ಬಳ್ಳಾರಿ: ಸಚಿವ ನಾಗೇಂದ್ರ ವರ್ಸಸ್ ಶಾಸಕ ಭರತ್ ರೆಡ್ಡಿ?, ಮುಸಕಿನ ಗುದ್ದಾಟದ ಮಧ್ಯೆ ಚುನಾವಣೆ ಮುಂದೂಡಿಕೆ
ಅಧಿಕಾರಿಗಳ ಮೇಲೆ ಒತ್ತಡ ತರೋ ಮೂಲಕ ಮೇಯರ್ ಚುನಾವಣೆಯನ್ನು ರದ್ದು ಮಾಡಿದೆ. ಕಾಂಗ್ರೆಸ್ ನಾಯಕರ ಹುಚ್ಚಾಟಕ್ಕೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡೋ ಮೂಲಕ ಆಕ್ರೋಶ ಹೊರಹಾಕಿದ್ರು.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ನ.29): ಪೂರ್ಣ ಬಹುಮತ ಇದ್ದು, ಈಗಾಗಲೇ ಎರಡು ಅವಧಿಯಲ್ಲಿ ಪಾಲಿಕೆಯ ಮೇಯರ್ ಸ್ಥಾನವನ್ನು ಹಿಡಿಯುವಲ್ಲಿ ಯಶಸ್ವಿ ಯಾದ ಕಾಂಗ್ರೆಸ್ ಇವತ್ತು ಆಂತರಿಕ ಕಚ್ಚಾಟ ಮತ್ತು ಸಚಿವ ಶಾಸಕರ ಬೆಂಬಲಿಗರ ಮೇಲಾಟದಲ್ಲಿ ಬಳ್ಳಾರಿ ಪಾಲಿಕೆ ಮೇಯರ್ ಗದ್ದುಗೆ ಏರಲು ವಿಫಲವಾಯ್ತು. ಅಲ್ಲದೇ, ಅಧಿಕಾರಿಗಳ ಮೇಲೆ ಒತ್ತಡ ತರೋ ಮೂಲಕ ಮೇಯರ್ ಚುನಾವಣೆಯನ್ನು ರದ್ದು ಮಾಡಿದೆ. ಕಾಂಗ್ರೆಸ್ ನಾಯಕರ ಹುಚ್ಚಾಟಕ್ಕೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡೋ ಮೂಲಕ ಆಕ್ರೋಶ ಹೊರಹಾಕಿದ್ರು.
ಆಂತರಿಕ ಕಚ್ಚಾಟ.. ಸಚಿವ ಶಾಸಕರ ಬೆಂಬಲಿಗರ ಮುಸುಕಿನ ಗುದ್ದಾಟವೇ ಕಾರಣ
ಕಳೆದೆರಡು ವರ್ಷದ ಹಿಂದೆ ಜಿದ್ದಾಜಿದ್ದಿನಿಂದ ಕೂಡಿದ ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಪಕ್ಷ.. ಆಂತರಿಕ ಕಚ್ಚಾಟದಲ್ಲಿ ಬಹುಮತ ಇದ್ರೂ ಅಧಿಕಾರ ಹಿಡಿಯುವಲ್ಲಿ ಈ ಬಾರಿ ವಿಫಲವಾದ ಕಾಂಗ್ರೆಸ್.. ಹೌದು, 39 ಸದಸ್ಯರ ಬಲ ಇರೋ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ 21 ಕಾಂಗ್ರೆಸ್ 13 ಬಿಜೆಪಿ ಮತ್ತು ಐವರು ಪಕ್ಷೇತರ ಸದಸ್ಯರಿದ್ದಾರೆ. ಅಲ್ಲದೇ ಐವರು ಶಾಸಕ ಸಚಿವರ ಮತಗಳು ಕೂಡ ಕಾಂಗ್ರೆಸ್ ಪರ ಇವೆ..ಇಷ್ಟೇಲ್ಲ ಇದ್ರೂ ಅಧಿಕಾರ ಹಿಡಿಯುವಲ್ಲಿ ಮಾತ್ರ ವಿಫಲವಾಗಿ ಚುನಾವಣೆಯೇ ರದ್ದು ಮಾಡಲಾಗಿದೆ. ಮೇಲ್ನೋಟಕ್ಕೆ ಇಲ್ಲಿ ಸಚಿವ ನಾಗೇಂದ್ರ ಮತ್ತು ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರ ಮೇಲಾಟ ಚುನಾವಣೆ ಮುಂದೂಡಲು ಕಾರಣ...