ಕರ್ನಾಟಕದಲ್ಲಿ ಗ್ಯಾರಂಟಿ ತೆಗೆಯುತ್ತಿದ್ದಾರೆ: ಡಿ.ಕೆ.ಶಿವಕುಮಾರ್‌ಗೆ ಪ್ರಧಾನಿ ಮೋದಿ ಚಾಟಿ!
‘ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲು ಹೊರಟಿದೆ. ಚುನಾವಣೆ ಸಮಯದಲ್ಲಿ ಜನರಿಗೆ ಉಚಿತ ಗ್ಯಾರಂಟಿ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಬಣ್ಣ ಈಗ ಜನರ ಮುಂದೆ ಬಯಲಾಗಿದೆ’ ಎಂದು ಮೋದಿ ಪ್ರಹಾರ ಮಾಡಿದ್ದಾರೆ.
ನವದೆಹಲಿ (ನ.02): ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಗ್ಯಾರಂಟಿ ಯೋಜನೆಯಾದ ‘ಶಕ್ತಿ ಯೋಜನೆ’ಯನ್ನು ಮಾರ್ಪಾಡು ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಹಾಗೂ ಇದಾದ ನಂತರ ‘ಆರ್ಥಿಕವಾಗಿ ಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ನೀಡಬೇಕು’ ಎಂಬ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲು ಹೊರಟಿದೆ. ಚುನಾವಣೆ ಸಮಯದಲ್ಲಿ ಜನರಿಗೆ ಉಚಿತ ಗ್ಯಾರಂಟಿ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಬಣ್ಣ ಈಗ ಜನರ ಮುಂದೆ ಬಯಲಾಗಿದೆ’ ಎಂದು ಪ್ರಹಾರ ಮಾಡಿದ್ದಾರೆ. ಶುಕ್ರವಾರ ಸಂಜೆ ಸರಣಿ ಟ್ವೀಟ್ ಮಾಡಿರುವ ಮೋದಿ, ‘ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಆಂತರಿಕ ರಾಜಕೀಯ ಸಂಘರ್ಷದಲ್ಲಿ ನಿರತವಾಗಿದೆ. ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಬದಲು ಲೂಟಿ ಮಾಡುತ್ತಿದೆ. ಅಷ್ಟೇ ಅಲ್ಲ, ಈಗಿರುವ ಸ್ಕೀಮುಗಳನ್ನು ಹಿಂಪಡೆಯಲು ಕೂಡ ಹೊರಟಿದೆ’ ಎಂದು ಡಿಕೆಶಿ ನೀಡಿದ ‘ಶಕ್ತಿ ಯೋಜನೆ ಪರಿಷ್ಕರಣೆ’ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದ್ದಾರೆ.
ಕಾಂಗ್ರೆಸ್‌ನ ಚುನಾವಣಾ ವಾಗ್ದಾನ ಪಂಚ ಗ್ಯಾರಂಟಿಗಳು ನಿಲ್ಲಲ್ಲ: ಡಿಸಿಎಂ ಡಿಕೆಶಿ ಲೇಖನ
ಇದೇ ವೇಳೆ, ‘ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಸಾಲ ಮನ್ನಾ ಭರವಸೆ ಈಡೇರಿಕೆಗೆ ಕಾಯುತ್ತಿದ್ದಾರೆ. ಈ ಹಿಂದೆ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಅವರು ಕೆಲವು ಭರವಸೆ ನೀಡಿದ್ದರು, ಅದು ಐದು ವರ್ಷಗಳವರೆಗೆ ಜಾರಿಯಾಗಲಿಲ್ಲ. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇಂಥ ಹಲವಾರು ಉದಾಹರಣೆಗಳಿವೆ’ ಎಂದು ಪ್ರಧಾನಿ ಕುಟುಕಿದ್ದಾರೆ.
‘ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂಬ ಕಠಿಣ ಸತ್ಯವನ್ನು ಕಾಂಗ್ರೆಸ್ ಪಕ್ಷ ಅರಿತುಕೊಳ್ಳುತ್ತಿದೆ. ಪ್ರಚಾರದ ವೇಳೆ ಕಾಂಗ್ರೆಸ್ಸಿಗರು ಜನರಿಗೆ ಅನೇಕ ಭರವಸೆ ನೀಡುತ್ತಾರೆ. ಅವನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೂ ತಿಳಿದಿರುತ್ತದೆ. ಹೀಗಾಗಿ ಅಂಥ ಭರವಸೆಗಳನ್ನು ನೀಡಿದ ಅವರ ನಿಜವಾದ ಬಣ್ಣ ಜನರ ಮುಂದೆ ಬಯಲಾಗಿದೆ’ ಎಂದು ಮೋದಿ ಅವರು ‘ಆರ್ಥಿಕ ಸ್ಥಿತಿ ನೋಡಿ ಗ್ಯಾರಂಟಿ ಜಾರಿ ಮಾಡಬೇಕು’ ಎಂಬ ಹೇಳಿಕೆ ಉಲ್ಲೇಖಿಸಿ ಪರೋಕ್ಷ ಟಾಂಗ್ ನೀಡಿದ್ದಾರೆ.
