*  ‘ಗೋವಾ ಮೈಗ್ರಂಟ್ಸ್‌ ಕಮ್ಯೂನಿಟೀಸ್’ ಹೆಸರಲ್ಲಿ ಒಂದಾದ ವಲಸಿಗರು  *   ಫೆಬ್ರವರಿಯಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ *   ಗೋವಾ ವಲಸಿಗರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ   

ಮಲ್ಲಿಕಾರ್ಜುನ ಸಿದ್ದಣ್ಣವರ

ಪಣಜಿ(ಜ.06): ಕಡಲ ಕಿನಾರೆಯ ಪುಟ್ಟ ರಾಜ್ಯ ಗೋವಾ(Goa) ಇದೀಗ ಮತ್ತೊಂದು ಚುನಾವಣೆಗೆ(Election) ಸಜ್ಜಾಗಿದೆ. ತಾವಿಲ್ಲಿ ದುಡಿಯಲು ಕೂಲಿಗೆ ಬಂದವರು ಎಂದು ಏನೆಲ್ಲ ಅವಮಾನ, ಹಿಂಸೆಗಳನ್ನು ಸಹಿಸಿಕೊಂಡಿದ್ದ ಕನ್ನಡಿಗರೂ(Kanandigas) ಸೇರಿದಂತೆ ಎಲ್ಲ ವಲಸಿಗರು ‘ಗೋವಾ ಮೈಗ್ರಂಟ್ಸ್ ಕಮ್ಯೂನಿಟೀಸ್’(Goa Migrants Communities) ವೇದಿಕೆಯಡಿ ಒಂದಾಗಿ ರಾಜಕೀಯ ಪಕ್ಷಗಳ ಎದುರು ಹಕ್ಕು ಮಂಡಿಸುತ್ತಿದ್ದು, ಚುನಾವಣೆ ರಂಗೇರುವಂತೆ ಮಾಡಿದೆ. ಗೋವಾ ವಿಧಾನಸಭೆಯ(Goa Assembly) 40 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. 

ಆಧಾರ್ ಅನ್ವಯ ಸದ್ಯ ಗೋವೆಯ ಜನಸಂಖ್ಯೆ 16 ಲಕ್ಷ ದಾಟಿದೆ. ಇದರಲ್ಲಿ ಶೇ.34 ರಷ್ಟು ಜನ ವಲಸಿಗರು(Immigrants). ಅದರಲ್ಲೂ ಕನ್ನಡಿಗರೇ ಹೆಚ್ಚು. ಇವರಿಗೆಲ್ಲ ಗೋವಾ ಸರ್ಕಾರ(Government of Goa) ಆಧಾರ್ ಕಾರ್ಡ್, ಮತದಾರ ಚೀಟಿ ನೀಡಿದೆ. ಪ್ರತಿ ಚುನಾವಣೆಯಲ್ಲೂ ಇವರು ಮತ ಚಲಾಯಿಸುತ್ತ ಬಂದಿದ್ದಾರೆ. ಆದರೆ, ಹೀಗೆ ಮತದಾನ ಮಾಡಿದ ತಮ್ಮನ್ನೂ ಗೋವನ್ನರಂತೆ ಕಂಡು ಪಿಂಚಣಿ, ರೇಷನ್, ಸೂರು, ನೌಕರಿ ಸೇರಿದಂತೆ ಸರ್ಕಾರಿ ಸೌಲಭ್ಯ ಕೊಡಿ ಎಂದು ಕೇಳಿದಾಗಲೆಲ್ಲ ಒಕ್ಕಲೆಬ್ಬಿಸುವ ಬೆದರಿಕೆ ಹಾಕುತ್ತ ಬಂದಿದೆ ಇಲ್ಲಿನ ಸರ್ಕಾರ. ಅಚ್ಚರಿಯೆಂದರೆ, ಈ ಒಕ್ಕಲೆಬ್ಬಿಸುವ ಹಿಂಸೆಗೆ ಕನ್ನಡಿಗರಷ್ಟೇ ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಕನ್ನಡಿಗರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ.

