ಬೆಂಗಳೂರು [ಮಾ.03]:  ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾಡಿರುವ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಈ ಕುರಿತು ಸರ್ಕಾರ ಉತ್ತರ ಕೊಡಬೇಕು, ನೀಡಿರುವ ಹೇಳಿಕೆಗೆ ಯತ್ನಾಳ್‌ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಸಭಾಪತಿಗಳ ಮುಂದೆ ಧರಣಿ ನಡೆಸಿದ ಪರಿಣಾಮ ಸಂತಾಪ ಸೂಚನೆ ಕಲಾಪ ಹೊರತುಪಡಿಸಿ ಯಾವುದೇ ಕಲಾಪ ನಡೆಯಲಿಲ್ಲ.

ಸಂತಾಪ ಸೂಚನೆ ನಿರ್ಣಯದ ನಂತರ ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು, ಯತ್ನಾಳ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು, ಸರ್ಕಾರ ಈ ಬಗ್ಗೆ ಉತ್ತರಿಸಬೇಕು ಎಂದು ಬಿಗಿ ಪಟ್ಟು ಹಿಡಿದು ಸಭಾಪತಿಗಳ ಮುಂದೆ ಧರಣಿ ನಡೆಸಿದರು.ಈ ಬಗ್ಗೆ ಸಂಧಾನ ಮಾತುಕತೆಗಳು ನಡೆದರೂ ಪ್ರತಿಪಕ್ಷಗಳು ತಮ್ಮ ನಿಲುವು ಸಡಿಲಿಸದೇ ಧರಣಿ ನಡೆಸಿದ ಪರಿಣಾಮ ದಿನವಿಡೀ ಯಾವುದೇ ಕಲಾಪ ನಡೆಯಲಿಲ್ಲ. ಕಲಾಪ ನಡೆಸಲು ಸಹಕಾರ ಸಿಗದ ಕಾರಣ ಸಭಾಪತಿಗಳು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ಕಲಾಪದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸದನ ಸಂತಾಪ ವ್ಯಕ್ತಪಡಿಸಿದ ನಂತರ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಎಚ್‌.ಎಸ್‌. ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ ಮಾಡಿರುವ ಟೀಕೆ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿ ಅಷ್ಟೇ ಅಲ್ಲ ಸ್ವಾತಂತ್ರ್ಯ ಹೋರಾಟದ ಫಲವಾಗಿ ಪಡೆದ ಸಂವಿಧಾನಕ್ಕೂ ಅವಮಾನ ಮಾಡಿದಂತಾಗಿದೆ. ಬ್ರಿಟಿಷರ ಲಾಠಿ, ಬೂಟಿನ ರುಚಿ ಕಂಡವರು, ಗುಂಡಿಗೆ ಎದೆಯೊಡ್ಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಯತ್ನಾಳ ಅವರ ಈ ವರ್ತನೆ ಸರಿಯಲ್ಲ ಎಂದರು.

ಆಗ ಮಧ್ಯ ಪ್ರವೇಶಿಸಿದ ಸಭಾನಾಯಕ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷಗಳ ನಾಯಕರು ಸಾವರ್ಕರ್‌ ಅವರ ಬಗ್ಗೆ ಮಾತನಾಡುತ್ತಿದ್ದಾರೆಯೇ? ಯಾರ ಬಗ್ಗೆ ಮಾತನಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಂತೆ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಒಟ್ಟಿಗೆ ಎದ್ದು ನಿಂತು, ಯತ್ನಾಳ ಅವರ ಹೇಳಿಕೆ ಇಡೀ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ಹೇಳತೊಡಗಿದರು. ಮತ್ತೆ ಮಾತು ಮುಂದುವರೆಸಿದ ಎಸ್‌.ಆರ್‌. ಪಾಟೀಲ್‌, ಯತ್ನಾಳ ಹೇಳಿಕೆಯನ್ನು ಯಾವ ಸಚಿವರೂ ಖಂಡಿಸಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಎಂದಾಗ ಬಿಜೆಪಿಯ ನಾರಾಯಣಸ್ವಾಮಿ, ಆಯನೂರು ಮಂಜುನಾಥ್‌ ಮುಂತಾದವರು ಸಾರ್ವಕರ್‌ ಅವರನ್ನು ಹೇಡಿ ಎಂದು ದೊರೆಸ್ವಾಮಿ ಹೇಳಬಹುದೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌.ಆರ್‌. ಪಾಟೀಲ್‌, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾರೇ ಟೀಕೆ ಮಾಡಿದರೂ ಅದು ತಪ್ಪೇ. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದು, ದೇಶಕ್ಕೆ ಅಪಮಾನ ಮಾಡುವುದು ಒಂದೇ ಎಂದಾಗ, ಪ್ರತಿಪಕ್ಷಗಳ ಸದಸ್ಯರು ಶೇಮ್‌, ಶೇಮ್‌ ಎಂದು ಕೂಗಿದರು.

ಶಾಸಕರಿಗೆ ವಿಪ್‌ ಜಾರಿಗೊಳಿಸಿದ ಕಾಂಗ್ರೆಸ್‌, ತೀವ್ರ ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ನಡೆ...

ಆಗ ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿರುವ ವಿಷಯಕ್ಕೆ ಸರ್ಕಾರದಿಂದ ಉತ್ತರ ಕೊಡಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಎಸ್‌.ಆರ್‌. ಪಾಟೀಲ್‌ ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿ, ಯತ್ನಾಳ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಸದಸ್ಯರೊಂದಿಗೆ ಸಭಾಪತಿಗಳ ಮುಂದೆ ಬಂದು ಪ್ರತಿಭಟನೆ ಆರಂಭಿಸಿದರು.

