ಕೋರ್ ಕಮಿಟಿ ಸಭೆ ಅಂತ್ಯ: ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದನ್ನು ಬಿಚ್ಚಿಟ್ಟ ಸಚಿವ
* ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು
*ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯ
* ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ತಿಳಿಸಿದ ಸಚಿವ ಅಶೋಕ್
ಬೆಂಗಳೂರು, (ಜೂನ್.18): ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯವಾಗಿದ್ದು, ಸಭೆಯಲ್ಲಿ ಏನೆಲ್ಲಾ ಚರ್ಚೆಗಳಾದವು ಎನ್ನುವುದನ್ನು ಸಚಿವ ಆರ್. ಅಶೋಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮುಗಿದ ಬಳಿಕಸ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ರಾಜ್ಯ ರಾಜಕೀಯ ಬೆಳವಣಿಗೆಯ ಕುರಿತಂತೆ ಚರ್ಚೆ ನಡೆಸಲಾಯಿತು. ಅದರ ಹೊರತಾಗಿ ಬೇರಾವುದೇ ಚರ್ಚೆ ನಡೆಸಿಲ್ಲ ಎಂದರು.
ಸರ್ಕಾರ, ನಾಯಕತ್ವದ ವಿರುದ್ಧ ಹೇಳಿಕೆ ನೀಡದಂತೆ ನಾಲ್ವರಿಗೆ ಬಿಜೆಪಿ ನೋಟಿಸ್
ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿದ್ಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪ ನಮ್ಮ ನಾಯಕರು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ಪಕ್ಷ, ಸರ್ಕಾರದ ವಿರುದ್ಧ ಮಾತನಾಡಿದ್ರೆ ಮುಲಾಜಿಲ್ಲದೇ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇನ್ನೂ ಸಚಿವ ಸಂಪುಟ ಪುನರಾಚನೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಪುಟ ಪುನರಾಚನೆಯ ಬಗ್ಗೆಯೂ ಚರ್ಚೆ ನಡೆದಿಲ್ಲ. ಪಕ್ಷದ ಶಿಸ್ತು, ನಡೆತೆಯ ಬಗ್ಗೆ ಚರ್ಚೆಯಾಗಿದೆ. ಇನ್ಮುಂದೆ ಪಕ್ಷ, ನಾಯಕರ ವಿರುದ್ಧ ಮಾತನಾಡುವವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳೋದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.