ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಮತಗಳ್ಳತನವಾಗಿದೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಮತಗಳ್ಳತನವಾಗಿದೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಅನೇಕ ಗೋಲ್‌ಮಾಲ್‌ಗಳು ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾನದ ಕುರಿತು ಆಂತರಿಕ ತನಿಖೆ ನಡೆಸಿದ್ದೇನೆ. ಈ ವೇಳೆ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. ಈ ವಿಚಾರವಾಗಿ ಸದ್ಯ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಮುಂದೆ ಈ ವಿಚಾರವಾಗಿ ಹೇಳುತ್ತೇನೆ ಎಂದು ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕ ಲೋಕಸಭಾ ಕ್ಷೇತ್ರವೊಂದರಲ್ಲಿ ‘ಭಯಂಕರ ಮತಗಳ್ಳತನ’ ಆಗಿರುವುದು ಬೆಳಕಿಗೆ ಬಂದಿದೆ. ಇದನ್ನು ಶೀಘ್ರದಲ್ಲೇ ಸಾಕ್ಷ್ಯಸಮೇತ ಬಹಿರಂಗಪಡಿಸಲಾಗುವುದು. ಯಾರು ಮತ್ತು ಹೇಗೆ ಅಕ್ರಮ ಮಾಡಿದ್ದಾರೆಂಬುದು ಬೆಳಕಿಗೆ ಬಂದಿದೆ ಎಂದು ರಾಹುಲ್‌ ಗಾಂಧಿ ಬುಧವಾರವಷ್ಟೇ ಹೇಳಿಕೊಂಡಿದ್ದರು.

ಚುನಾವಣಾ ಆಯೋಗದ ದುರ್ಬಳಕೆಯಿಂದಲೇ ರಾಜ್ಯದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ: ಸಿದ್ದರಾಮಯ್ಯ

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲೂ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದು, ಆ ಕಾರಣದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವಂತಾಗಿದೆ ಎಂಬ ಸತ್ಯ ಈಗ ಬಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮತಗಳ್ಳತನ ಕುರಿತ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ವಾದವನ್ನು ಪುಷ್ಟೀಕರಿಸಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶ ನಮಗೆ ಅಚ್ಚರಿಯನ್ನುಂಟು ಮಾಡಿದ್ದಲ್ಲದೆ, ಈ ಫಲಿತಾಂಶ ಹಲವು ಅನುಮಾನಗಳನ್ನು ಕೂಡ ಹುಟ್ಟು ಹಾಕಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿರುವುದರಿಂದಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗುವಂತಾಗಿತ್ತು ಎನ್ನುವ ಸತ್ಯ ಈಗ ಬಯಲಾಗುತ್ತಿದೆ ಎಂದಿದ್ದಾರೆ.