ಕರ್ನಾಟಕ ಸರ್ಕಾರದ ಐಎಎಸ್‌ ಅಧಿಕಾರಶಾಹಿಯಲ್ಲಿಯೇ ಇವರೊಬ್ಬ ಪುಣ್ಯಕೋಟಿ ಎಂದೇ ಪರಿಗಣಿಸಲ್ಪಟ್ಟವರು. ಇವರ ಪ್ರಾಮಾಣಿಕತೆ, ಪಾರದರ್ಶಕ ವ್ಯಕ್ತಿತ್ವ, ಸರಳ ಜೀವನಶೈಲಿ, ದಕ್ಷತೆ ಹಾಗೂ ಕಾರ್ಯಕ್ಷಮತೆ, ವೈವಿಧ್ಯಮಯ ಕ್ಷೇತ್ರಗಳ ವಿಷಯಜ್ಞಾನ ಮತ್ತು ಕಂಪ್ಯೂಟರಿನಷ್ಟೇ ಅಗಾಧವಾದ ಜ್ಞಾಪಕಶಕ್ತಿ ಹೀಗೆ ಹಲವಾರು ಗುಣವಿಶೇಷಣಗಳಿಂದಲೇ ಇದುವರೆಗೂ ರಾಜ್ಯವನ್ನಾಳಿದ ಆರು ಮಂದಿ ಮುಖ್ಯಮಂತ್ರಿಗಳಿಗೂ ಪ್ರಧಾನ ಕಾರ್ಯದರ್ಶಿ ಹಾಗೂ ತದನಂತರ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಅತ್ಯಂತ ಅಚ್ಚುಮೆಚ್ಚಿನ, ವಿಶ್ವಾಸಾರ್ಹ ಆಡಳಿತಾಧಿಕಾರಿ ಎನ್ನಿಸಿಕೊಂಡವರು.

2013 ರಲ್ಲಿ ಸೇವಾ ನಿವೃತ್ತಿಯ ವಯೋಮಾನ ತಲುಪಿದಾಗಲೂ ಅವರನ್ನು ಸುಲಭವಾಗಿ ಬಿಟ್ಟುಕೊಡಲಿಚ್ಛಿಸದ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎರಡೆರಡು ಬಾರಿ ವಿಸ್ತರಣೆ ನೀಡುವ ಮೂಲಕ ವ್ಯಕ್ತಿಗತವಾಗಿ ಅವರೆಂತಹ ಅಸಾಮಾನ್ಯ ಪ್ರತಿಭೆ ಮತ್ತು ಅಪಾರ ಅನುಭವವುಳ್ಳ ಅಧಿಕಾರಿ ಎಂಬಂಶವನ್ನು ಮಗದೊಮ್ಮೆ ಎತ್ತಿತೋರಿತ್ತು.

ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ್ ಹಠಾತ್ ದೆಹಲಿಗೆ

ಆ ಮೌಲಿಕ ಪ್ರಶ್ನೆಗಳೇನು?

ಆದರೇನಂತೆ, ಇದೀಗ ಇಂತಹ ಅಪರೂಪದ ಸೇವಾ ದಾಖಲೆ ಮತ್ತು ವೃತ್ತಿಪರ ಖ್ಯಾತಿಯುಳ್ಳ ನಿವೃತ್ತ ಮುಖ್ಯ ಕಾರ‍್ಯದರ್ಶಿ ಎಸ್‌.ವಿ.ರಂಗನಾಥ್‌ ಕುರಿತಂತೆ ಹಲವು ಮೌಲಿಕವಾದ ಪ್ರಶ್ನೆಗಳನ್ನೆತ್ತಲೇಬೇಕಾಗಿ ಬಂದಿದೆ. ಇವು ಅವರ ವ್ಯಕ್ತಿಗತ ಚಾರಿತ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಲ್ಲವೇ ಅಲ್ಲ. ಬದಲಾಗಿ ಇವು ನಮ್ಮ ಸಾರ್ವಜನಿಕ ಬದುಕಿನ ಔಚಿತ್ಯತೆ ಹಾಗೂ ನೀತಿ-ಸಂಹಿತೆಗೆ ಸಂಬಂಧಿಸಿದ ಪ್ರಶ್ನೆಗಳು. ಸಾರ್ವಜನಿಕ ಹಿತಾಸಕ್ತಿ ಹಾಗೂ ಖಾಸಗಿ ಕಾರ್ಪೋರೇಟ್‌ ಹಿತಾಸಕ್ತಿಗಳ ನಡುವಿನ ಪರಸ್ಪರ ತಾತ್ವಿಕ ಸಂಘರ್ಷದಿಂದ ಉದ್ಭವಿಸುವ ಆಚಾರ ಸಂಹಿತೆಯ ಪಾಲನೆಗೆ ಸಂಬಂಧಿಸಿದ ಪ್ರಶ್ನೆಗಳು.

