ಚುನಾವಣೆಗೂ ಮೊದಲೇ ರಂಗೇರಿದೆ ಕಲಬುರಗಿ ಲೋಕ ಸಮರದ ರಾಜಕೀಯ

ಖರ್ಗೆ ಸ್ಪರ್ಧೆ ವಿಚಾರದಲ್ಲಿ ಮುಂದುವರಿದ ಸಸ್ಪೆನ್ಸ್‌- ಖರ್ಗೆ ಕೋಟೆಯತ್ತ ಮತ್ತೆ ಮೋದಿ ಚಿತ್ತ, ಲೋಕ ಸಮರದ ಅಖಾಡಕ್ಕಿಳಿಯುತ್ತಾರಾ ಖರ್ಗೆ? ಜನರ ಕುತೂಹಲಕ್ಕೆ ಖರ್ಗೆ ಮೌನವೇ ಉತ್ತರ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪಧೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಮಲ್ಲಿಕಾರ್ಜುನ ಖರ್ಗೆ. 

Politics of Kalaburagi Has Started Even before the Lok Sabha Election 2024 grg

ಕಲಬುರಗಿ(ಮಾ.14):  ಚುನಾವಣೆ ಘೋಷಣೆಗೂ ಮುನ್ನವೇ ಕಲಬುರಗಿ ಲೋಕ ಸಮರದ ಅಖಾಡದಲ್ಲಿ ಕಾವು ಹೆಚ್ಚುತ್ತಿದೆ. ಏತನ್ಮಧ್ಯೆ ಕಲಬುರಗಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಹುರಿಯಾಳು ಯಾರು? ಎಂಬುದು ಸದ್ಯದ ಕುತೂಹಲವಾಗಿದೆ. ಈ ಕುತೂಹಲದ ನಡುವೆಯೇ ಪ್ರಧಾನಿ ಮೋದಿ ಕಲಬುರಗಿಯತ್ತ ಹೆಜ್ಜೆ ಹಾಕುತ್ತಿರೋದು ಜನರ ಗಮನ ಸೆಳೆದಿದೆಯಲ್ಲದೆ ರಾಜಕೀಯವಾಗಿ ಹೊಸ ಗುಂಗು ಹೊತ್ತು ತಂದಿದೆ.

ಸಾರ್ವಜನಿಕವಾಗಿ, ರಾಜಕೀಯವಾಗಿ ಎಲ್ಲಾ ಹಂತಗಳಲ್ಲಿ ಈ ಪ್ರಶ್ನೆ ಚರ್ಚೆಯಲ್ಲಿರುವಾಗಲೇ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಇಂದು ಕಲಬುರಗಿಗೆ ಭೇಟಿ ನೀಡಿ ಬಹಿರಂಗ ಸಭೆಯಲ್ಲಿ ಮಾತನಾಡಿದರೂ ಸಹ ಜನಮನದಲ್ಲಿನ, ಇಡೀ ಕ್ಷೇತ್ರದಲ್ಲಿನ ಈ ಕುತೂಹಲಕ್ಕೆ ಯಾವುದೇ ತರಹದ ಸ್ಪಂದನೆ ಕೊಡದೆ ಅಭಿಮಾನಿಗಳು, ಕಾರ್ಯಕರ್ತರನ್ನು ನಿರಾಶೆಗೊಳಿಸಿದರು.

ಬರೀ ಘೋಷಣೆ ಹಾಕ್ಕೊಂಡು ಹೋದ್ರೆ ಜನ ಮತ ಹಾಕ್ತಾರಾ? ಬಿಜೆಪಿ ವಿರುದ್ಧ ಸಚಿವ ಶರಣ ಪ್ರಕಾಶ ವಾಗ್ದಾಳಿ

ಕಲಬುರಗಿಯಲ್ಲಿಂದು ನಡೆದ ಗ್ಯಾರೆಂಟಿ ಫಲಾನುಭವಿಗಳ ಸಮಾವೇಶದಲ್ಲಿ ಒಂದು ಗಂಟೆ ಭಾಷಣ ಮಾಡಿದರೂ ತಮ್ಮ ಲೋಕ ಸಮರದ ಅಖಾಡಕ್ಕಿಳಿಯುವ, ಸ್ಪರ್ದೆ ಮಾಡುವ ಬಗ್ಗೆ ಖರ್ಗೆ ಗುಟ್ಟು ಬಿಟ್ಟು ಕೊಡಲೇ ಇಲ್ಲ.
ಖರ್ಗೆ ಆಗಮಿಸುತತಿದ್ದಂತೆಯೇ ಅಭಿಮಾನಿಗಳು ಜೋರಾಗಿ ಘೋಷಣೆ ಹಾಕುತ್ತ ಸ್ವಾಗತಿಸಿದರಾದರೂ ಅದಕ್ಕೂ ಖರ್ಗೆ ಸೊಪ್ಪು ಹಾಕಲಿಲ್ಲ. ಖರ್ಗೆ ಮಾತ್ರವಲ್ಲದೇ ಭಾಷಣ ಮಾಡಿದ ಯಾವೊಬ್ಬ ನಾಯಕರಿಂದಲೂ ಖರ್ಗೆ ಸ್ಪರ್ಧೆ ಬಗ್ಗೆ ಪ್ರಸ್ತಾಪವಾಗಲೇ ಇಲ್ಲ.

