ಸಮಸ್ಯೆಗಳ ಆಗರವಾಗಿರುವ ಮಳವಳ್ಳಿ ಪಟ್ಟಣ: ನೂತನ ಶಾಸಕ ನರೇಂದ್ರಸ್ವಾಮಿಗೆ ಸವಾಲು
ಮಳವಳ್ಳಿ ಪಟ್ಟಣ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದೆ. ಹಳೆಯ ಹಾಗೂ ಹೊಸ ಬಡಾವಣೆಗಳಲ್ಲಿ ಎದುರಾಗುತ್ತಿರುವ ಹಲವು ಸಮಸ್ಯೆಗಳನ್ನು ನಿವಾರಿಸಿ, ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಸವಾಲು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಎದುರಾಗಿದೆ.
ಸಿ.ಸಿದ್ದರಾಜು ಮಾದಹಳ್ಳಿ
ಮಳವಳ್ಳಿ (ಮೇ.20): ಮಳವಳ್ಳಿ ಪಟ್ಟಣ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದೆ. ಹಳೆಯ ಹಾಗೂ ಹೊಸ ಬಡಾವಣೆಗಳಲ್ಲಿ ಎದುರಾಗುತ್ತಿರುವ ಹಲವು ಸಮಸ್ಯೆಗಳನ್ನು ನಿವಾರಿಸಿ, ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಸವಾಲು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಎದುರಾಗಿದೆ. ಪುರಸಭೆಯನ್ನು ನಗರಸಭೆಯಾಗಿ ಪರಿವರ್ತನೆ, ಪಾರ್ಕ್ಗಳ ಅಭಿವೃದ್ಧಿ, ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಮೂಲ ಸೌಲಭ್ಯ ಕಲ್ಪಿಸುವುದು, ಸರ್ಕಾರಿ ಕಚೇರಿಗಳಿಗೆ ಸಿಬ್ಬಂದಿಗಳ ಭರ್ತಿ, ಮಾರುಕಟ್ಟೆ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಪರಿಹಾರ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಹೀಗೆ ಹತ್ತಾರು ಸಮಸ್ಯೆಗಳನ್ನು ಪಟ್ಟಣ ಎದುರಿಸುತ್ತಿದೆ.
ನಗರಸಭೆಯಾಗಿ ಮುಂಬಡ್ತಿ ಸಿಗಬೇಕಿದೆ: 1930ರಲ್ಲಿ ಜಾರಿಗೆ ಬಂದ ಮಳವಳ್ಳಿ ಪುರಸಭೆ 94 ವರ್ಷವಾದರೂ ಇಂದಿಗೂ ನಗರಸಭೆಯಾಗಿ ಮುಂಬಡ್ತಿ ಸಿಕ್ಕಿಲ್ಲ. ಜನಸಂಖ್ಯೆ ಮತ್ತು ಪಟ್ಟಣ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದರೂ ನಗರಸಭೆಯಾಗಿ ಮಾರ್ಪಾಡು ಮಾಡದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅಭಿವೃದ್ದಿ ಎಂಬುವುದು ಮರೀಚಿಕೆಯಾಗಿದೆ. ಪಟ್ಟಣದ ಸುತ್ತಮುತ್ತಲ ಗ್ರಾಮಗಳಾದ ಶೆಟ್ಟಹಳ್ಳಿ, ರಾಗಿಬೊಮ್ಮನಹಳ್ಳಿ, ಹುಚ್ಚನದೊಡ್ಡಿ, ಮಾಗನೂರು, ಅಂಚೇದೊಡ್ಡಿ, ಕ್ಯಾತೇಗೌಡನದೊಡ್ಡಿ, ನಿಡಘಟ್ಟ, ತಂಬಡಹಳ್ಳಿ, ಭೂಗತಹಳ್ಳಿ ಸೇರಿದಂತೆ ಹಲವು ಗ್ರಾಮಗಳನ್ನು ಒಳಪಡಿಸಿಕೊಂಡು ನಗರಸಭೆಯನ್ನಾಗಿ ಮಾಡಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ.
ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಹಿಂದುಳಿದವರಿಗೆ ಅವಕಾಶ ಸಿಕ್ಕಿಲ್ಲ: ಆನಂದ್ ಆಸ್ನೋಟಿಕರ್
ಪಾರ್ಕ್ಗಳು ಅಭಿವೃದ್ಧಿಯಾಗಬೇಕು: ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಪಟ್ಟಣದ ದೊಡ್ಡಕೆರೆ ಸುತ್ತಲು ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನವನ್ನು ಪಿ.ಎಂ.ನರೇಂದ್ರಸ್ವಾಮಿ ಅಧಿಕಾರದಲ್ಲಿದ್ದಾಗ ನಿರ್ಮಿಸಲಾಗಿತ್ತು. ಬದಲಾದ ಕ್ಷೇತ್ರದ ರಾಜಕೀಯ ಬೆಳವಣಿಗೆಯಿಂದಾಗಿ ಕಳೆದ ಐದು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೇ ಉದ್ಯಾನವನ ಸೊರಗಿದೆ. ಇದರಿಂದ ವಾಯುವಿಹಾರಕ್ಕೆ ಬರುವ ಜನರಿಗೆ ನಿರಾಸೆ ಮೂಡಿಸಿದೆ. ಮತ್ತೆ ನರೇಂದ್ರಸ್ವಾಮಿ ಶಾಸಕರಾಗಿರುವುದರಿಂದ ಉದ್ಯಾನವನ ಅಭಿವೃದ್ಧಿ, ನಿರ್ವಹಣೆಗೆ ಆದ್ಯತೆ ನೀಡಬೇಕಿದೆ. ಪಟ್ಟಣದ ಎನ್‌ಇಎಸ್ ಬಡಾವಣೆ ಸೇರಿದಂತೆ ಹಲವು ಭಾಗಗಳಲ್ಲಿ ಪಾರ್ಕ್ಗಳಿವೆ. ಇವುಗಳ ಸರಿಯಾದ ನಿರ್ವಹಣೆ ಇಲ್ಲದೇ ಗಿಡಗಂಟೆ ಬೆಳೆದು ವಿಷಜಂತುಗಳ ವಾಸ ಸ್ಥಳವಾಗಿದೆ. ಗಿಡಗಂಟೆಗಳನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡುವ ಮೂಲಕ ಮೂಲಕ ಸೌಲಭ್ಯಗಳನ್ನು ಕಲ್ಪಿಸಿದರೆ ಸ್ಥಳೀಯ ನಿವಾಸಿಗಳು, ವಯೋವೃದ್ದರಿಗೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮುಗಿಯದ ಕುಡಿಯುವ ನೀರಿನ ಕಾಮಗಾರಿ: ಪಟ್ಟಣದ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಯಡಿಯಲ್ಲಿ 70 ಕೋಟಿ ಅನುದಾನ ತಂದು 24*7 ಕುಡಿಯುವ ನೀರಿನ ಯೋಜನೆಯನ್ನು ತರಲಾಗಿತ್ತು. 2017ರಲ್ಲಿ ಪ್ರಾರಂಭವಾದ ಕಾಮಗಾರಿ ಸುಮಾರು 6 ವರ್ಷ ಕಳೆದರೂ ಇಂದಿಗೂ ಮುಗಿದಿಲ್ಲ. ಆದರೂ ಪುರಸಭೆಗೆ ಕಾಮಗಾರಿ ಹಸ್ತಾಂತರ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿ ಪಿ.ಎಂ.ನರೇಂದ್ರಸ್ವಾಮಿ ಅವರ ಮೇಲಿದೆ.