ವಸತಿ ಹೀನ ಗೋವಾ ಕನ್ನಡಿಗರಿಗೆ 3 ದಿನದಲ್ಲಿ ವಸತಿ ಭಾಗ್ಯ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಮೈಗ್ರಂಟ್ಸ್ ಕಮ್ಯೂನಿಟೀಸ್: 

ಈ ಬಾರಿ ಕನ್ನಡಿಗರು ಉಳಿದ ವಲಸಿಗರನ್ನು (ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಉತ್ತರ ಪ್ರದೇಶ) ಸೇರಿಸಿಕೊಂಡು ‘ಗೋವಾ ಮೈಗ್ರಂಟ್ಸ್‌ ಕಮ್ಯೂನಿಟೀಸ್’ ಒಕ್ಕೂಟ ಮಾಡಿಕೊಂಡು ಚುನಾವಣೆ ಎದುರಿಸಲು ತಯಾರಾಗಿರುವ ಆಯಾ ಪಕ್ಷಗಳ ಸಾರಥಿಗಳನ್ನು ಕಂಡು ‘ನಮ್ಮ ಬೇಡಿಕೆಗೆ ಸ್ಪಂದಿಸಿದವರಿಗೆ ಮಾತ್ರ ನಮ್ಮ ಮತ’ ಎನ್ನುವ ಸಂದೇಶ ರವಾನಿಸಿದ್ದಾರೆ.

ಹಲವು ದಶಕಗಳಿಂದ ಕನ್ನಡಿಗರ ದನಿಯಾಗಿ ಕೆಲಸ ಮಾಡುತ್ತಿರುವ ಸಿದ್ದಣ್ಣ ಮೇಟಿ(Siddanna Meti) ನೇತೃತ್ವದ ಈ ವಲಸಿಗರ ನಿಯೋಗ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ(BL Santosh), ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ(P Chidambaram), ದಿನೇಶ್ ಗುಂಡೂರಾವ್(Dinesh Gundurao), ಆಪ್‌ನ ಗೋವಾ ಉಸ್ತುವಾರಿ ದುರ್ಗೇಶ್ ಪಟೇಲ್, ಟಿಎಂಸಿಯ ಚರ್ಚಿಲ್ ಅಲೆಮಾವೋ, ಗೋವಾ ಪಾರ್ಡವರ್ಡ್ ಪಕ್ಷದ ಸರದೇಸಾಯಿ ಮುಂತಾವರನ್ನು ಕಂಡು ತಮ್ಮ ಹಕ್ಕು ಮಂಡಿಸಿದ್ದು, ಅವರನ್ನೆಲ್ಲ ಚಿಂತನೆಗೀಡು ಮಾಡಿದೆ.

ಮರ್ಮಗೋವಾ, ವಾಸ್ಕೋ, ದಾಬೋಲಿಂ, ಕೊಟ್ಟಾಯಂ, ಮಾಪುಸಾ, ಪೋಂಡಾ, ಮಡಗಾಂವ ಸೇರಿದಂತೆ ಸುಮಾರು 18 ಕ್ಷೇತ್ರಗಳಲ್ಲಿ ವಲಸಿಗ ಕನ್ನಡಿಗರ ಮತಗಳೇ ನಿರ್ಣಾಯಕ ಆಗಿರುವುದು ರಾಜಕೀಯ ಪಕ್ಷಗಳ ಈ ಚಿಂತೆಗೆ ಕಾರಣ. ಕನ್ನಡಿಗರನ್ನು ನಿರ್ಲಕ್ಷಿಸಿದರೆ ಅಧಿಕಾರ ಕಳೆದುಕೊಂಡಂತೆಯೇ ಎನ್ನುವದು ಅವರಿಗೆ ಖಾತ್ರಿಯಾಗಿದೆ.

ಗೋವಾದಲ್ಲಿ ಕನ್ನಡಿಗರ ಮೇಲೆ ಯಾಕೆ ಸಿಟ್ಟು? ಇಲ್ಲಿದೆ ಸೀಕ್ರೆಟ್ ಸ್ಟೋರಿ

ಕಾರ್ಪೋರೇಷನ್ ರಚಿಸಿ...