ಅಕ್ಟೋಬರ್‌ 2013ರಲ್ಲಿ ರಾಜ್ಯ ಸರ್ಕಾರದ ಚೀಫ್‌ ಸೆಕ್ರೆಟರಿಯಾಗಿ ನಿವೃತ್ತರಾದಾಗಿನಿಂದಲೂ ಒಂದಿಲ್ಲೊಂದು ಪ್ರತಿಷ್ಠಿತ ಹುದ್ದೆಗಳನ್ನಲಂಕರಿಸಬೇಕೆಂಬ ಆಹ್ವಾನಗಳು ಈ ಹಿರಿಯ ಅಧಿಕಾರಿಯನ್ನು ಅರಸಿಕೊಂಡು ಬಂದಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ ಬಿಡಿ. ಅವುಗಳ ಪೈಕಿ ಪ್ರತಿಷ್ಠಿತ ಇಂಡಸ್ಟ್ರಿಯಲ್‌ ಫೈನಾನ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾದ ನಾನ್‌-ಎಕ್ಸಿಕ್ಯೂಟಿವ್‌ ಚೇರ್‌ಮನ್‌ ಹಾಗೂ ಕರ್ನಾಟಕ ಸರ್ಕಾರದ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹುದ್ದೆಗಳು ಪ್ರಮುಖವಾಗಿದ್ದವು.

ಅದರಲ್ಲೂ ಇಂದಿನ ದಿನಮಾನಗಳಲ್ಲಿ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹುದ್ದೆಯಂತೂ ಪೂರ್ಣಾವಧಿ ಕಾರ್ಯನಿರ್ವಹಣೆ, ನಿರಂತರ ಪ್ರಯೋಗಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಅಪೇಕ್ಷಿಸುವ ಮಹತ್ತರ ಜವಾಬ್ದಾರಿವುಳ್ಳದ್ದಾಗಿದೆ. ಮಂಡಳಿಯ ಅಧ್ಯಕ್ಷರು ಆಯಾ ಕಾಲಘಟ್ಟದಲ್ಲಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಮಂತ್ರಿಗಳೇ ಆಗಿದ್ದು, ಅವರ ನಂತರದ ಮಹತ್ವದ ಪದವಿ ಈ ವೈಸ್‌ ಚೇರ್ಮನ್ನರದ್ದೇ ಆಗಿರುತ್ತದೆ. ಈ ಹುದ್ದೆಯಲ್ಲೂ ಅಷ್ಟೇ, ಸನ್ಮಾನ್ಯ ರಂಗನಾಥರು ತಮ್ಮ ನಿಗದಿತ 5 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿಯೂ ಮತ್ತೆ 6ನೇ ವರ್ಷಕ್ಕೂ ವಿಸ್ತರಣೆಯ ಆದೇಶಗಳನ್ನು ಪಡೆಯುತ್ತಾ ಮುಂದುವರೆದಿದ್ದಾರೆ. ಇದು ಬಿಡಿ, ಅವರಲ್ಲಿ ವಿಶ್ವಾಸವಿರಿಸಿದ ರಾಜ್ಯ ಸರ್ಕಾರದ ವಿವೇಚನಾಧಿಕಾರಕ್ಕೆ ಸಂಬಂಧಿಸಿದ ಸಂಗತಿ. ಆ ಕುರಿತೂ ಯಾರದ್ದೇನೂ ಅಭ್ಯಂತರವಿರಲಾರದು.

ಕಾಂಗ್ರೆಸ್ ರೀ ಎಂಟ್ರಿ ಕೊಡ್ತಿದ್ದಾರೆ ಮಹಾನಾಯಕನ ಪುತ್ರ..!

ಅಭ್ಯಂತರ ಯಾವ ವಿಷಯಕ್ಕೆ?

