ಇಂದು ಮೋದಿ ಜನ್ಮದಿನ: ರಾಷ್ಟ್ರ ನಿರ್ಮಾಣ ಯಜ್ಞಕ್ಕೆ ಸಮರ್ಪಿಸಿಕೊಂಡ ರಾಜರ್ಷಿ, ಸಂಸದ ಸುಧಾಕರ್

ಸೋಲೇ ಗೆಲುವಿನ ಮೆಟ್ಟಿಲು ಎಂಬುದು ನಿಜ. ಆದರೆ ನನಗೆ ಮಾತ್ರ ವಿಧಾನಸಭಾ ಚುನಾವಣೆಯ ಸೋಲು, ಗೆಲುವಿನ ಮೆಟ್ಟಿಲು ಆಗುವುದರ ಜೊತೆಗೆ, ವಿಶ್ವನಾಯಕನ ಜೊತೆ ಕಾರ್ಯನಿರ್ವಹಿಸುವ ಸದವಕಾಶವನ್ನೂ ಮಾಡಿಕೊಟ್ಟಿದೆ. ನಾನು ಸಂಸತ್ತಿಗೆ ಹೋಗಿ ಅತಿ ಸಮೀಪದಿಂದ ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ನೋಡುವ, ಕಲಿಯುವ, ಅರಿಯುವ ಅವಕಾಶ ಸಿಕ್ಕಿದೆ: ಚಿಕ್ಕಬಳ್ಳಾಪುರ ಸಂಸದ  ಡಾ.ಕೆ.ಸುಧಾಕರ್

PM Narendra Modi is dedicated to nation building Says Chikkaballapur BJP MP Dr K Sudhakar grg

ಬೆಂಗಳೂರು(ಸೆ.17):  ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಒಳಗೊಂಡ ಬಯಲುಸೀಮೆ ಬಹಳ ವರ್ಷಗಳಿಂದ ಕಡೆಗಣನೆಯಾಗಿದೆ. ಆದರೆ ಪ್ರಧಾನಿ ಮೋದಿ ನಾಯಕತ್ವದ ಕೇಂದ್ರ ಸರ್ಕಾರದಿಂದ ಬಯಲುಸೀಮೆಯಲ್ಲಿ ಖಂಡಿತವಾಗಿ ಸುಧಾರಣೆಯ ಜ್ಯೋತಿ ಬೆಳಗಲಿದೆ ಎಂದು ಚಿಕ್ಕಬಳ್ಳಾಪುರ ಸಂಸದ  ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. 

ನತ್ವಹಂ ಕಾಮಯೇ ರಾಜ್ಯಂ, ನ ಸ್ವರ್ಗ೦ ನ ಪುನರ್ಭವಂ । ಕಾಮಯೇ ದುಃಖತಪ್ತಾನಾಮ್ ಪ್ರಾಣಿನಾಮಾರ್ತಿನಾಶನಮ್ | 'ನಾನೆಂದಿಗೂ ರಾಜ್ಯವನ್ನು ಬಯಸಲಾರೆ, ಸ್ವರ್ಗವನ್ನೂ ಅಥವಾ ಪುನರ್ಜನ್ಮವನ್ನು ಬಯಸಲಾರೆ. ನಾನು ಬಯಸುವುದುದುಖದಿಂದ ಬಳಲುವವರ ವೇದನೆ ಪರಿಹರಿಸುವುದನ್ನು ಮಾತ್ರ.' ಮಹಾ ಭಾರತದಲ್ಲಿ ಬರುವ ರಾಜಾ ರಂತಿದೇವನ ಈ ಮಾತುಗಳು ಪ್ರಧಾನಿ ಮೋದಿ ಅವರಿಗೆ ಅಕ್ಷರಶಃ ಒಪುತ್ತದೆ. 

ಮೋದಿ ತವರಲ್ಲಿ ಮೊದಲ 'ವಂದೇ ಮೆಟ್ರೋ' ಚಾಲನೆಗೆ ಕ್ಷಣಗಣನೆ; ಎಷ್ಟು ವೇಗದಲ್ಲಿ ಚಲಿಸುತ್ತೆ ಈ ಟ್ರೈನ್?

