ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಪ್ರಧಾನಿ ಮೋದಿ ಶಹಬ್ಬಾಶ್..!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರಕ್ಕೆ ಖದ್ದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಆ.30): ಪ್ರಧಾನಿ ಪರಿಕಲ್ಪನೆಯಂತೆ ದೇಶದ ಮೊದಲ ಆಟಿಕೆ ಉತ್ಪಾದನಾ ಘಟಕ ಕೊಪ್ಪಳದಲ್ಲಿ ಆಗಲಿದೆ ಎಂದು ಟ್ವೀಟ್ ಮಾಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ದೇಶಿ ಆಟಿಕೆಗಳನ್ನು ಅಭಿವೃದ್ದಿ ಪಡಿಸಲು ಇದು ಸಕಾಲವಾಗಿದ್ದು, ಸ್ಥಳೀಯ ಆಟಿಕೆಗಳನ್ನು ತಯಾರಿಸಲು ಹೊಸತಾಗಿ ಉದ್ಯಮಗಳನ್ನು ಆರಂಭಿಸಬೇಕೆಂದು ಪ್ರಧಾನಿ ಮೋದಿ ಭಾನುವಾರದ ಮನ್‌ಕಿ ಬಾತ್‌ನಲ್ಲಿ ಕರೆ ಕೊಟ್ಟಿದ್ದರು. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದರು.
'ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ: 40,000 ಉದ್ಯೋಗವಕಾಶ'
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಆಟಿಕೆ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಕರೆಗೆ ರಾಜ್ಯಗಳು ಉತ್ಸಾಹವನ್ನು ನೋಡಿ ಸಂತೋಷವಾಗಿದೆ ಎಂದು ಹೇಳುವ ಮೂಲಕ ಬಿಎಸ್‌ವೈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿಯವರ #VocalForLocal ಪರಿಕಲ್ಪನೆಗೆ ಅನುಗುಣವಾಗಿ, ಆಟಿಕೆ ತಯಾರಿಕೆ ಮೂಲಕ ಆರ್ಥಿಕತೆ ಹಾಗು ಉದ್ಯೋಗಸೃಷ್ಟಿಗೆ ಬಲ ತುಂಬಲು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ದೇಶ-ವಿದೇಶಗಳ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಿಎಸ್‌ವೈ ಟ್ವೀಟ್ ಮಾಡಿದ್ದರು.