Asianet Suvarna News Asianet Suvarna News

ಮೋದಿ ಹೈ ತೋ ‘ಈರುಳ್ಳಿ ಬೆಲೆ 100’ ಮುಮ್ಕಿನ್‌ ಹೈ: ಪ್ರಿಯಾಂಕಾ ಚಾಟಿ!

ಮೋದಿ ಹೈ ತೋ ‘ಈರುಳ್ಳಿ ಬೆಲೆ .100’ ಮುಮ್ಕಿನ್‌ ಹೈ!| ಮೋದಿ ಇದ್ದರೆ ಎಲ್ಲವೂ ಸಾಧ್ಯ: ಪ್ರಿಯಾಂಕಾ ಚಾಟಿ| ದೇಶದ ಮೇಲೆ ಪ್ರೀತಿ ಇದ್ದರೆ ದನಿ ಎತ್ತಿ: ಜನತೆಗೆ ಕೆರೆ| ಪ್ರಜಾಸತ್ತೆ ಉಳಿವಿಗೆ ಸಿಡಿದೇಳುವ ಕಾಲ ಬಂದಿದೆ: ಸೋನಿಯಾ| ದೆಹಲಿಯಲ್ಲಿ ಕಾಂಗ್ರೆಸ್‌ ‘ಭಾರತ್‌ ಬಚಾವೋ’ ರಾರ‍ಯಲಿ

Priyanka Gandhi mocks govt on Modi hai to mumkin hai slogan
Author
Bangalore, First Published Dec 15, 2019, 9:01 AM IST

ನವದೆಹಲಿ[ಡಿ.15]: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಅಬ್ಬರಿಸಿದ್ದಾರೆ. ‘ದೇಶದಲ್ಲಿ ಅನ್ಯಾಯದ ಸರಮಾಲೆ ಘಟಿಸುತ್ತಿದೆ. ಇಂತಹ ಪರಿಸ್ಥಿತಿ ವಿರುದ್ಧ ಹೋರಾಡದೇ ಇದ್ದವರು ಇತಿಹಾಸದಲ್ಲಿ ‘ಹೇಡಿ’ಗಳು ಎಂದು ಕರೆಯಲ್ಪಡುತ್ತಾರೆ’ ಎಂದು ಪ್ರಿಯಾಕಾ ಹೇಳಿದ್ದಾರೆ. ‘ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅದನನ್ನು ರಕ್ಷಿಸುವ ಸಮಯ ಈಗ ಬಂದಿದೆ. ಸಂವಿಧಾನ, ಪ್ರಜಾಸತ್ತೆ ಉಳಿವಿಗೆ ಸಿಡಿದೇಳುವ ಕಾಲವಿದು’ ಎಂದು ಜನತೆಗೆ ಸೋನಿಯಾ ಕರೆ ನೀಡಿದ್ದಾರೆ.

ಇಲ್ಲಿನ ರಾಮಲೀಲಾ ಮೈದಾನದಲ್ಲಿ ಶನಿವಾರ ನಡೆದ ‘ಭಾರತ್‌ ಬಚಾವೋ ರಾರ‍ಯಲಿ’ಯಲ್ಲಿ ಮಾತನಾಡಿದ ಪ್ರಿಯಾಂಕಾ, ‘ಭಾರತದಲ್ಲಿ ಇಂದು ವಿಭಜನಕಾರಿ ರಾಜಕೀಯ ನಡೆಯುತ್ತಿದೆ. ಇದನ್ನು ನೋಡಿಕೊಂಡೂ ನಾವು ಇಂದಿಗೂ ದನಿ ಎತ್ತದೇ ಇದ್ದರೆ ನಮ್ಮ ಕ್ರಾಂತಿಕಾರಿ ಸಂವಿಧಾನ ಹಾಳಾಗಲಿದೆ. ಭಾರತದ ವಿಭಜನೆ ಆರಂಭವಾಗಲಿದೆ. ಬಿಜೆಪಿ ಹಾಗೂ ಆರೆಸ್ಸೆಸ್‌ನ ಭ್ರಷ್ಟನಾಯಕನು ಇದಕ್ಕೆಷ್ಟುಹೊಣೆಯೋ ಅಷ್ಟೇ ಹೊಣೆಗಾರರು ನಾವೂ ಆಗುತ್ತೇವೆ. ಭಾರತವನ್ನು ಪ್ರೀತಿಸುತ್ತಿದ್ದರೆ ದಯಮಾಡಿ ದನಿ ಎತ್ತಿ’ ಎಂದು ಮೋದಿ ಹೆಸರೆತ್ತದೇ ಎಚ್ಚರಿಸಿದರು.