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಉತ್ತಮ ಬಹುಮತ ಗಳಿಸಿ ದೇಶಕ್ಕೆ ಅಮೃತ ಕಾಲವನ್ನು ಕಟ್ಟಿಕೊಟ್ಟಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಕಾರಣಗಳಿಂದಾಗಿ ಫಲಿತಾಂಶ ಸ್ವಲ್ಪ ವ್ಯತಿರಿಕ್ತವಾಯಿತು. ಇಷ್ಟಕ್ಕೇ ವಿರೋಧ ಪಕ್ಷಗಳ ನಾಯಕರು ಇದು 'ಮೋದಿ ಸೋಲು' ಎಂದೇ ವಿಶ್ಲೇಷಿಸಿ ಆತ್ಮತೃಪ್ತಿ ಪಟ್ಟುಕೊಂಡರು. ಫಲಿತಾಂಶದ ದಿನ ಇಷ್ಟೆಲ್ಲ ಆಗುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ಫಲಿತಾಂಶದ ಬಗ್ಗೆ ಮಾತುಗಳಿದ್ದರೂ, ಮನಸ್ಸು ಮಾತ್ರ ಭಾರತದ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿತ್ತು. ಅವರ ಸಂಪೂರ್ಣ ಚಿತ್ರ ಮುಂದಿನ 5 ವರ್ಷಗಳ ಕಾಲ ವಿಕಸಿತ ಭಾರತಕ್ಕೆ ಹೇಗೆ ಬುನಾದಿ ನಿರ್ಮಿಸಬೇಕು ಎಂಬ ಕುರಿತಾಗಿತ್ತು. 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವನ್ನು ಜನತೆಗೆ ನೀಡಬೇಕು ಎಂಬ ಗುರಿ ಅವರ ಮಾತಿನಲ್ಲಿತ್ತು. ನೀವು 10 ಗಂಟೆ ಕೆಲಸ ಮಾಡಿದರೆ, ನಾನು 18 ಗಂಟೆ ಕೆಲಸ ಮಾಡುತ್ತೇನೆ ಎಂಬ ಸಂಕಲ್ಪ ಅವರ ನುಡಿಗಳಲ್ಲಿತ್ತು. ಎಲ್ಲ ರಾಜಕೀಯ ನಾಯಕರು ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸುತ್ತಿದ್ದರೆ, ಪ್ರಧಾನಿ ಮೋದಿ ಮಾತ್ರ ಭಾರತೀಯರ ಗುಣಮಟ್ಟದ ಬದುಕಿಗೆ ನಾನೇನು ಮಾಡಬೇಕು ಎಂಬ ನೀಲಿನಕ್ಷೆಯನ್ನು ಹಾಕಿಕೊಂಡು ನಮ್ಮೆಲ್ಲರಿಗಿಂತಲೂ ಹತ್ತು ಹೆಜ್ಜೆ ಮುಂದೆ ಹೋಗಿಯಾಗಿತ್ತು. ಅವರ ಈ ಗುಣವನ್ನು ನೋಡಿ ನನಗೆ ಚಾಣಕ್ಯ ಹೇಳಿದ್ದ ಒಂದು ಮಾತು ನೆನಪಾಯಿತು. 'ರಾಜನು ಶಕ್ತಿವಂತನಾಗಿರಬೇಕು, ಆಗ ಮಾತ್ರ ರಾಷ್ಟ್ರವು ಪ್ರಗತಿ ಹೊಂದುತ್ತದೆ. ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಎಂಬ ಮೂರು ಶಕ್ತಿಗಳನ್ನು ರಾಜನು ಹೊಂದಿರಬೇಕು. ಈ ಮಾತು ಅಕ್ಷರಶಃ ಮೋದಿಯವರಿಗೆ ಅನ್ವಯವಾಗುತ್ತದೆ. ಅವರ ಈ ನಾಯಕತ್ವ ಗುಣವೇ ಅವರ ವಿಶೇಷತೆ! 