ಅಧಿಕಾರ ಹಂಚಿಕೆ ಹಿನ್ನೆಲೆ ಕಳೆದ ಏಳು ತಿಂಗಳ ಹಿಂದೆ ಅಧಿಕಾರದಲ್ಲಿದ್ದ ಮೇಯರ್ ತ್ರಿವೇಣೆ ರಾಜೀನಾಮೆ ನೀಡಿದ್ರು. ಆ ಸ್ಥಾನಕ್ಕಿಂದು ಚುನಾವಣೆ ನಡೆಯಬೇಕಿತ್ತು. ಪಕ್ಷೇತರ ಸದಸ್ಯ ಶ್ರೀನಿವಾಸ ಶಾಸಕ ಭರತ್ ರೆಡ್ಡಿ ಬೆಂಬಲಿತ ಅಭ್ಯರ್ಥಿಗಳ ಜೊತೆಗೆ ಬಂದು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ರೇ, ಸಚಿವ ನಾಗೇಂದ್ರ ಬೆಂಬಲಿತ ಸದಸ್ಯರೊಂದಿಗೆ ಪಾಲಿಕೆ ಸದಸ್ಯೆ ಶ್ವೇತ ನಾಮಪತ್ರ ಸಲ್ಲಿಸಿದ್ರು.ಇದರ ಜೊತೆ ಮತ್ತೊರ್ವ ಕಾಂಗ್ರೆಸ್ ಸದಸ್ಯ ಕುಬೇರ ಕೂಡ ನಾಮಪತ್ರ ಸಲ್ಲಿಸಿದ್ರು. ಅಲ್ಲಿಗೆ ಮೂವರು ಕಾಂಗ್ರೆಸ್ನವರಾದ್ರು. ಈ ಮಧ್ಯೆ ಸಂಖ್ಯಾ ಬಲ ಇಲ್ಲದೇ ಇದ್ರೂ ಬಿಜೆಪಿ ಕೂಡ ತನ್ನ ಅಭ್ಯರ್ಥಿ ಹನುಮಂತು ಅವರನ್ನು ಕಣಕ್ಕಿಳಿಸಿತ್ತು. ಆದ್ರೇ, ನಿಗದಿತಂತೆ 12 .30ಕ್ಕೆ ನಡೆಯಬೇಕಿದ್ದ ಚುನಾವಣೆಗೆ ನಡೆಯಲೇ ಇಲ್ಲ. ಕಾಂಗ್ರೆಸ್ ನಲ್ಲಿ ಒಮ್ಮತ ಬಾರದ ಹಿನ್ನೆಲೆ ಸಮಯವನ್ನು ತಳ್ಳುತ್ತಾ ಹೋದ್ರು. ಸಮಯ ಕಳೆಯುತ್ತಿದ್ದಂತೆ ಬಿಜೆಪಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ಗಲಾಟೆ ಮಾಡಿದ್ರು.
ಬಹುಮತ ಇದೆ. ಕೋರಂ ಇದೆ. ಆದ್ರೂ ಚುನಾವಣೆ ರದ್ದು ಮಾಡಲಾಯ್ತು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ, ಕೇಂದ್ರದಿಂದ ಬರ ಪರಿಹಾರ ಪಡೆಯುವುದು ನಮ್ಮ ಹಕ್ಕು: ಕೃಷಿ ಸಚಿವ ಚಲುವರಾಯಸ್ವಾಮಿ
ಇನ್ನೂ ಬಿಜೆಪಿ ಸದಸ್ಯರ ಗಲಾಟೆ ಜೋರಾಗುತ್ತಿದ್ದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಚುನಾವಣೆಯನ್ನು ರದ್ದು ಮಾಡಲಾಗಿದೆ ಎಂದು ಘೋಷಣೆ ಮಾಡಿದ್ರು.. ಕಾರಣವಿಲ್ಲದೇ ಚುನಾವಣೆ ರದ್ದು ಮಾಡಲು ಬರೋದಿಲ್ಲ ವೆಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ನಾಮಪತ್ರ ಸ್ವೀಕಾರ ಮಾಡೋದು ಮಾತ್ರ ನನ್ನ ಕೆಲಸ. ಚುನಾವಣೆ ಪ್ರಕ್ರಿಯೆ ಕಲಬುರಗಿ ಆಯುಕ್ತ ಕೃಷ್ಣ ಭಾಜಪೇಯಿ ಬಂದು ನಡೆಸಬೇಕಿತ್ತು. ಆದರೆ ಅವರು ಬಂದಿಲ್ಲ. ಕಾರಣಾಂತರದಿಂದ ಚುನಾವಣೆ ಮುಂದೂಡಿ ಎಂದು ಹೇಳಿದ್ದಾರೆ ಎಂದರು.. ಅಂತರಿಕ ಕಚ್ಚಾಟ ಹಿನ್ನೆಲೆ ಅಧಿಕಾರ ಬಳಸಿ ಸಚಿವ ನಾಗೇಂದ್ರ ಚುನಾವಣೆ ಮುಂದೆ ಹಾಕಿಸಿದ್ದಾರೆ ಎನ್ನುವುದು ಮಾತ್ರ ಗುಟ್ಟಾಗಿಲ್ಲ.
ಸ್ಥಳೀಯ ಕಾಂಗ್ರೆಸ್ ಮುಖಂಡರ ಅಸಮಾಧಾನ
ರಾಜ್ಯದಲ್ಲಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲಿಯೂ ಸಚಿವ ಶಾಸಕರ ಮಧ್ಯೆ ಭಿನ್ನಾಭಿಪ್ರಾಯವಿದೆ ಎನ್ನುವುದು ಮಾತ್ರ ಬಳ್ಳಾರಿ ಮೇಯರ್ ಚುನಾವಣೆಯಲ್ಲಿ ಬಹಿರಂಗವಾಗಿದೆ.