ಈ ವೇಳೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದವರನ್ನು ನೀವು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದರೆ, ಬಿಜೆಪಿಯ ನಾರಾಯಣಸ್ವಾಮಿ, ಆಯನೂರು ಮಂಜುನಾಥ್‌ ಮುಂತಾದವರು, ದೊರೆಸ್ವಾಮಿ ಅವರು ಅಮೂಲ್ಯ ಲಿಯೋನಾ ಜೊತೆ ಇರುವ ಫೋಟೋ ಪ್ರದರ್ಶಿಸಿದರು. ಆಗ ಸಭಾಪತಿಗಳು ಕಲಾಪವನ್ನು ಒಂದು ಗಂಟೆ ಮುಂದೂಡಿದರು.

ಪುನಃ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಸಭಾಪತಿಗಳ ಮುಂದೆ ಬಂದು ಧರಣಿ ಆರಂಭಿಸಿದಾಗಲೂ ವಿಪಕ್ಷ ಸದಸ್ಯರು ಸದನದ ಭಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಆಸನಕ್ಕೆ ಹೋಗಬೇಕೆಂದು ಸಭಾಪತಿಗಳ ಮನವಿಗೆ ಸ್ಪಂದಿಸದೆ ಧರಣಿ ಮುಂದುವರೆಸಿದಾಗ ಕಲಾಪವನ್ನು ನಾಲ್ಕು ಗಂಟೆವರೆಗೆ ಮುಂದೂಡಿದರು. ಪುನಃ ಕಲಾಪ ಆರಂಭವಾದ ಮೇಲೂ ಪ್ರತಿಪಕ್ಷಗಳ ಸದಸ್ಯರು ಸಭಾಪತಿಗಳ ಮುಂದೆ ಧರಣಿ ಮುಂದುವರೆಸಿದಾಗ, ಸಭಾಪತಿಗಳು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ಎರಡನೇ ಬಾರಿ ಮುಂದೂಡಿಕೆ:

ಪುನಃ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಸಭಾಪತಿಗಳ ಮುಂದೆ ಬಂದು ಧರಣಿ ಆರಂಭಿಸಿದಾಗ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ನೋಟಿಸ್‌ ಕೊಟ್ಟು ಚರ್ಚೆ ಮಾಡಲಿ. ಅವರು ಕೇಳುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಿದೆ. ಎಸ್‌.ಆರ್‌.ಪಾಟೀಲ್‌ ಈ ಹಿಂದೆ ಸಭಾನಾಯಕರಾಗಿದ್ದಾಗ, ಸಭಾಧ್ಯಕ್ಷರ ಅನುಮತಿ ಪಡೆದು ಚರ್ಚಿಸಬೇಕು ಎಂದು ಹೇಳಿದ್ದೀರಿ, ಈಗ ಅನುಮತಿ ಪಡೆಯದೇ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದ ಕೆ.ಎಸ್‌.ಈಶ್ವರಪ್ಪ ಅವರು ಸದನದ ನಿಯಮಾವಳಿ ಪುಸ್ತಕ ಬಿಸಾಕುವುದಾಗಿ ಹೇಳಿದ್ದರು. ನಾನು ಆ ರೀತಿ ಹೇಳುವುದಿಲ್ಲ, ನಿಯಮದ ಪ್ರಕಾರ ನಡೆದುಕೊಳ್ಳುತ್ತೇನೆ, ಎಲ್ಲದಕ್ಕಿಂತ ಹೆಚ್ಚಾಗಿ ಪೀಠದ ಆದೇಶಕ್ಕೆ ಬದ್ಧನಾಗಿರುತ್ತೇನೆ ಎಂದು ಉತ್ತರಿಸಿದರು.

ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಆಯನೂರು ಮಂಜುನಾಥ್‌, ಸದನದಲ್ಲಿ ನಿಯಮಾವಳಿ ಪಾಲನೆ ಆಗುತ್ತಿಲ್ಲ. ನೋಟಿಸ್‌ ನೀಡದೇ ವಿಷಯ ಪ್ರಸ್ತಾಪಿಸಲಾಗಿದೆ. ಸದನದ ಸದಸ್ಯರಲ್ಲದವರು, ಸದನದ ಹೊರಗಡೆ ಮಾತನಾಡಿದ್ದಕ್ಕೆ ಇಲ್ಲಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಲಾಗುತ್ತಿದೆ. ಇದು ಕೆಟ್ಟಪರಂಪರೆಗೆ ಮೇಲ್ಪಂಕ್ತಿ ಹಾಕಿದಂತಾಗುತ್ತದೆ ಎಂದರು. ಚರ್ಚೆಗೆ ಚೌಕಟ್ಟು ಹಾಕಬೇಕು ಎಂದರು. ತಮ್ಮ ಆಸನಕ್ಕೆ ಹೋಗಬೇಕೆಂದು ಸಭಾಪತಿಗಳ ಮನವಿಗೆ ಸ್ಪಂದಿಸದೆ ಧರಣಿ ಮುಂದುವರೆಸಿದಾಗ ಕಲಾಪವನ್ನು ನಾಲ್ಕು ಗಂಟೆವರೆಗೆ ಮುಂದೂಡಿದರು. ಪುನಃ ಕಲಾಪ ಆರಂಭವಾದ ಮೇಲೂ ಪ್ರತಿಪಕ್ಷಗಳ ಸದಸ್ಯರು ಸಭಾಪತಿಗಳ ಮುಂದೆ ಧರಣಿ ಮುಂದುವರೆಸಿದಾಗ, ಸಭಾಪತಿಗಳು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.