ಆದರೆ ಅಭ್ಯಂತರವಿರೋದು ಇದೇ ಅವಧಿಯಲ್ಲಿ ಅಂದರೆ 2019ರ ಆಗಸ್ಟ್‌ 9ರಿಂದ ಎಸ್‌.ವಿ. ರಂಗನಾಥ್‌ ಸಾಹೇಬರು ವಿವಾದಗ್ರಸ್ತ ಕೆಫೆ-ಕಾಫಿ ಡೇ ಎಂಬ ಖಾಸಗಿ ಕಾರ್ಪೋರೇಟ್‌ ಕಂಪನಿಯ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಗ್ಗೆ. ಇತ್ತೀಚೆಗಷ್ಟೇ ಅಂದರೆ ಜುಲೈ 31ರಂದು ಆ ಕಾಫಿ-ಡೇ ಕಂಪನಿಯ ಸಂಸ್ಥಾಪಕ ಮುಖ್ಯಸ್ಥರು ಅತ್ಯಂತ ನಿಗೂಢ ಸನ್ನಿವೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದ ವರ್ಷಾಚರಣೆ ಆಚರಿಸಲಾಯಿತು. ಚಿಕ್ಕಮಗಳೂರಿನ ಕಾಫಿಗೆ ಜಗದ್ವಿಖ್ಯಾತ ಪ್ರಸಿದ್ಧಿಯನ್ನು ತಂದುಕೊಟ್ಟಸಾಹಸಿಗ ಹಾಗೂ 30 ಸಾವಿರ ಬಡಕುಟುಂಬಗಳ ಯುವಕ-ಯುವತಿಯರಿಗೆ ಬದುಕು ಕಲ್ಪಿಸಿಕೊಟ್ಟಮಹಾನ್‌ ಉದ್ಯೋಗದಾತ ಎಂಬೆಲ್ಲಾ ಹೊಗಳಿಕೆಯ ಮಾತುಗಳೇನೇ ಇದ್ದರೂ ತನ್ನದೇ ಕಂಪನಿಗೆ ಯಾಮಾರಿಸಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಅಕ್ರಮ ಹಣಕಾಸು ವಹಿವಾಟು ನಡೆಸಿದ್ದರೆಂಬ ಆರೋಪವೇ ಆತನ ದುರಂತ ಸಾವಿಗೆ ಕಾರಣವಾಗಿತ್ತು. ಹಾಗಂತ ಅವರೇ ತಮ್ಮ ವಿದಾಯಪತ್ರದಲ್ಲಿ ಸ್ವತ: ತಪ್ಪೊಪ್ಪಿಗೆಯ ಹೇಳಿಕೆಯನ್ನು ಬರೆದಿಟ್ಟಿದ್ದೂ ಸುದ್ದಿಯಾಗಿತ್ತು.

ಹೀಗೆ ಒಂದು ಪ್ರತಿಷ್ಠಿತ ಮನೆತನದ ಉದ್ಯಮದಾರನೆನಿಸಿದ್ದ ಆ ವ್ಯಕ್ತಿ ಕಡೆಗೂ ತನ್ನ ಕಂಪನಿಯನ್ನು ಆರ್ಥಿಕ ಅಪರಾಧಗಳನ್ನೆದುರಿಸಬೇಕಾದ ಪ್ರಪಾತದ ಅಂಚಿಗೆ ತಂದು ನಿಲ್ಲಿಸಿದ್ದರೆಂಬ ಕಠೋರ ವಾಸ್ತವವನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಇಂತಹ ಕಳಂಕಿತ ಕಂಪನಿಯ ಕಷ್ಟದ ದಿನಗಳಲ್ಲಿ ಅದನ್ನು ಸರಿದಾರಿಗೆ ತಂದು ನಿಲ್ಲಿಸಬೇಕೆಂಬ ಪ್ರಾಮಾಣಿಕ ಕಾಳಜಿಯಿಂದಲೇ ನಿವೃತ್ತ ಐಎಎಸ್‌ ಅಧಿಕಾರಿ ರಂಗನಾಥರು ಆ ಸಂಸ್ಥೆಯ ಮಧ್ಯಂತರ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡಿರಬೇಕು. ಅದು ಅವರ ವೈಯಕ್ತಿಕ ಆಯ್ಕೆ ಮತ್ತು ವೃತ್ತಿ ಸ್ವಾತಂತ್ರ್ಯ ಕೂಡ.

ಎರಡೆರಡು ಹುದ್ದೆ ಏಕೆ?

