್‌.ಅಶೋಕ್‌ ಹೇಳಿದ್ದಾರೆ.

ಬೆಳಗಾವಿ (ಡಿ.09): ಅಧಿವೇಶನದಲ್ಲಿ ನಾವು ರೈತರಿಗೋಸ್ಕರ ಹೋರಾಟ ಮಾಡುತ್ತೇವೆ. ಕಳೆದ 2 ವರ್ಷದಲ್ಲಿ ರಾಜ್ಯದಲ್ಲಿ 400 ರೈತರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸರ್ಕಾರದಿಂದ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಾರೆ. ನಗರದಲ್ಲಿ ಡಿ.9ರಂದು ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶದ ಸಿದ್ಧತಾ ಕಾರ್ಯಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜತೆಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎರಡುವರೆ ವರ್ಷ ಕಾದಿದ್ದೇವೆ. ಕಾಂಗ್ರೆಸ್‌ ಸರ್ಕಾರ ಹನಿಮೂನ್ ಅವಧಿ ಮುಗಿದಿದೆ. ಯಾವುದೇ ಅಭಿವೃದ್ಧಿ ಮಾಡಿಲ್ಲ.

ಖಜಾನೆ ಖಾಲಿ ಖಾಲಿ ಆಗಿದ್ದು, ಕಾಂಗ್ರೆಸ್‌ನವರು ಜಾಲಿ ಜಾಲಿಯಾಗಿದ್ದಾರೆ. ಅವರಿಗೆ ಅಧಿಕಾರದ ಮದ ಏರಿದೆ. ಹಾಗಾಗಿ ಬನ್ನಿ ರೈತರ ಪರವಾಗಿ ನಿಲ್ಲಿ, ಇಲ್ಲವೇ ಜಾಗ ಬಿಟ್ಟು ಕೊಡಿ ಎಂದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು. ಉತ್ತರ ಕರ್ನಾಟಕ ಚರ್ಚೆಗಳ ಬಗ್ಗೆ ನಾವು ಈಗಾಗಲೇ ನಿಲುವಳಿ ಸೂಚನೆ ಕೊಟ್ಟಿದ್ದೇವೆ. ಕಾಂಗ್ರೆಸ್‌ನವರು ನಮ್ಮ ಒತ್ತಾಯದ ಮೆರೆಗೆ ಪ್ಲಡ್ ಪರಿಹಾರದ ಚರ್ಚೆಯ ಬಗ್ಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ಸದನದಲ್ಲಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಅಭಯ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಇದ್ದರು.

ಸಿಎಂ- ಅಶೋಕ್‌ ನಾಟಿಕೋಳಿ ‘ಮಾತು’: ‘ನಾಟಿ ಕೋಳಿ ತಿನ್ನಬೇಕಯ್ಯ, ಏನೂ ಆಗಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರಿಗೆ ಸಲಹೆ ನೀಡಿದ ಪ್ರಸಂಗ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯಿತು. ವಿಧಾನಸಭೆ ಸಭಾಧ್ಯಕ್ಷರ ಕೊಠಡಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಮುಖಾಮುಖಿ ಆದರು. ಈ ವೇಳೆ ಅಶೋಕ್‌ ಹೆಗಲಮೇಲೆ ಕೈ ಹಾಕಿದ ಸಿದ್ದರಾಮಯ್ಯ ಅವರು, ‘ಯಾಕಯ್ಯ ಸಣ್ಣಗಾಗಿದ್ದೀಯಾ’ ಎಂದು ಪ್ರಶ್ನಿಸಿದರು. ಆಗ ಅಶೋಕ್‌ ಅವರು, ‘ಇಲ್ಲ ಸಾರ್, ನಾನು ನಿಮ್ಮ ರೀತಿ ನಾಟಿಕೋಳಿ ತಿನ್ನೋದಿಲ್ಲ. ಈಗ ಅದನ್ನ ಬಿಟ್ಟಿದ್ದೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾಟಿಕೋಳಿ ತಿನ್ನಬೇಕಯ್ಯ, ಏನು ಆಗೋದಿಲ್ಲ’ ಎಂದು ಸಲಹೆ ನೀಡಿದರು. ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ನಾಟಿಕೋಳಿ ಸಾಂಬಾರು ಸವಿದಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಅಶೋಕ್‌ ಅವರು, ‘ಹನುಮ ಜಯಂತಿ ದಿನ ನಾಟಿ ಕೋಳಿ ತಿಂದಿದ್ದಾರೆ. ಬ್ರೇಕ್‌ ಫಾಸ್ಟ್‌ ಹೆಸರಿನಲ್ಲಿ ನಾಟಿ ಕೋಳಿ ಮರ್ಡರ್‌ ಆಗಿದೆ’ ಎಂದು ಕಿಚಾಯಿಸಿದ್ದರು.

ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ?: ಬಿಜೆಪಿಗೆ ಸಿಎಂ

ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರ ಕೈಕುಲುಕಿ ಶುಭಾಶಯ ಕೋರಿದರು. ಈ ವೇಳೆ ಸಿದ್ದರಾಮಯ್ಯ ಅವರು, ‘ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ?’ ಎಂದು ನಗುತ್ತಲೇ ಕಿಚಾಯಿಸಿದರು. ಇದಕ್ಕೆ ಸುನಿಲ್‌ಕುಮಾರ್‌ ಹಾಗೂ ಆರ್‌. ಅಶೋಕ್‌ ನಕ್ಕು ಸುಮ್ಮನಾದರು.