ಮಲ್ಲಿಕಾರ್ಜುನ ಖರ್ಗೆ ತಮ್ಮ ಕಲಬುರಗಿ ನಂಟು, ಲೋಕ ಸಮರಕ್ಕಿಳಿಯೋ ವಿಚಾರದಲ್ಲಿ ತಮ್ಮ ಮನದಾಳದ ಚಿಂತನೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದ ಜನರಿಗೆ, ಅವರ ಬೆಂಬಲಿಗರಿಗೆ ಇದರಿಂದ ನಿರಾಸೆ ಆಯ್ತು.
ತಮ್ಮ ಮಾತಿನುದ್ದಕ್ಕೂ ಖರ್ಗೆ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮಾತಿನ ಕೊನೆಯಲ್ಲಿ ಕಳೆದ ಚುನಾವಣೆಯಲ್ಲಿ ಆದ ತಪ್ಪು ಮಾಡೋದಿಲ್ಲ ಅಂತ ಕಲಬುರಗಿ ಜನ ತೀರ್ಮಾನ ಮಾಡಿದ್ದಾರೆ‌ , ಆ ವಿಶ್ವಾಸ ನನಗಿದೆ ಎಂದು ಮಾತ್ರ ಹೇಳಿದರೇ ಹೊರತು ಅಭ್ಯರ್ಥಿ ವಿಚಾರದಲ್ಲಿ ಯಾವ ಸುಳಿವು ಬಿಟ್ಟುಕೊಡಲಿಲ್ಲ.

ಕಲಬುರಗಿ ಕಾಂಗ್ರೆಸ್ ಗೆಲ್ಲಿಸಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ, ಇದೂ ನಾನ್ ಹೇಳ್ತಿಲ್ಲ, ಕಲಬುರಗಿ ಜನತೆ ಹೇಳ್ತಿದ್ದಾರೆ ಎಂದ ಖರ್ಗೆ, ನಾನು ಕಲಬುರಗಿ ಜನರ ಜೊತೆಯಲ್ಲಿ ಇರುತ್ತೇನೆ ಎಂದರಾದ್ರೂ, ಕಲಬುರಗಿಯಿಂದಲೇ ತಮ್ಮ ಸ್ಪರ್ಧೆಯ ಬಗ್ಗೆ ಏನನ್ನ ಹೇಳಲಿಲ್ಲ.

ಖರ್ಗೆ ಕೋಟೆಯತ್ತ ನರೇಂದ್ರ ಮೋದಿ ಚಿತ್ತ

ಲೋಕ ಸಭೆ ಚುನಾವಣೆಯ ಪ್ರಚಾರಕ್ಕಾಗಿಯೇ ಇದೇ ಮಾ. 16 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಚುನಾವಣಾ ಪ್ರಚಾರ ಕಲಬುರಗಿಯಿಂದಲೇ ಶುರುವಾಗುತ್ತಿರೋದರಿಂದ ರಾಜಕೀಯವಾಗಿ ಕಲಬುರಗಿ ಸುದ್ದಿಗೆ ಗ್ರಾಸವಾಗಿದೆ.

ಬಿಜೆಪಿ ಸರ್ಕಾರ ಇದ್ದಾಗ ಭಯೋತ್ಪಾದಕರ ಅಡ್ಡೆಯಾಗಿತ್ತು; ನಮ್ಮ ಸರ್ಕಾರ ಬಂದ ಮೇಲೆ ಕಡಿಮೆಯಾಗಿದೆ: ರಾಮಲಿಂಗಾರೆಡ್ಡಿ

ಮಾ.16ರಂದು ಕಲಬುರಗಿಯ ಎನ್.ವಿ ಕಾಲೇಜು ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಬೆ.11 ಗಂಟೆಗೆ ನಡೆಯಲಿದ್ದು, ಸಮಾವೇಶವನ್ನು ಉದ್ಘಾಟಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಿಂದಲೇ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಲಬುರಗಿ ಭೇಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಂಸತ್‌ ಸ್ಥಾನಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆಂದು ಹೇಳಲಾಗುತ್ತಿದೆ. ಈ ಸಮಾವೇಶದಲ್ಲಿ ಜಿಲ್ಲೆಗಳ ಲಕ್ಷಾಂತರ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ.

ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 12 ಗಂಟೆಗೆ ಕಲಬುರಗಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಕಲಬುರಗಿಯಲ್ಲಿಳಿದು ಖರ್ಗೆ ತವರಲ್ಲೇ ಲೋಕ ಸಮರದ ರಣ ಕಹಳೆ ಮೊಳಗಿಸುತ್ತಿದ್ದಾರೆ. ಆ ಮೂಲಕ ಕಲ್ಯಾಣ ನಾಡಲ್ಲಿ ಮತ್ತೆ ಪಂಚದಳ ಕಮಲ ಅರಳಿಸುವತ್ತ ಗಮನ ಕೇಂದ್ರೀಕರಿಸಿದ್ದಾರೆಂದೂ ಅನೇಕರು ಹೇಳುತ್ತಿದ್ದಾರೆ.

Latest Videos
Follow Us:
Download App:
  • android
  • ios