*   ಹಾಲಿ, ಮಾಜಿ ಶಾಸಕರಿಗೆ ಕ್ಷೇತ್ರವಾರು ಸಂಪೂರ್ಣ ಮಾಹಿತಿ ಒದಗಿಸಲು ಸಿದ್ಧ*  ಆಂತರಿಕ ಸಮೀಕ್ಷೆ ಪಕ್ಷದ ಪರ ಇದೆ*  ಭಾನುವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ  

ಬೆಂಗಳೂರು(ಜು.04): ಮುಂಬರುವ ಸಾರ್ವತ್ರಿಕ ಚುನಾವಣೆ ಸಂಬಂಧ ಕಾಂಗ್ರೆಸ್‌ ಪಕ್ಷದಿಂದ ಆಂತರಿಕ ಸಮೀಕ್ಷೆ ನಡೆಸಿದ್ದು, ವರದಿಯಲ್ಲಿ ಪ್ರತಿಯೊಂದು ವಿಧಾನಸಭೆ ಕ್ಷೇತ್ರದ ಕುರಿತ ಧನಾತ್ಮಕ ಹಾಗೂ ಋುಣಾತ್ಮಕ ಅಂಶಗಳ ವಿವರಗಳು ಇವೆ. ಹೀಗಾಗಿ ಹಾಲಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ನೇರವಾಗಿ ಬಂದರೆ ಕ್ಷೇತ್ರವಾರು ಸಮೀಕ್ಷೆಯ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಆಂತರಿಕ ಸಮೀಕ್ಷೆಯು ಪಕ್ಷದ ಪರವಾಗಿ ಬಂದಿದೆ. ಕ್ಷೇತ್ರವಾರು ಪಕ್ಷಕ್ಕಿರುವ ಸವಾಲುಗಳು ಹಾಗೂ ಪರಿಹಾರಗಳನ್ನೂ ಸಹ ಕೂಲಂಕಷವಾಗಿ ವಿವರಿಸಲಾಗಿದೆ. ಇದರಲ್ಲಿನ ಅಂಶಗಳು ಪಕ್ಷ ಸಂಘಟನೆ ಹಾಗೂ ಕ್ಷೇತ್ರದಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಚುನಾವಣೆ ಗೆಲ್ಲಲು ಅನುಕೂಲವಾಗಲಿವೆ. ಹೀಗಾಗಿ ಶಾಸಕರು ಅಥವಾ ಪರಾಜಿತ ಅಭ್ಯರ್ಥಿಗಳು, ಮುಂದೆ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ನನ್ನ ಬಳಿಗೆ ನೇರವಾಗಿ ಬಂದು ತಮ್ಮ ಕ್ಷೇತ್ರದ ಬಗ್ಗೆ ಚರ್ಚೆ ಮಾಡಬಹುದು ಎಂದು ಆಹ್ವಾನ ನೀಡಿದರು ಎಂದು ಮೂಲಗಳು ತಿಳಿಸಿವೆ.

ರಾಜಿ ಪಂಚಾಯ್ತಿ ಯಶಸ್ವಿ, ಪುತ್ರನೊಂದಿಗೆ ಹಿರಿಯ ನಾಯಕ ವಾಪಸ್ ಕಾಂಗ್ರೆಸ್‌ ಸೇರ್ಪಡೆ

ನೀವು ವೈಯಕ್ತಿಕವಾಗಿ ಬಂದು ಭೇಟಿ ಆಗಲು ಸಾಧ್ಯವಾಗದಿದ್ದರೆ ನಾನು ಜಿಲ್ಲೆಗೆ ಬಂದಾಗ ಭೇಟಿ ನೀಡಬಹುದು. ಒಟ್ಟಿನಲ್ಲಿ ಸಮೀಕ್ಷೆ ವರದಿಯಲ್ಲಿರುವ ಅಂಶಗಳನ್ನು ತಿಳಿದು ತಮ್ಮ ಕ್ಷೇತ್ರಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದು ಮುಂದೆ ನಿಮ್ಮ ಗೆಲುವು ತನ್ಮೂಲಕ ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.