ಬಹುದಿನಗಳಿಂದ ಖಾಯಂ ವಾಸವಾಗಿರುವ ಎಲ್ಲ ವಲಸಿಗರನ್ನು ಗೋವನ್ನರೆಂದು ಪರಿಗಣಿಸಿ. ಉಳಿದೆಲ್ಲ ರಾಜ್ಯಗಳಲ್ಲಿ ಇರುವಂತೆ ಇಲ್ಲೂ ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳನ್ನು ವಲಸಿಗರಿಗೆ ನೀಡಿ. ಪ್ರತಿ ಕುಟುಂಬಕ್ಕೂ ಸೂರು, ಶಿಕ್ಷಣ, ಉದ್ಯೋಗ ಸಿಗಲಿ. ಸಂವಿಧಾನ ಬದ್ದವಾಗಿ ಆಯಾ ಸಮುದಾಯಗಳಿಗೆ ಮೀಸಲಾತಿ(Reservation) ಸೌಲಭ್ಯ ಕಲ್ಪಿಸಿ. ವಲಸಿಗರಿಗಾಗಿಯೇ ಪ್ರತ್ಯೇಕ ಆರ್ಥಿಕ ಮತ್ತು ಅಭಿವೃದ್ಧಿ ನಿಗಮ ಸ್ಥಾಪಿಸಿ. ಆ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದವರಿಗೆ ಬಡ್ಡಿ ರಹಿತ ಸಾಲ ನೀಡಿ ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ.

ಇವುಗಳ ಜತೆಗೆ ವಲಸಿಗರಿಗೆ ರಾಜಕೀಯ ಪ್ರಾತಿನಿದ್ಯ ನೀಡಲು ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಂಡು ಸರ್ಕಾರದ ಭಾಗವಾಗಿಸಬೇಕು ಎಂದು ‘ಗೋವಾ ಮೈಗ್ರಂಟ್ಸ್‌ ಕಮ್ಯೂನಿಟೀಸ್’ ಹಕ್ಕು ಮಂಡಿಸಿದೆ ಪೋರ್ಚುಗೀಸರ ಕಪಿಮುಷ್ಟಿಯಿಂದ ಈ ಗೋವೆಯನ್ನು ಬಿಡಿಸಿಕೊಳ್ಳಲು ಅತಿ ಹೆಚ್ಚು ಹೋರಾಡಿದವರು ಕನ್ನಡಿಗರೇ ಆಗಿದ್ದಾರೆ. ಇಂದಿಗೂ ಈ ನಾಡನ್ನು ಕಟ್ಟಿ ಬೆಳೆಸಿದ ಮತ್ತು ಇಂದಿಗೂ ಗೋವೆಯ ಅಭಿವೃದ್ಧಿಗಾಗಿ ಎಲ್ಲ ವಲಸಿಗರು ಬೆವರು ಬಸಿಯುತ್ತಿದ್ದೇವೆ.
ಗೋವಾ ನಮ್ಮದು ಎನ್ನುವ ಹೆಮ್ಮೆ ನಮಗಿದೆ. ಆದರೆ, ಶ್ರಮಜೀವಿಗಳಾದ ನಮ್ಮನ್ನು ಕೆಲವರು ಹೊರಗಿನವರು ಎಂಬಂತೆ ನೋಡಿ ಕಿರುಕುಳ ನೀಡುತ್ತಿದ್ದಾರೆ. ಅವರಿಂದ ನಮಗೆ ರಕ್ಷಣೆ ಬೇಕಿದೆ. ಈ ನಮ್ಮ ಬೇಡಿಕೆಗೆ ಸ್ಪಂದಿಸಿ, ನಮ್ಮನ್ನೂ ಈ ನೆಲದ ಮಕ್ಕಳು ಎಂದು ಅಪ್ಪಿಕೊಳ್ಳುವ ಪಕ್ಷಕ್ಕೆ ನಾವು ಬೆನ್ನೆಲುವಾಗಿ ನಿಲ್ಲುತ್ತೇವೆ ಎನ್ನುವ ಸಂದೇಶ ರವಾನಿಸಿರುವುದು ಗೋವಾ ಚುನಾವಣೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.