2 ದಿನದಲ್ಲಿ 8 ಕಡೆ ಬಿಜೆಪಿ ಪರ ಮತ ಯಾಚನೆ, ಚುನಾವಣೆ ಘೋಷಣೆ ಬಳಿಕ ಮೊದಲ ಪ್ರಚಾರ
ಬೆಂಗಳೂರು(ಏ.29): ಪ್ರಸಕ್ತ ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ಶನಿವಾರದಿಂದ ಮತ್ತೊಂದು ಮಜಲು ತಲುಪಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಪ್ರಚಾರ ಕಾರ್ಯಕ್ರಮ ಆರಂಭವಾಗಲಿದೆ. ಮೋದಿ ಈ ಅವಧಿಯಲ್ಲಿ ಒಟ್ಟು ಆರು ದಿನಗಳ ಕಾಲ ಪ್ರವಾಸ ಕೈಗೊಂಡು ರಾಜ್ಯದ 20 ಸ್ಥಳಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಮೂರು ಕಡೆ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಮೋದಿ ಅವರ ಪ್ರಚಾರ ಯಾತ್ರೆ ಮೂರು ಹಂತಗಳಲ್ಲಿ ನಡೆಯಲಿದೆ.
ಈಗಾಗಲೇ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಹುತೇಕ ಎಲ್ಲ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಸಂಸದರು, ಶಾಸಕರು, ಪದಾಧಿಕಾರಿಗಳ ಬಳಿಕ ಮೋದಿ ಅವರ ಪ್ರವೇಶವಾಗುತ್ತಿದೆ. ಮೋದಿ ಅವರ ಪ್ರಚಾರದ ಬಳಿಕ ಚುನಾವಣೆಯ ಪ್ರಚಾರದ ದಿಕ್ಕೇ ಬದಲಾಗಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ನಂಬಿದ್ದಾರೆ.
ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!
ಮೊದಲ ಹಂತವಾಗಿ ಶನಿವಾರ ಮೋದಿ ಅವರು ಬೀದರ್ ಜಿಲ್ಲೆ ಮೂಲಕ ಪ್ರಚಾರ ಆರಂಭಿಸಲಿದ್ದಾರೆ. ಅಲ್ಲಿನ ಹುಮ್ನಾಬಾದ್, ಬೆಳಗಾವಿ ಜಿಲ್ಲೆ ಕುಡಚಿ ಹಾಗೂ ವಿಜಯಪುರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಬೆಂಗಳೂರು ನಗರದ ಯಶವಂತಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ನೈಸ್ ರಸ್ತೆಯ ಜಂಕ್ಷನ್‌ನಿಂದ ಸುಂಕದಕಟ್ಟೆವರೆಗೆ ರೋಡ್ ಶೋ ನಡೆಸಲಿದ್ದಾರೆ. ರಾಜಭವನದಲ್ಲೇ ವಾಸ್ತವ್ಯ ಹೂಡುವ ಅವರು ಭಾನುವಾರ ಬೆಂಗಳೂರಿನಿಂದ ಕೋಲಾರ, ಹಾಸನ ಜಿಲ್ಲೆಯ ಬೇಲೂರು ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ತೆರಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಸಂಜೆ ಮೈಸೂರು ನಗರದಲ್ಲಿ ರೋಡ್ ಶೋ ನಡೆಸಿ ದೆಹಲಿಗೆ ವಾಪಸಾಗಲಿದ್ದಾರೆ.
ಎರಡನೇ ಹಂತವಾಗಿ ಮೇ 2ರಂದು ಚಿತ್ರದುರ್ಗ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮತಯಾಚಿಸಿದ ಬಳಿಕ ಸಂಜೆ ಕಲಬುರಗಿ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಕಾರವಾರ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ.
ಮೂರನೆಯ ಹಾಗೂ ಕೊನೆಯ ಹಂತವಾಗಿ ಮೇ 6ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ, ಮೈಸೂರು ಜಿಲ್ಲೆಯ ನಂಜನಗೂಡು, ತುಮಕೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 7ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ ಪ್ರವಾಸದ ಬಳಿಕ ಅಂತಿಮವಾಗಿ ಬೆಂಗಳೂರಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಇಂದು: ಬೀದರ್‌ಗೆ ಆಗಮನ. ಹುಮ್ನಾಬಾದ್‌ನಲ್ಲಿ ಸಾರ್ವಜನಿಕ ಸಮಾವೇಶ. ಬಳಿಕ ಬೆಳಗಾವಿ ಜಿಲ್ಲೆ ಕುಡಚಿ ಹಾಗೂ ವಿಜಯಪುರದಲ್ಲಿ ನಡೆವ ಸಮಾವೇಶಗಳಲ್ಲಿ ಭಾಗಿ. ಸಂಜೆ ಬೆಂಗಳೂರಿನ ಸುಂಕದಕಟ್ಟೆ ಸಮೀಪ ರೋಡ್ ಶೋ. ರಾತ್ರಿ ರಾಜಭವನದಲ್ಲಿ ವಾಸ್ತವ್ಯ.
ನಾಳೆ: ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿ ಸಮಾವೇಶದಲ್ಲಿ ಭಾಗಿ. ಬಳಿಕ ಹಾಸನ ಜಿಲ್ಲೆಯ ಬೇಲೂರು, ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಮಾವೇಶ. ಸಂಜೆ ಮೈಸೂರಿನಲ್ಲಿ ರೋಡ್ ಶೋ ನಡೆಸಿ ದೆಹಲಿಗೆ ವಾಪಸ್.