ಹೊಸ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ: ಮಳವಳ್ಳಿ ಪಟ್ಟಣ ವಿಸ್ತಾರಗೊಳ್ಳುತ್ತಿದ್ದರೂ ಸುತ್ತಮುತ್ತ ನಿರ್ಮಾಣಗೊಳ್ಳುತ್ತಿರುವ ಹೊಸ ಬಡಾವಣೆಗಳಿಗೆ ರಸ್ತೆ, ಚರಂಡಿ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಪುರಸಭೆಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈಗ ಬರುತ್ತಿರುವ ಪುರಸಭೆ ಆದಾಯದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನೂತನ ಶಾಸಕರು ವಿಶೇಷ ಅನುದಾನವನ್ನು ತಂದು ಹೊಸ ಬಡಾವಣೆಗಳಿಗೆ ಕಾಯಕಲ್ಪ ಕಲ್ಪಿಸಬೇಕಿದೆ. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗ 33 ಎಕರೆಯಲ್ಲಿ ನಿವೇಶನ ರಹಿತರಿಗೆ 2016ರಲ್ಲಿ ಪಿ.ಎಂ.ನರೇಂದ್ರಸ್ವಾಮಿ ನಿವೇಶನವನ್ನು ಹಂಚಲು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಈ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಶಾಸಕರು ಆದಷ್ಟುಬೇಗ ಸಮಸ್ಯೆ ಬಗೆ ಹರಿಸಿ ಬಡವರಿಗೆ ನಿವೇಶನ ಹಂಚಲು ಮುಂದಾಗಬೇಕಿದೆ.
ಸಿಬ್ಬಂದಿಗಳ ಭರ್ತಿ, ಮಾರುಕಟ್ಟೆಅಭಿವೃದ್ಧಿ ಅಗತ್ಯ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳು ಇಲ್ಲದೇ ಸಾರ್ವಜನಿಕರ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಸಿ ರೈತರು, ಜನ ಸಾಮಾನ್ಯರ ಕೆಲಸಗಳು ಸುಗಮವಾಗಿ ನಡೆಯುವಂತೆ ಮಾಡಬೇಕಿದೆ. ಮಳವಳ್ಳಿ ಕೃಷಿ ಮಾರುಕಟ್ಟೆಯನ್ನು ಮದ್ದೂರಿನಿಂದ ಪ್ರತ್ಯೇಕಿಸಿ ಕೊಟ್ಯಾಂತರ ರು. ಅನುದಾನದಲ್ಲಿ ಅಭಿವೃದ್ದಿ ಪಡಿಸಲಾಗಿತ್ತು. ಈಗ ಮಾರುಕಟ್ಟೆಉಪಯೋಗಕ್ಕೆ ಬಾರದಂತಾಗಿದೆ. ಮೇಕೆ ಸಂತೆಗಳ ಸೌಲಭ್ಯಕ್ಕಾಗಿ ಹಾಕಲಾಗಿರುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ, ಕಳೆದ ಐದು ವರ್ಷದಿಂದ ಎಪಿಎಂಸಿ ಆಡಳಿತ ಮಂಡಳಿ ರಚನೆಯಾಗದೇ ಇಲಾಖೆಗೆ ಬಂದ ಅನುದಾನ ಅಧಿಕಾರಿಗಳ ಪಾಲಾಗುತ್ತಿದೆ. ಕೂಡಲೇ ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ದಿಗೆ ಆಡಳಿತ ಮಂಡಳಿಯನ್ನು ರಚಿಸಬೇಕಿದೆ.
