ಕರ್ನಾಟಕದಲ್ಲಿ ಇಂದು ಮೋದಿ ಮಹಾಸಂಗಮ..!
ಚುನಾವಣೆ ಘೋಷಣೆಗೆ ಮುನ್ನ ಬೃಹತ್ ಶಕ್ತಿ ಪ್ರದರ್ಶನ, ದಾವಣಗೆರೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪ್ರಧಾನಿ ಅದ್ಧೂರಿ ತೆರೆ, ಸಿದ್ದರಾಮೋತ್ಸವ, ಕೇಜ್ರಿ ಸಮಾವೇಶ ನಡೆದ ಊರಲ್ಲೇ ಕಮಲ ಪಕ್ಷದ ಕಹಳೆ.
ಬೆಂಗಳೂರು/ದಾವಣಗೆರೆ(ಮಾ.25): ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಶನಿವಾರ) ರಾಜ್ಯಕ್ಕೆ ಆಗಮಿಸಲಿದ್ದು, ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ‘ಮಹಾ ಸಂಗಮ’ ಸಮಾವೇಶದಲ್ಲಿ ಪಾಲ್ಗೊಂಡು ಲಕ್ಷಾಂತರ ಜನ ಸಾರ್ವಜನಿಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.
ದಾವಣಗೆರೆ ಭೇಟಿಗೂ ಮುನ್ನ ಮೋದಿ ಅವರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಬೆಂಗಳೂರಿನಿಂದ ದಾವಣಗೆರೆಗೆ ತೆರಳಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದು ಮೋದಿ ಅವರು ಈ ವರ್ಷ ಕೈಗೊಳ್ಳುತ್ತಿರುವ 7ನೇ ರಾಜ್ಯ ಪ್ರವಾಸವಾಗಿದೆ. ಆದರೆ ಮುಂದಿನ ವಾರದಲ್ಲಿ ಚುನಾವಣೆಯ ವೇಳಾಪಟ್ಟಿಘೋಷಣೆಯಾಗುವುದು ನಿಶ್ಚಿತವಾಗಿದ್ದರಿಂದ ವೇಳಾಪಟ್ಟಿಪ್ರಕಟಗೊಳ್ಳುವ ಮೊದಲಿನ ಕೊನೆಯ ಭೇಟಿ ಆಗಲಿದೆ. ಇನ್ನು ವೇಳಾಪಟ್ಟಿಘೋಷಣೆಯಾದ ಬಳಿಕವೇ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆ ಬಿಜೆಪಿ ಮಹಾಸಂಗಮಕ್ಕೆ ನಾಳೆ ಮೋದಿ: 10 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ
ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರ ನಾಲ್ಕು ತಂಡಗಳು 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮವು ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಶನಿವಾರ ನಡೆಯಲಿದೆ. ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ.
ಇದೇ ದಾವಣಗೆರೆಯಲ್ಲಿ ಕಳೆದ ವರ್ಷ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ‘ಸಿದ್ದರಾಮೋತ್ಸವ’ ಭರ್ಜರಿಯಾಗಿ ನಡೆದಿತ್ತು. ಬಳಿಕ ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷದ ರಾಜ್ಯ ಮಟ್ಟದ ಸಮಾವೇಶ ಜರುಗಿತ್ತು. ಇದೀಗ ಆಡಳಿತಾರೂಢ ಬಿಜೆಪಿಯ ಸರದಿ.
ಕಳೆದ ಮೂರು ತಿಂಗಳಲ್ಲಿ ಹಲವು ಬಾರಿ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ರಾಜ್ಯದ ಎಲ್ಲ ವಿಭಾಗಗಳಲ್ಲೂ ಪ್ರವಾಸ ಕೈಗೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಜತೆಗೆ ಪಕ್ಷದ ಸಮಾವೇಶಗಳಲ್ಲೂ ಪಾಲ್ಗೊಳ್ಳುವ ಮೂಲಕ ಜನರ ಒಲವು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇದುವರೆಗೆ ಅವರು ರಾಜ್ಯದಲ್ಲಿ ಭಾಗಿಯಾಗಿರುವ ಸಮಾವೇಶಗಳಲ್ಲೇ ಶನಿವಾರ ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶ ದೊಡ್ಡದು ಎಂದು ಪರಿಗಣಿಸಲಾಗಿದೆ.
ದಾವಣಗೆರೆ: ನಾಳೆ ಬಿಜೆಪಿ ಸಮಾವೇಶ ಹಿನ್ನೆಲೆ: ಸಂಚಾರ ಮಾರ್ಗ ಬದಲು, ನಿಲುಗಡೆ ಸ್ಥಳ ನಿಗದಿ
ಚಿಕ್ಕಬಳ್ಳಾಪುರ-ಬೆಂಗಳೂರಿಗೂ ಮೋದಿ ಭೇಟಿ:
ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಅವರು ಮೊದಲಿಗೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಮುದ್ದೇನಹಳ್ಳಿಯಲ್ಲಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿ ಸ್ಥಳಕ್ಕೆ ತೆರಳಿ ಅಲ್ಲಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಲಿದ್ದಾರೆ.
ಅಲ್ಲಿಂದ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಆಗಮಿಸಿ ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್ ಮಧ್ಯದ ಮೆಟ್ರೋ ಮಾರ್ಗದ ರೇಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದ (15 ಕಿ.ಮೀ.) ಭಾಗವಾದ ಕೆ.ಆರ್.ಪುರ-ವೈಟ್‌ಫೀಲ್ಡ್‌ನ 13 ಕಿ.ಮೀ. ಒಟ್ಟಾರೆ 4500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದೇ ವೇಳೆ ಮೋದಿ ಅವರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಯೂ ಇದೆ.