ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸದಸ್ಯರೂ ಸೇರಿದಂತೆ ಹಲವು ಹಿರಿಯ ಮುಖಂಡರಿಗೆ ಮೌಖಿಕವಾಗಿ ಮಾಹಿತಿ ನೀಡಿದ ರಾಜ್ಯ ಘಟಕ
ಬೆಂಗಳೂರು(ಆ.31): ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸುತ್ತಿದ್ದು, ಬಿಜೆಪಿ ರಾಜ್ಯ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಇದುವರೆಗೆ ಅಧಿಕೃತ ನಿರ್ಧಾರ ಹೊರಬಿದ್ದಿಲ್ಲವಾದರೂ ಸಭೆ ನಡೆಸುವ ಕುರಿತಂತೆ ಪಕ್ಷದ ರಾಜ್ಯ ಘಟಕದ ವತಿಯಿಂದ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿ ಪ್ರಯತ್ನ ನಡೆಸಲಾಗುತ್ತಿದೆ. ಬುಧವಾರ ಅಥವಾ ಗುರುವಾರ ಸ್ಪಷ್ಟಮಾಹಿತಿ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸದಸ್ಯರೂ ಸೇರಿದಂತೆ ಹಲವು ಹಿರಿಯ ಮುಖಂಡರಿಗೆ ಮೌಖಿಕವಾಗಿ ರಾಜ್ಯ ಘಟಕ ಮಾಹಿತಿ ನೀಡಿದೆ. ಆದರೆ, ಇದು ಕೇವಲ ನಾಯಕರ ವಿಶೇಷ ಸಭೆಯೋ ಅಥವಾ ಕೋರ್ ಕಮಿಟಿ ಸದಸ್ಯರ ಸಭೆಯೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ.
Mangaluru : ಮಂಗಳೂರು ಮೋದಿ ಸಮಾವೇಶದ ಸಿದ್ಧತೆ ಶೇ.80 ಪೂರ್ಣ
ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರು ಅಧಿಕೃತ ಭೇಟಿಗೆ ಆಗಮಿಸಿದ ವೇಳೆ ಪಕ್ಷದ ನಾಯಕರ ಸಭೆ ನಡೆಸಿದ್ದು ತೀರಾ ಕಡಮೆ. ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ ನಾಯಕರೊಂದಿಗೆ ಸಭೆ ನಡೆಸಿದ ಉದಾಹರಣೆಗಳಿವೆ. ಹೀಗಾಗಿ, ಮಂಗಳೂರು ಭೇಟಿ ವೇಳೆ ಪಕ್ಷದ ನಾಯಕರೊಂದಿಗೆ ಸಭೆ ನಡೆಸುವ ಬಗ್ಗೆ ಅನುಮಾನವಿದೆ ಎನ್ನಲಾಗುತ್ತಿದೆ.
ಕಳೆದ ವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು, ಇದು ಚುನಾವಣಾ ವರ್ಷವಾಗಿದ್ದರಿಂದ ಪಕ್ಷ ಸಂಘಟನೆ ಹಿನ್ನೆಲೆ ತಾವು ಪ್ರತಿ ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ, ಈ ಭೇಟಿಯ ವೇಳೆ ಅವರು ಪಕ್ಷ ಸಂಘಟನೆ ಕುರಿತಂತೆ ಪಕ್ಷದ ರಾಜ್ಯ ನಾಯಕರೊಂದಿಗೆ ಸಭೆ ನಡೆÜಸಬೇಕು ಎಂಬುದು ಯಡಿಯೂರಪ್ಪ ಸೇರಿದಂತೆ ರಾಜ್ಯ ಘಟಕದ ಅಭಿಪ್ರಾಯವಾಗಿದೆ.
