Mangaluru : ಮಂಗಳೂರು ಮೋದಿ ಸಮಾವೇಶದ ಸಿದ್ಧತೆ ಶೇ.80 ಪೂರ್ಣ
- ಮಂಗಳೂರು ಮೋದಿ ಸಮಾವೇಶದ ಸಿದ್ಧತೆ ಶೇ.80 ಪೂರ್ಣ
- ಲಕ್ಷಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು, 70 ಸಾವಿರ ಫಲಾನುಭವಿಗಳು ಭಾಗಿ
ಮಂಗಳೂರು (ಆ.31) : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೆ.2ರ ಮಂಗಳೂರು ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು, ಸಮಾವೇಶದ ಶೇ.80 ಸಿದ್ಧತೆಗಳು ಪೂರ್ಣಗೊಂಡಿವೆ. ಅವರು ಸೆ.2ರಂದು ಮಧ್ಯಾಹ್ನ 1 ಗಂಟೆಗೆ ಕೇರಳದ ಕೊಚ್ಚಿಯಿಂದ ಮಂಗಳೂರಿಗೆ ಆಗಮಿಸುವರು. ಕಾರ್ಯಕರ್ತರು ಬೆಳಗ್ಗೆ 11.30ರೊಳಗೆ ಸಮಾವೇಶ ನಡೆಯುವ ಕೂಳೂರಿನ ಗೋಲ್ಡ್‌ಫಿಂಚ್ ಮೈದಾನಕ್ಕೆ ತಲುಪಬೇಕು. ಸಮಾವೇಶದಲ್ಲಿ ಒಟ್ಟು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದ್ದಾರೆ.
ಮಂಗಳೂರು ಮೋದಿ ಸಮಾವೇಶಕ್ಕೆ ನಾಲ್ಕೇ ದಿನ: ಇಂದು ಎಸ್‌ಪಿಜಿ ಆಗಮನ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 1.15ಕ್ಕೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ 3ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಸರ್ಬಾನಂದ ಸೋನೆವಾಲ…, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
1461 ಬಸ್: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಸಮಾವೇಶದ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬೂತ್ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಕಾರ್ಯಕರ್ತರನ್ನು ಕರೆತರಲು ಇದುವರೆಗೆ 1461 ಬಸ್, 200 ಟೆಂಪೊ ಬುಕ್ಕಿಂಗ್ ಮಾಡಲಾಗಿದೆ. ಒಟ್ಟು 1 ಲಕ್ಷ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಉಡುಪಿಯಿಂದ 10 ಸಾವಿರ ಮಂದಿ ಭಾಗವಹಿಸುವರು. ಕೇಂದ್ರ ಸರ್ಕಾರದ ಯೋಜನೆಗಳ 70 ಸಾವಿರ ಮಂದಿ ಫಲಾನುಭವಿಗಳನ್ನು ಜಿಲ್ಲಾಡಳಿತ ಕರೆತರಲಿದೆ. ಆಗಮಿಸುವ ಎಲ್ಲರಿಗೂ ಜಿಲ್ಲಾಡಳಿತದಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿ ಮಂಗಳೂರು ಭೇಟಿ ವೇಳೆ ಒಂದೇ ಕಲ್ಲಿಗೆ ಎರಡು ಹಕ್ಕಿ ಬಿಜೆಪಿ ಗುರಿ..!
ಕಾರ್ಯಕ್ರಮ ಮುಗಿದ ಬಳಿಕ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಭಾಗದ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಆಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಸುದರ್ಶನ ಎಂ. ತಿಳಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿಕಣ್ಣೂರು, ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರ್, ಜಗದೀಶ ಶೇಣವ, ಜಿಲ್ಲಾ ಮಾಧ್ಯಮ ಸಂಯೋಜಕ ಸಂದೇಶ್ ಶೆಟ್ಟಿಇದ್ದರು.