ಸೋಲೇ ಗೆಲುವಿನ ಮೆಟ್ಟಿಲು ಎಂಬುದು ನಿಜ. ಆದರೆ ನನಗೆ ಮಾತ್ರ ವಿಧಾನಸಭಾ ಚುನಾವಣೆಯ ಸೋಲು, ಗೆಲುವಿನ ಮೆಟ್ಟಿಲು ಆಗುವುದರ ಜೊತೆಗೆ, ವಿಶ್ವನಾಯಕನ ಜೊತೆ ಕಾರ್ಯನಿರ್ವಹಿಸುವ ಸದವಕಾಶವನ್ನೂ ಮಾಡಿಕೊಟ್ಟಿದೆ. ನಾನು ಸಂಸತ್ತಿಗೆ ಹೋಗಿ ಅತಿ ಸಮೀಪದಿಂದ ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ನೋಡುವ, ಕಲಿಯುವ, ಅರಿಯುವ ಅವಕಾಶ ಸಿಕ್ಕಿದೆ. ಇಂತಹ ಆದರ್ಶಪ್ರಾಯರಾದ ಪ್ರಧಾನಿಯವರು 74 ವರ್ಷ ಪೂರೈಸಿದ್ದಾರೆ. ಅವರ ಬದುಕಿನ ಈ ಸಾರ್ಥಕ ವರ್ಷಗಳು ಭಾರತದ ರಾಜಕೀಯ ಇತಿಹಾಸದ ದೀರ್ಘ ನೋಟವನ್ನೇ ಹೊಂದಿವೆ. 

ದೇಶ ಸುತ್ತಿದ ಮೋದಿ 

ತೀರಾ ಬಡ ಕುಟುಂಬದಿಂದ ಬಂದ ನರೇಂದ್ರ ಮೋದಿ, ಚಹಾ ಮಾರಾಟ ಮಾಡುವುದೂ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. 17ನೇ ವಯಸ್ಸಿನಲ್ಲಿ ದೇಶದ ವಿವಿಧ ಭಾಗಗಳನ್ನು ಸುತ್ತಾಡಿಜನಜೀವನ, ಕಷ್ಟಗಳು,ದೇಶದ ಆರ್ಥಿಕ ಹಾಗೂಸಾಮಾಜಿಕ ಪರಿಸ್ಥಿತಿಯನ್ನು ಅರಿತುಕೊಂಡಿದ್ದರು. ಈ ದೇಶಕ್ಕೆ ತಾನೇನಾದರೂ ಮಾಡದೇ ಹೋದರೆ ತನ್ನ ಬದುಕು ನಷ್ಟವಾಗುತ್ತದೆ ಎಂದುಕೊಂಡು ದೇಶಕ್ಕಾಗಿ ಬದುಕು ಸಮರ್ಪಿಸಿ ಬಿಟ್ಟರು. ಈ 74ನೇ ಜನ್ಮ ದಿನ ಎಂದರೆ ಕೇವಲ ಹುಟ್ಟಿದ ದಿನದ ಆಚರಣೆಯಲ್ಲ, ಅದು ಭಾರತದ ಅಭಿವೃದ್ಧಿಗೆ ಮೀಸಲಿಟ್ಟ ಬದುಕಿನ ವರ್ಷಗಳು. ಪ್ರಧಾನಿ ಮೋದಿಯವರ ಸುತ್ತಾಟದ ಈ ಅನುಭವವನ್ನು ಮುಖ್ಯಮಂತ್ರಿ, ಪ್ರಧಾನಿಯಾದ ಬಳಿಕ ಜನಪರ ಯೋಜನೆಗಳ ಮೂಲಕವೂ ನೋಡಬಹುದು. ಮೂರನೇ ಬಾರಿಗೆ ಅವರು ಪ್ರಧಾನಿಯಾದ ಕೂಡಲೇ ಕಿಸಾನ್ ಸಮ್ಮಾನ್ ನಿಧಿಯಡಿ, 9 ಕೋಟಿ ಅನ್ನದಾತರಿಗೆ 20,000 ಕೋಟಿ ಬಿಡುಗಡೆ ಮಾಡಿದ್ದಾರೆ. ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದಾರೆ. ಇತ್ತೀಚೆಗೆ ಆಯುಷ್ಠಾನ್ ಭಾರತ್ ಯೋಜನೆಯಡಿ, ಆದಾಯ ಮಿತಿ ಇಲ್ಲದೆ 70 ವರ್ಷ ದಾಟಿದ ಎಲ್ಲರಿಗೂ 5 ಲಕ್ಷ ರು. ವಿಮೆ ನೀಡಲಾಗುತ್ತಿದೆ. ಸ್ವಚ್ಛ ಭಾರತ್, ಜಲಜೀವನ್, ಮುದ್ರಾ ಮೊದಲಾದ ಯೋಜನೆಗಳು, ವಿಧಿ 370 ರದ್ದು, ತ್ರಿವಳಿ ತಲಾಖ್ ನಿಷೇಧ, ಭಾರತೀಯ ನ್ಯಾಯ ಸಂಹಿತೆ ರಚನೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೊದಲಾದ ನೀತಿಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಹೊಸ ಆಶಾಕಿರಣದತ್ತ ನಡೆಸುತ್ತಿದ್ದಾರೆ. 