ರೈತರಿಗೆ ಅನುಕೂಲ ಕಲ್ಪಿಸಿ, ಸುಗಮ ಸಂಚಾರಕ್ಕೆ ಕ್ರಮ ವಹಿಸಿ: ಕಂದಾಯ ಇಲಾಖೆಯಲ್ಲಿ ಹಲವು ದಾಖಲೆಗಳನ್ನು ಪಡೆಯಲು ರೈತರು ಈಗಲು ಸಾಕಷ್ಟುಶ್ರಮ ವಹಿಸಬೇಕಿದೆ. ರಾಜಶ್ವನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಇಷ್ಟಬಂದ ಜಾಗದಲ್ಲಿ ಕಚೇರಿ ಮಾಡಿಕೊಂಡಿರುವುದರಿಂದ ರೈತರು ಅವರ ಸಹಿ ಪಡೆಯಲು ತಾಲೂಕು ಕಚೇರಿ, ಅಧಿಕಾರಿಗಳ ಕಚೇರಿಗೆ ಅಲೆಯುವಂತಾಗಿದೆ. ರೈತರಿಗೆ ಅಧಿಕಾರಿಗಳು ಸುಲಭವಾಗಿ ಸಿಗುವ ರೀತಿಯಲ್ಲಿ ಕ್ರಮ ವಹಿಸಬೇಕಿದೆ. ಪಟ್ಟಣದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು, ಇಷ್ಟಬಂದ ರೀತಿಯಲ್ಲಿ ವಾಹನ ಚಾಲನೆ ಮಾಡುವುದು ನಡೆಯುತ್ತಿದೆ. ಇದರಿಂದ ವಾಹನಗ ಸುಗಮ ಸಂಚಾರಕ್ಕೆ ಸಾಕಷ್ಟುಅಡೆತಡೆ ಉಂಟಾಗುತ್ತಿವೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆ 10 ವರ್ಷ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದ ನೂತನ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಒದಗಿ ಬಂದಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತು ಪಟ್ಟಣವನ್ನು ಯಾವ ರೀತಿ ಅಭಿವೃದ್ಧಿ ಮಾಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾರೆ ಎಂಬ ಆಶಯದೊಂದಿಗೆ ಮತದಾರರು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಪಟ್ಟಣಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಮತದಾರರ ಋುಣವನ್ನು ನೂತನ ಶಾಸಕರು ತೀರಿಸಬೇಕು.
- ಕೋಟೆ, ಸತೀಶ್, ಮಳವಳ್ಳಿ.
ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿಗೆ ತೊಡಕಾಗದು: ಶಾಸಕ ಶಿವರಾಮ ಹೆಬ್ಬಾರ್
ಈ ಹಿಂದಿನ ಶಾಸಕರ ನಿರ್ಲಕ್ಷ್ಯದಿಂದ ಹಲವು ಯೋಜನೆಗಳು ನೆನಗುದಿಗೆ ಬಿದ್ದಿವೆ. ಜನರಿಗೆ ಸಮರ್ಪಕ ಸೌಲಭ್ಯವನ್ನು ಕಲ್ಪಿಸುವಲ್ಲಿ ವಿಫಲರಾದ ಪರಿಣಾಮ ಚುನಾವಣೆಯಲ್ಲಿ ಡಾ.ಕೆ.ಅನ್ನದಾನಿಗೆ ಸೋಲಾಗಿದೆ. ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತಾರೆ ಎಂಬ ನಂಬಿಕೆಯಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಲಾಗಿದೆ. ಮತದಾರರ ನಂಬಿಕೆ ಹುಸಿಗೊಳಿಸದಂತೆ ನೂತನ ಶಾಸಕರು ಕೆಲಸ ಮಾಡಬೇಕು.
- ವಿ.ಪಿ ನಾಗೇಶ್, ತಾಪಂ ಮಾಜಿ ಅಧ್ಯಕ್ಷ, ಮಳವಳ್ಳಿ.
ನನ್ನ ಹಿಂದಿನ 10 ವರ್ಷದ ಅವಧಿಯಲ್ಲಿ ಸಾವಿರಾರು ಕೋಟಿ ರು ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಾಗಿತ್ತು. ಕಾಮಗಾರಿ ಆರಂಭಗೊಂಡು 6 ವರ್ಷ ಕಳೆಯುತ್ತಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡಿದ ನಂತರ ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಅಂತಿಮಗೊಳಿಸಿ ತಾಲೂಕನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗುವುದು.
- ಪಿ.ಎಂ.ನರೇಂದ್ರಸ್ವಾಮಿ, ಶಾಸಕರು, ಮಳವಳ್ಳಿ.