ರಾಜ್ಯ ಬಿಜೆಪಿ ಸರ್ಕಾರ ಕೇವಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿದೆ. ಮೀಸಲಾತಿ ಸೇರಿದಂತೆ ಎಲ್ಲಾ ವಿಚಾರದಲ್ಲೂ ಜನರನ್ನುಫೈಲ್ ಮಾಡಿದೆ. ಕೇವಲ ಚುನಾವಣೆಗಾಗಿ ನ್ಯಾಯಸಮ್ಮತವಲ್ಲದ ಮೀಸಲಾತಿ ತೀರ್ಮಾನ ಮಾಡಿದೆ.
ಬೆಂಗಳೂರು (ಏ.03): ರಾಜ್ಯ ಬಿಜೆಪಿ ಸರ್ಕಾರ ಕೇವಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿದೆ. ಮೀಸಲಾತಿ ಸೇರಿದಂತೆ ಎಲ್ಲಾ ವಿಚಾರದಲ್ಲೂ ಜನರನ್ನುಫೈಲ್ ಮಾಡಿದೆ. ಕೇವಲ ಚುನಾವಣೆಗಾಗಿ ನ್ಯಾಯಸಮ್ಮತವಲ್ಲದ ಮೀಸಲಾತಿ ತೀರ್ಮಾನ ಮಾಡಿದೆ. ನಾವು ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದ ಆದೇಶ ರದ್ದು ಮಾಡಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಿ ಸಮಾಜಕ್ಕೆ ರಾಜ್ಯ ಸರ್ಕಾರ ಮಾಡಿರುವ ಅನ್ಯಾಯ ಖಂಡಿಸಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರಿದ್ದಾರೆ. ಲಿಂಗಾಯತರು ಹಾಗೂ ಒಕ್ಕಲಿಗರು ಶೇ.15 ಹಾಗೂ ಶೇ.12ರಷ್ಟು ಮೀಸಲಾತಿಗೆ ಒತ್ತಾಯ ಮಾಡಿದ್ದರು. ಆದರೆ, ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರವಾಗಿ ಶೇ.2 ಮಾತ್ರ ಹೆಚ್ಚಳ ಮಾಡಿದೆ. ಅದನ್ನೂ ಅಲ್ಪಸಂಖ್ಯಾತರಿಂದ ಕಿತ್ತು ನೀಡಿದೆ. ಲಿಂಗಾಯತರು, ಒಕ್ಕಲಿಗರಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬುದು ನಮ್ಮ ಗುರಿ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಆದೇಶ ವಜಾಗೊಳಿಸುತ್ತೇವೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಎಂ.ಬಿ.ಪಾಟೀಲ್ ವಿಶ್ವಾಸ
ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮಾಡಿರುವ ಮೀಸಲಾತಿ ಹೆಚ್ಚಳ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿಲ್ಲ. ಇವರು ಯಾವುದನ್ನೂ ಕಾನೂನು ಪ್ರಕಾರ ಮಾಡಿಲ್ಲ. ಕೇವಲ ಚುನಾವಣೆ ಮತ ಗಳಿಕೆಗೆ ಸುಳ್ಳು ಭರವಸೆ ನೀಡಿದ್ದು, ಇದರ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿರುವ ಎಲ್ಲಾ ನಿರ್ಧಾರಗಳು ಜನರನ್ನು ಮೂರ್ಖರನ್ನಾಗಿಸುವ ನಿರ್ಧಾರಗಳೇ ಎಂದು ಕಿಡಿ ಕಾರಿದರು. ಸಚಿವ ಮುನಿರತ್ನ ಅವರ ‘ಹೊಡೀರಿ ಬಡೀರಿ’ ಹೇಳಿಕೆ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಪಕ್ಷದಿಂದ ಯಾರೇ ಮತ ಕೇಳಲು ಬಂದರೂ ಹೊಡೆದು ಓಡಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಸದರು ದೂರು ನೀಡಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡೋಣ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ 2 ಕಡೆ ಟಿಕೆಟ್ ನೀಡಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ಕೇಳುವವರನ್ನು ಬೇಡ ಎನ್ನಲು ಸಾಧ್ಯವೇ? ನೀವು ಕೂಡ ಕೇಳಬಹುದು. ಅಭಿಮಾನಿಗಳು ಬಹಳ ಆಸೆಯಿಂದ ಕೇಳುತ್ತಾರೆ. ಅದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಬೆಳಗಾವಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸತೀಶ್ ಜಾರಕಿಹೊಳಿ
ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚು: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಆದರೆ ಯಾವುದೇ ಗೊಂದಲ ಇಲ್ಲ. ಬೇರೆ ಪಕ್ಷಗಳಲ್ಲಿ ಬೆದರಿಕೆ ತಂತ್ರ ನಡೆಯಬಹುದು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ. ಬಿಜೆಪಿಯಲ್ಲಿ ಬೆದರಿಕೆ ಇಲ್ಲವೇ? ಅವರು ಪಟ್ಟಿಪ್ರಕಟಿಸದಿರುವುದೇಕೆ? ದಿನಾಂಕ ಮುಂದೂಡುತ್ತಿರುವುದೇಕೆ? ಅವರ ಪಕ್ಷದಲ್ಲಿ ಆಂತರಿಕ ಸಮಸ್ಯೆ ಇದೆ. ಜೆಡಿಎಸ್ ನಲ್ಲೂ ಆಂತರಿಕ ಸಮಸ್ಯೆ ಇದೆ. ಅದೇ ಕಾರಣಕ್ಕೆ ಅನೇಕ ನಾಯಕರು ಕಾಂಗ್ರೆಸ್ ಸೇರಿದ್ದಾರೆ ಎಂದರು.
