ಹಾಸನ ಜೆಡಿಎಸ್ ಟಿಕೆಟ್‌ಗೆ ಫೈಟ್: ಭವಾನಿ ಬೆಂಬಲಿಗರ ಬೃಹತ್ ಪ್ರತಿಭಟನೆ
ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದು ಸಭೆ ಮಾಡಿತಲ್ಲದೇ ಪ್ರಮುಖ ರಸ್ತೆಯಲ್ಲಿ ಭವಾನಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿ ಟಿಕೆಟ್ ನೀಡುವಂತೆ ಆಗ್ರಹಿಸಿದೆ.
ಹಾಸನ(ಫೆ.28): ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಅನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೇ ನೀಡಬೇಕೆಂದು ವರಿಷ್ಠರನ್ನು ಒತ್ತಾಯಿಸುವ ಸಲುವಾಗಿ ಸೋಮವಾರ ಅವರ ಬೆಂಬಲಿಗರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಹಾಸನದ ಟಿಕೆಟ್ ಆಕಾಂಕ್ಷಿ ಎಚ್.ಪಿ.ಸ್ವರೂಪ್ ಪರ ಕಾರ್ಯಕರ್ತರು ಭಾನುವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ಮಧ್ಯೆ ಕಾದು ನಿಂತು ಚಿಕ್ಕಮಗಳೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅಡ್ಡಗಟ್ಟಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಇದಾದ ಮರುದಿನವೇ ಮತ್ತೊಂದು ಗುಂಪು ನಗರದ ಸಂಸದರ ನಿವಾಸದ ಆವರಣದಲ್ಲಿ ಶಾಮಿಯಾನ ಹಾಕಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದು ಸಭೆ ಮಾಡಿತಲ್ಲದೇ ಪ್ರಮುಖ ರಸ್ತೆಯಲ್ಲಿ ಭವಾನಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿ ಟಿಕೆಟ್ ನೀಡುವಂತೆ ಆಗ್ರಹಿಸಿದೆ.
ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ಗೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ?
ಇದೇ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಮುಖಂಡರು, ಹಾಸನ ಟಿಕೆಟ್ ವಿಚಾರವಾಗಿ ವರಿಷ್ಠರಲ್ಲಿ ಗೊಂದಲವಿದೆ. ಸ್ವಾಭಿಮಾನಿ ಎಲ್ಲಾ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿ ಸಂಸದರ ಮನೆ ಮುಂದೆ ನಮ್ಮ ಬೇಡಿಕೆಗಳನ್ನು ಇಟ್ಟು ಮಾಧ್ಯಮದ ಮೂಲಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಅರ್ಪಿಸುತ್ತಿದ್ದೇವೆ ಎಂದರು.
ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಏಳು ಸ್ಥಾನ ಬರಬೇಕಾಗಿತ್ತು. ಆರು ಸ್ಥಾನ ಗಳಿಸಲು ಮಾತ್ರ ಸಾಧ್ಯವಾಯಿತು. ನಮ್ಮ ಸ್ವಯಂ ಅಪರಾಧದಿಂದ ಹಾಸನ ಕ್ಷೇತ್ರವನ್ನು ಒಬ್ಬ ಭ್ರಷ್ಟಶಾಸಕನಿಗೆ ಅರ್ಪಿಸಿದ್ದೇವೆ. ಮುಂದೆ ನಡೆಯುವ ಚುನಾವಣೆಯಲ್ಲಿ ಭ್ರಷ್ಟಶಾಸಕನನ್ನು ಕಳುಹಿಸಬೇಕಾದರೇ ಈ ಬಾರಿ ಭವಾನಿ ರೇವಣ್ಣ ಅಥವಾ ರೇವಣ್ಣ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಸಾಧ್ಯ. ಈ ಬಾರಿ ಹಾಸನ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ಕಸಿಯಲು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು. ಈ ನಿಟ್ಟಿನಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲೇಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
2-3 ದಿನದಲ್ಲಿ ಹಾಸನ ಟಿಕೆಟ್ ಕಗ್ಗಂಟು ಇತ್ಯರ್ಥ: ಎಚ್.ಡಿ.ಕುಮಾರಸ್ವಾಮಿ
ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಅವರಿಗೆ 6 ಬಾರಿ ಜೆಡಿಎಸ್‌ನಿಂದ ಟಿಕೆಟ್ ನೀಡಿದ್ದು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಅವರ ಸಹೋದರ ಎಚ್.ಎಸ್. ಅನಿಲ್ ಕುಮಾರ್ 5 ವರ್ಷ ನಗರಸಭೆ ಸದಸ್ಯರಾಗಿ, 30 ತಿಂಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಎಚ್.ಪಿ. ಸ್ವರೂಪ್ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಈಗ ಸಂಜೀವಿನಿ ಆಸ್ಪತ್ರೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಸ್ಥಾನಮಾನ ಅನುಭವಿಸಿರುವ ಇವರಿಗೆ ಈಗಲೇ ಏತಕ್ಕೆ ಆತುರ. ಈ ನಿಟ್ಟಿನಲ್ಲಿ ಭವಾನಿಯವರು ಹಿರಿಯರು. ಹಾಗಾಗಿ ಭವಾನಿ ರೇವಣ್ಣನವರಿಗೆ ಟಿಕೆಟ್ ಕೊಡಲೇಬೇಕೆಂದು ಇದೆ ವೇಳೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮುಖಂಡರಾದ ಗಿರೀಶ್ ಚನ್ನವೀರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಕಾರ್ಲೆ ಇಂದ್ರೇಶ್, ನಗರಸಭೆ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಸದಸ್ಯ ಕ್ರಾಂತಿ ಸಿ. ಪ್ರಸಾದ್, ಸಯ್ಯದ್ ಅಕ್ಬರ್, ಬಿದರಿಕೆರೆ ಜಯರಾಮ್, ಸ್ವಾಮಿಗೌಡ, ಪ್ರೇಮಮ್ಮ, ಇತರರು ಉಪಸ್ಥಿತರಿದ್ದರು.