ಆದರೆ, ಹೀಗೊಂದು ಆರ್ಥಿಕ ಅಪರಾಧದ ತನಿಖೆ ಎದುರಿಸುತ್ತಿರುವ ಖಾಸಗಿ ಕಂಪನಿಯ ಸಾರಥ್ಯ ವಹಿಸಿಕೊಂಡಾಕ್ಷಣವೇ ಅವರಂತಹ ಸಭ್ಯ, ಸಜ್ಜನ ವ್ಯಕ್ತಿ ಮಾಡಬೇಕಿದ್ದ ಮೊಟ್ಟಮೊದಲ ಕೆಲಸವೇ ತಾವು ಅದುವರೆಗೂ ಸುಮಾರು 5 ವರ್ಷಗಳಿಂದ ಅಲಂಕರಿಸಿದ್ದ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ವೈಸ್‌ ಚೇರ್ಮನ್‌ ಎಂಬ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿತ್ತು. ಕನಿಷ್ಠ ಪಕ್ಷ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಘನತೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದಲಾದರೂ ಎಸ್‌.ವಿ. ರಂಗನಾಥರು ಪದವಿತ್ಯಾಗ ಮಾಡಬೇಕಿತ್ತು. ತಮ್ಮ ಆರನೆಯ ವರ್ಷದ ವಿಸ್ತತ ಅವಧಿಯಲ್ಲೂ ರಾಜ್ಯದ ಉನ್ನತ ಶಿಕ್ಷಣ ಮಂಡಳಿಗೆ ರಂಗನಾಥರದ್ದೇ ಉಪಾಧ್ಯಕ್ಷತೆ. ಇದೀಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕಾರ್ಯಪಡೆಗೂ ಅವರದ್ದೇ ಅಧ್ಯಕ್ಷತೆ.

ಇದಿಷ್ಟೇ ಅಲ್ಲ, ರಾಜ್ಯ ಸರ್ಕಾರದ ಪ್ರತಿಷ್ಠಿತ ಹುದ್ದೆಯಲ್ಲಿದ್ದುಕೊಂಡೇ ಖಾಸಗಿ ವಲಯದ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾನ್ಸ್‌ ಡಿಸಿಪ್ಲಿನರಿ ಹೆಲ್ತ್‌ ಸೈನ್ಸಸ್‌, ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹ್ಯೂಮನ್‌ ಸೆಟ್‌್ಲಮೆಂಟ್ಸ್‌ ಹಾಗೂ ಸೆಂಟರ್‌ ಫಾರ್‌ ಸ್ಟಡಿ ಆಫ್‌ ಸೈನ್ಸ್‌, ಟೆಕ್ನಾಲಜಿ ಆ್ಯಂಡ್‌ ಪಾಲಿಸಿ ಎಂಬ ಸಂಸ್ಥೆಗಳಲ್ಲೂ ರಂಗನಾಥ್‌ ಡೈರೆಕ್ಟರ್‌. ಕಾಫಿ-ಡೇ ಎಂಟರ್‌ಪ್ರೈಸಸ್‌ (ರೆಸ್ಟೋರೆಂಟ್ಸ್‌ ಆ್ಯಂಡ್‌ ಬಾ​ರ್‍ಸ್) ಎಂಬ ಕಂಪನಿಯ ಚೇರ್ಮನ್‌. ಇಷ್ಟೇ ಅಲ್ಲ, ಆಟೋ, ಟ್ರಕ್‌ ಮತ್ತು ಮೋಟಾರ್‌ ಸೈಕಲ್‌ ಬಿಡಿಭಾಗ ತಯಾರಿಸುವ ಬಾಷ್‌ ಲಿ. ಕಂಪನಿಗೂ ಇಂಡಿಪೆಂಡೆಂಟ್‌ ನಾನ್‌-ಎಕ್ಸಿಕ್ಯೂಟಿವ್‌ ಡೈರೆಕ್ಟರ್‌.

ಒಟ್ಟಿನಲ್ಲಿ ಎಸ್‌.ವಿ. ರಂಗನಾಥ್‌ ತರದ ಗಣ್ಯ ಅಧಿಕಾರಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳ ಮಧ್ಯದ ಕಾನ್‌ಫ್ಲಿಕ್ಟ್ ಆಫ್‌ ಇಂಟರೆಸ್ಟ್‌ (ಹಿತಾಸಕ್ತಿಗಳ ಸಂಘರ್ಷ) ಎಂಬ ಪಾಪಪ್ರಜ್ಞೆಯೇ ಬಾಧಿಸುತ್ತಿಲ್ಲವೇನೋ.

- ರವೀಂದ್ರ ರೇಷ್ಮೆ

 ಶೈಕ್ಷಣಿಕ ಚಿಂತಕ ಮತ್ತು ರಾಜಕೀಯ ವಿಶ್ಲೇಷಕ