‘ಮೋದಿ ಇದ್ದರೆ ಎಲ್ಲ ಸಾಧ್ಯ ಎಂಬ ಜಾಹೀರಾತುಗಳು ಟೀವಿ, ಪತ್ರಿಕೆಗಳು, ಬಸ್‌ ನಿಲ್ದಾಣಗಳಲ್ಲಿ ರಾಚುತ್ತವೆ. ಹೌದು ಸಾಧ್ಯವಿದೆ. ಈರುಳ್ಳಿ ಬೆಲೆಯನ್ನು ಕೇಜಿಗೆ 100 ರು. ಮಾಡುವುದು, ನಿರುದ್ಯೋಗ ಮಟ್ಟವನ್ನು 45 ವರ್ಷದ ಗರಿಷ್ಠ ಮಾಡುವುದು, 4 ಕೋಟಿ ಉದ್ಯೋಗ ನಷ್ಟಮಾಡುವುದು, 15 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವುದು.. ಇವೆಲ್ಲ ಮೋದಿ ಅವರಿಂದ ಮಾತ್ರ ಸಾಧ್ಯ’ ಎಂದು ಪ್ರಿಯಾಂಕಾ ಕುಟುಕಿದರು.

ಸೋನಿಯಾ ಗುಡುಗು:

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ, ‘ದೇಶದಲ್ಲಿ ಇಂದು ‘ಅಂಧೇರ್‌ ನಗರಿ, ಚೌಪಟ್‌ ರಾಜಾ’ (ಗೊಂದಲದ ನಾಯಕ, ಗೊಂದಲದ ರಾಜ್ಯ) ಸ್ಥಿತಿಯಿದೆ. ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಎಲ್ಲಿದೆ ಎಂದು ಜನ ಕೇಳುತ್ತಿದ್ದಾರೆ’ ಎಂದು ಮೋದಿಯನ್ನು ತರಾಟೆಗೆ ತೆಗೆದುಕೊಂಡರು.

ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಭಾರತದ ಆತ್ಮಕ್ಕೇ ಧಕ್ಕೆ ಬಂದಿದೆ. ಇದರ ವಿರುದ್ಧ ದೇಶ ಹೋರಾಡಲಿದೆ. ಅನ್ಯಾಯ ಅನುಭವಿಸುವುದು ದೊಡ್ಡ ಅಪರಾಧ. ಹೀಗಾಗಿ ಸಂವಿಧಾನ ಹಾಗೂ ಪ್ರಜಾಸತ್ತೆ ರಕ್ಷಿಸುವ ಸಮಯ ಈಗ ಬಂದಿದೆ. ಇದಕ್ಕಾಗಿ ನಾವು ಕಠಿಣ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.

‘ಮೋದಿ-ಶಾ ಅವರು ನಿತ್ಯವೂ ಸಂವಿಧಾನ ಹಾಳು ಮಾಡಿ, ಸಂವಿಧಾನ ದಿನ ಆಚರಿಸುತ್ತಾರೆ’ ಎಂದು ಸೋನಿಯಾ ಟೀಕಿಸಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಮಾತನಾಡಿ, ‘ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ಹಾಗೂ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಭರವಸೆಯನ್ನು ಮೋದಿ ನೀಡಿದ್ದರು. ಆದರೆ ಅದೆಲ್ಲ ಈಗ ಸುಳ್ಳೆಂದು ಸಾಬೀತಾಗತೊಡಗಿದೆ’ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಆರೋಪಿಸಿದರು.

Follow Us:
Download App:
  • android
  • ios