ಕ್ರಾಂತಿ ಎಂದ ಕೂಡಲೇ ಬರೀ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರು (ಜೂ.29): ಕ್ರಾಂತಿ ಎಂದ ಕೂಡಲೇ ಬರೀ ಕಾಂಗ್ರೆಸ್ ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ರಾಂತಿ ಎಂದರೇ ಹಲವಾರು ರೀತಿಯ ಕ್ರಾಂತಿಗಳಿವೆ. ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿಲ್ವಾ ಎಂದ ಅವರು, ರಷ್ಯಾದ ಕ್ರಾಂತಿಯೂ ಸಹ ಅಕ್ಟೋಬರ್‌ನಲ್ಲಾಗಿರುವುದು ಎಂದರು. ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ ಎಂದ ಅವರು, ಕೇಂದ್ರ ಸರ್ಕಾರದಲ್ಲೂ ಸಹ ಬದಲಾವಣೆ ನಿರೀಕ್ಷೆ ಮಾಡಬಹುದು.
ಆರ್ ಎಸ್ಎಸ್ ನವರ ಸೆಟ್ ಆಫ್ ಪ್ರಿನ್ಸಿಪಲ್ ನಂತೆ 75 ವರ್ಷದ ನಂತರ ಯಾವುದೇ ಹುದ್ದೆಯಲ್ಲಿ ಇರಲಿಕ್ಕಿಲ್ಲ ಎಂದ ರಾಜಣ್ಣ, ಹಾಗಾಗಿಯೇ ಅಡ್ವಾಣಿಗೆ ಪ್ರಧಾನಿ ಸ್ಥಾನ ಸಿಕ್ಕಿಲ್ಲ. ಈಗ ಅದೇ ಪ್ರಿನ್ಸಿಪಲ್ ಮೋದಿಯರಿಗೂ ಆಗುತ್ತದೆ ಎಂದು ತಿಳಿಸಿದರು. ಆ ಒಂದು ಬದಲಾವಣೆ ಕ್ರಾಂತಿ ಅಲ್ವಾ, ಅದನ್ನು ಯಾಕೆ ನೀವು ಊಹೆ ಮಾಡುವುದಿಲ್ಲ. ಬರೀ ಕರ್ನಾಟಕದ ಕಾಂಗ್ರೇಸ್ ಪಾರ್ಟಿಯನ್ನು ಯಾಕೆ ಊಹೆ ಮಾಡುತ್ತೀರಾ ಎಂದರು. ಸಿಎಂ ಬದಲಾಯಿಸುತ್ತಾರೆ, ಸಂಪುಟ ವಿಸ್ತರಣೆ. ಅಧ್ಯಕ್ಷ ಬದಲಾವಣೆ. ಬರೀ ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತೀರಾ ಎಂದ ರಾಜಣ್ಣ, ರಾಜಕೀಯ ನಿಂತ ನೀರಲ್ಲ, ಅದು ಬದಲಾಗುತ್ತಿರುತ್ತದೆ.
ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತದೆ. ನಮ್ಮ ಕಾಂಗ್ರೆಸ್ ನಲ್ಲಿ ಒಟ್ಟು ಮೂರು ಪವರ್ ಸೆಂಟರ್ ಗಳಿವೆ, ಹೈಕಮಾಂಡ್, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಪವರ್ ಸೆಂಟರ್ ಎಂದರು. ಕೆಲ ಮಾಧ್ಯಮದವರು ರಾಜಣ್ಣನವರು, ಸಿದ್ದರಾಮಯ್ಯನವರಿಂದ ದೂರಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ಸಿದ್ಧರಾಮಯ್ಯ ಇರುವುದರಿಂದಲೇ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದಿದ್ದರೇ ರಾಜಕೀಯ ಬಿಡುತ್ತೇನೆ ಎಂದರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷದಲ್ಲೂ ಅಸಮಾಧಾನ ಇದೆ. ಶಾಸಕರ ಅಸಮಾಧಾನ ಇರುವುದು ಕ್ಷೇತ್ರದ ಅಭಿವೃದ್ಧಿಗೆ ಅಷ್ಟೇ ಎಂದ ರಾಜಣ್ಣ, ಅದರಲ್ಲಿ ತಪ್ಪಿಲ್ಲ. ಆದರೆ ಪಕ್ಷದ ಚೌಕಟ್ಟಿನಲ್ಲಿ ಹೇಳಬಹುದಾಗಿತ್ತು ಎಂದರು.
ತಿಪಟೂರು ಶಾಸಕ ಷಡಕ್ಷರಿ ಸಹಕಾರಿ ಖಾತೆ ಮೇಲೆ ಕಣ್ಣಿಟ್ಟಿರುವ ವಿಚಾರದ ಬಗ್ಗೆ ಮಾತನಾಡಿದ ರಾಜಣ್ಣ, ಅವರೇ ತೆಗೆದುಕೊಳ್ಳಲಿ. ಯಾರು ಬೇಡ ಅಂದ್ರು. ಅವರು ಕೇವಲ ಸೀನಿಯರ್ ಅಷ್ಟೇ ಅಲ್ಲಾ. ಅವರು ಸಿಎಂ ಅಭ್ಯರ್ಥಿ ಕೂಡ ಎಂದು ಶಾಸಕ ಷಡಕ್ಷರಿ ಕುರಿತು ವ್ಯಂಗ್ಯವಾಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ, ಆದರೆ ಬದಲಾವಣೆಯಂತೂ ಆಗುತ್ತದೆ. ಯಾವಾಗ ಆಗುತ್ತದೆ ಎಂಬುದು ಗೊತ್ತಿಲ್ಲ ಎಂದ ಅವರು, ಸತೀಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷರಾಗಬಹುದು ಎಂದರು.
ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಈ ಅವಧಿಯಲ್ಲೇ ಮಾಡುತ್ತೇನೆ. ಅವರು, ತುಮಕೂರನ್ನು ತಿಪಟೂರು, ಮಧುಗಿರಿ, ತುಮಕೂರು ಆಗಿ ಮೂರು ಜಿಲ್ಲೆ ಮಾಡಬಹುದು ಎಂದರು. ರಾಜಣ್ಣ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಗುಬ್ಬಿ ಶಾಸಕ ಶ್ರೀನಿವಾಸ್ ಗೈರು ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಭಿಮಾನಿ ಬಳಗದಿಂದ ಮಾಡಿರುವ ಕಾರ್ಯುಕ್ರಮ. ನಾನು ಯಾರನ್ನು ಕರೆದಿಲ್ಲ. ಕಮಿಟಿ ಕರೆದಿರುವವರು ಬಂದಿದ್ದಾರೆ ಎಂದರು.