ಕರ್ನಾಟಕದ ಆರ್ಥಿಕ ಸ್ಥಿತಿ ಹದಗೆಟ್ಟಿದೆ: ‘ಇಂದು ಕಾಂಗ್ರೆಸ್ ಸರ್ಕಾರಗಳನ್ನು ಹೊಂದಿರುವ ಯಾವುದೇ ರಾಜ್ಯವನ್ನು ಪರಿಶೀಲಿಸಿ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ - ಈ 3 ರಾಜ್ಯಗಳಲ್ಲೂ ಅಭಿವೃದ್ಧಿಯ ಪಥ ಮತ್ತು ಹಣಕಾಸಿನ ಪರಿಸ್ಥಿತಿ ಹದಗೆಡುತ್ತಿದೆ. ಅವರ ತಥಾಕಥಿತ ಗ್ಯಾರಂಟಿಗಳು ಈಡೇರಿಲ್ಲ, ಇದು ಈ ರಾಜ್ಯಗಳ ಜನರಿಗೆ ಭೀಕರ ವಂಚನೆಯಾಗಿದೆ. ಇಂತಹ ರಾಜಕೀಯದ ಬಲಿಪಶುಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರು. ಇಂಥ ಭರವಸೆಗಳನ್ನು ಅವರಿಗೆ ತಲುಪಿಸುತ್ತಿಲ್ಲ. ಮಾತ್ರವಲ್ಲದೆ ಅವರ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ದುರ್ಬಲಗೊಳಿಸುತ್ತಾರೆ’ ಎಂದು ಕಾಂಗ್ರೆಸ್ಸಿಗರ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.‘ಹೀಗಾಗಿ ಜನರು ಕಾಂಗ್ರೆಸ್ ಪ್ರಾಯೋಜಿತ ನಕಲಿ ಭರವಸೆಯ ಸಂಸ್ಕೃತಿಯ ವಿರುದ್ಧ ದೇಶದ ಎಚ್ಚೆತ್ತುಕೊಳ್ಳಬೇಕಾಗಿದೆ. '
ಹರ್ಯಾಣದ ಜನರು ಕಾಂಗ್ರೆಸ್ ಸುಳ್ಳನ್ನು ಹೇಗೆ ತಿರಸ್ಕರಿಸಿದರು ಮತ್ತು ಸ್ಥಿರ, ಪ್ರಗತಿ ಆಧರಿತ ಸರ್ಕಾರಕ್ಕೆ ಹೇಗೆ ಆದ್ಯತೆ ನೀಡಿದರು ಎಂಬುದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಕಾಂಗ್ರೆಸ್‌ಗೆ ಮತ ನೀಡಿದರೆ ಕಳಪೆ ಆರ್ಥಿಕತೆ ಮತ್ತು ಸಾಟಿಯಿಲ್ಲದ ಲೂಟಿಗೆ ನೀಡುವ ಮತ ಎಂಬ ಅರಿವು ಭಾರತದಾದ್ಯಂತ ಜನರಲ್ಲಿ ಬೆಳೆಯುತ್ತಿದೆ. ಭಾರತದ ಜನರು ಅಭಿವೃದ್ಧಿ ಮತ್ತು ಪ್ರಗತಿಯನ್ನು ಬಯಸುತ್ತಾರೆ’ ಎಂದ ಅವರು, ‘ಫೇಕ್ ಪ್ರಾಮಿಸಿಸ್ ಆಫ್ ಕಾಂಗ್ರೆಸ್’ ಹ್ಯಾಷ್‌ಟ್ಯಾಗ್ ಹಾಕಿ ಇತ್ತೀಚಿನ ಹರ್ಯಾಣ ಫಲಿತಾಂಶವನ್ನು ಉದಾಹರಿಸಿದ್ದಾರೆ.
ಕುಮಾರಸ್ವಾಮಿಯಿಂದ ನಯಾಪೈಸೆ ಉಪಯೋಗವಾಗಲಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್
ಕಾಂಗ್ರೆಸ್‌ಗೆ ಪ್ರಧಾನಿ ತಿವಿತ
- ಚುನಾವಣೆ ಸಮಯದಲ್ಲಿ ಉಚಿತ ಗ್ಯಾರಂಟಿ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್‌ನ ಬಣ್ಣ ಈಗ ಬಯಲಾಗಿದೆ
- ಉಚಿತ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಷ್ಟ ಎಂಬುದು ಈಗ ಅರವಿಗೆ ಬಂದಿದೆ
- ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕ, ಹಿಮಾಚಲ, ತೆಲಂಗಾಣದಲ್ಲಿ ಆರ್ಥಿಕ ಸ್ಥಿತಿ, ಅಭಿವೃದ್ಧಿಯ ಗ್ರಾಫ್ ಕುಸಿಯುತ್ತಿದೆ
- ಕಾಂಗ್ರೆಸ್ ಪಕ್ಷದ ನಕಲಿ ಭರವಸೆ ಸಂಸ್ಕೃತಿಯ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು
- ಹರ್ಯಾಣದ ಜನರು ಹೇಗೆ ಎಚ್ಚೆತ್ತುಕೊಂಡು ಕಾಂಗ್ರೆಸ್‌ನ ಸುಳ್ಳುಗಳನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ನೋಡಿ
- ಸೋಕಾಲ್ಡ್ ಗ್ಯಾರಂಟಿ ಭರವಸೆಗಳನ್ನು ಈಡೇರಿಸದೆ ಇರುವುದು ಕಾಂಗ್ರೆಸ್ ಪಕ್ಷ ಜನರಿಗೆ ಮಾಡಿದ ದ್ರೋಹ
- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಳಜಗಳ ಹಾಗೂ ಲೂಟಿಯಲ್ಲಿ ನಿರತವಾಗಿದೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿಲ್ಲ