ಸಂಸತ್ ಚುನಾವಣೆ: ಬಿಜೆಪಿಯಿಂದ ಈಗಲೂ ಪ್ರತಾಪ್ ಸಿಂಹ ಫೇವರಿಟ್..!
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ 2014, 2019ರಲ್ಲಿ ಸತತ ಎರಡು ಬಾರಿ ಗೆದ್ದಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರೇ ಈ ಬಾರಿಯೂ ಪ್ರಬಲವಾಗಿದೆ. ಆದರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಈ ಕ್ಷೇತ್ರ ಯಾರಿಗೆ ಸಿಗುತ್ತದೆ ಎಂಬ ಗೊಂದಲವಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು(ಜ.04): ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ 2014, 2019ರಲ್ಲಿ ಸತತ ಎರಡು ಬಾರಿ ಗೆದ್ದಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರೇ ಈ ಬಾರಿಯೂ ಪ್ರಬಲವಾಗಿದೆ. ಆದರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಈ ಕ್ಷೇತ್ರ ಯಾರಿಗೆ ಸಿಗುತ್ತದೆ ಎಂಬ ಗೊಂದಲವಿದೆ. ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಕೆ.ಆರ್.ನಗರದಿಂದ ಸತತ ಮೂರು ಬಾರಿ ಆಯ್ಕೆಯಾಗಿ, ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಿ.ರವಿಶಂಕರ್ ಎದುರು ಸೋತವರು.
ಲೋಕಸಭೆ ಚುನಾವಣೆ 2024: ಇಂದು ವರಿಷ್ಠರ ಜತೆ ಸಿದ್ದು,ಡಿಕೆಶಿ ರಣತಂತ್ರ ಸಭೆ
ಬಿಜೆಪಿಯಲ್ಲಿ ಪ್ರತಾಪ್ ಸಿಂಹ ಹೊರತುಪಡಿಸಿ ಇತರರ ಹೆಸರಿಲ್ಲ. ಈಗಲೂ ಕೂಡ ಅವರೇ ಪ್ರಬಲ ಪೈಪೋಟಿ ನೀಡಬಲ್ಲರು. ಆದರೆ, ಇತ್ತೀಚೆಗೆ ನೂತನ ಸಂಸತ್ ಭವನದಲ್ಲಿ ನಡೆದ ಹೊಗೆಬಾಂಬ್ ಪ್ರಕರಣದಿಂದ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಅವರಿಗೆ ಟಿಕೆಟ್ ನೀಡುವುದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕೈಯಲ್ಲಿದೆ.
ಇನ್ನು, ಕಾಂಗ್ರೆಸ್ ಟಿಕೆಟ್ ಗೆ ಒಕ್ಕಲಿಗ ಜನಾಂಗದಿಂದ ನಾಲ್ವರು, ವೀರಶೈವ-ಲಿಂಗಾಯತ ಜನಾಂಗದಿಂದ ಇಬ್ಬರು ಲಾಬಿ ನಡೆಸುತ್ತಿದ್ದಾರೆ. ಇದಲ್ಲದೇ ಕುರುಬ ಜನಾಂಗದಿಂದ ಮೂವರ ಹೆಸರು ಕೇಳಿ ಬರುತ್ತಿದೆ. ಮೈಸೂರಿನ ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋತಿರುವ ಎಂಡಿಎ, ಮೈಮುಲ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಿ.ಬಸವೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ದಕ್ಷಿಣ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಿಂದ ಮೂರು ಬಾರಿ ವಿಧಾನ ಪರಿಷತ್ತಿಗೆ, ಚಾಮರಾಜ ಕ್ಷೇತ್ರದಿಂದ ಒಮ್ಮೆ ವಿಧಾನಸಭೆಗೆ ಸ್ಪರ್ಧಿಸಿ ಸೋತಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಳೆದ ವರ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ.ಸುಶ್ರುತ್, ಈ ನಾಲ್ವರು ಒಕ್ಕಲಿಗ ಕೋಟಾದಲ್ಲಿ ಟಿಕೆಟ್ ಗೆ ಲಾಬಿ ನಡೆಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರವನ್ನು ತ್ಯಾಗ ಮಾಡಿದ ಮಾಜಿ ಶಾಸಕ ಡಾ.ಯತೀಂದ್ರ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಬೇಕು ಎಂಬ ಒತ್ತಡ ಕೇಳಿ ಬಂದಿತ್ತು. ತಂದೆಯವರು ಹಾಗೂ ಪಕ್ಷ ತೀರ್ಮಾನಿಸಿದರೆ ಸಿದ್ಧವಿರುವುದಾಗಿ ಡಾ.ಯತೀಂದ್ರ ಹೇಳಿದ್ದರು. ಆದರೆ, ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಿಂದೆ ಸರಿದಿದ್ದಾರೆ ಎಂದು ಗೊತ್ತಾಗಿದೆ.
ಲೋಕಸಭಾ ಚುನಾವಣೆ 2024: ಬೆಳಗಾವಿಯಿಂದ ಬಾಲಚಂದ್ರ ಜಾರಕಿಹೊಳಿ ಆಖಾಡಕ್ಕೆ?
ಕೆ.ಆರ್.ನಗರದಿಂದ ಮೂರು ಬಾರಿ ಕಾಂಗ್ರೆಸ್, ಹುಣಸೂರಿನಿಂದ ಒಂದು ಬಾರಿ ಜೆಡಿಎಸ್ ಟಿಕೆಟ್ ಮೇಲೆ ವಿಧಾನಸಭೆ ಸದಸ್ಯರಾಗಿದ್ದ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎಚ್. ವಿಶ್ವನಾಥ್ 2009ರಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರು. 2014 ರಲ್ಲಿ ಸೋತಿದ್ದರು. ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶಿತರಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಜೊತೆ ಗುರುತಿಸಿಕೊಂಡು, ಮತ್ತೊಂದು ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಬಹಿರಂಗವಾಗಿಯೇ ಕೇಳುತ್ತಿದ್ದಾರೆ.
ಇನ್ನು, ಪಕ್ಷದ ನಾಯಕ ಜೆ.ಜೆ.ಆನಂದ ಎಂಬುವರು, ವೀರಶೈವ ಜನಾಂಗದ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಗುರುಮಲ್ಲೇಶ್ ಕೂಡ ಟಿಕೆಟ್ ಕೇಳುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಸಂಬಂಧ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರು ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಭ್ಯರ್ಥಿಯನ್ನು ಆಖೈರುಗೊಳಿಸಲಿದ್ದಾರೆ.