ದೇಶದ ಜನತೆಗೆ ಸಂತಸದ ಸುದ್ದಿ ಕೊಟ್ಟ ಮೋದಿ ಸರ್ಕಾರ..!

2014ಕ್ಕೂ ಮುನ್ನ ಭಾರತ ಅನೇಕ ಕ್ಷೇತ್ರಗಳಲ್ಲಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಇದನ್ನು ಬದಲಾಯಿಸಿ ಆತ್ಮನಿರ್ಭರದ ಪರಿಕಲ್ಪನೆಯನ್ನು ಪ್ರಧಾನಿಮೋದಿತಂದರು. ಹಿಂದೆಲ್ಲ ಉತ್ಪನ್ನಗಳಲ್ಲಿ ಮೇಡ್ ಇನ್ ಚೈನಾ, ಮೇಡ್ ಇನ್ ಜಪಾನ್ ಎಂಬ ಸಾಲು ಕಂಡುಬರುತ್ತಿದ್ದರೆ, ಇನ್ನು ಮೇಡ್ ಇನ್ ಇಂಡಿಯಾ' ಎಂಬ ಸಾಲು ಹೆಚ್ಚಾಗಿ ಕಂಡುಬರಲಿದೆ. ದೇಶವನ್ನು ಸ್ವಾವಲಂಬನೆಯ ಹಾದಿಯಲ್ಲಿ ಕೊಂಡೊಯ್ದು, ಬಲಿಷ್ಠ ಆರ್ಥಿಕತೆಯಲ್ಲೊಂದಾಗಿಸುವುದು ಪ್ರಧಾನಿ ಮೋದಿಯವರ ಆದ್ಯತೆ. 

ಬಯಲುಸೀಮೆಗೆ ಹೊಸ ಭರವಸೆ 

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಒಳಗೊಂಡ ಬಯಲುಸೀಮೆ ಬಹಳ ವರ್ಷಗಳಿಂದ ಕಡೆಗಣನೆಯಾಗಿದೆ. ರಾಜ್ಯ ಸರ್ಕಾರದಿಂದ ಈ ಭಾಗಕ್ಕೆ ಅಭಿವೃದ್ಧಿ ಯೋಜನೆಗಳು ಬರಬಹುದು ಎಂಬ ಭರವಸೆಯೇನೂ ಜನರಿಗಿಲ್ಲ. ಆದರೆ ಪ್ರಧಾನಿ ಮೋದಿ ನಾಯಕತ್ವದ ಕೇಂದ್ರ ಸರ್ಕಾರದಿಂದ ಬಯಲುಸೀಮೆಯಲ್ಲಿ ಖಂಡಿತವಾಗಿ ಸುಧಾರಣೆಯ ಜ್ಯೋತಿ ಬೆಳಗಲಿದೆ. ಇದಕ್ಕೆ ಸಾಕ್ಷಿಯಾಗಿ ಈ ಬಾರಿಯ ಬಜೆಟ್‌ನಲ್ಲೇ ಬಯಲುಸೀಮೆ ಭಾಗಕ್ಕೆ ಅನುಕೂಲವಾಗುವಂತೆ ಬೆಂಗಳೂರು-ಹೈದರಾಬಾದ್ ಕೈಗಾರಿಕಾ ಕಾರಿಡಾರ್ ನೀಡಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕಾಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆಯಲಾಗಿದೆ. ಅಮೃತ್ 1.0 ಯೋಜನೆಯಡಿ, ವಿವಿಧ ಕಾಮಗಾರಿಗಳಿಗೆ 121 ಕೋಟಿ ರು. ಅನುದಾನ ನೀಡಲಾಗಿದೆ. ಆವಾಸ್ ವಸತಿ, ಜಲಜೀವನ್, ಮುದ್ರಾ ಸಾಲ,ಆಯುಷ್ಮಾನ್ ಭಾರತ್ ಮೊದಲಾದಯೋಜನೆಗಳಡಿ ಇನ್ನಷ್ಟು ಫಲಾನುಭವಿಗಳನ್ನು ತಲುಪಲಾಗುತ್ತಿದೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಗುರಿಯೊಂದಿಗೆ ವಿಕಸಿತ ಚಿಕ್ಕಬಳ್ಳಾಪುರವೂ ಸಾಕಾರಗೊಳ್ಳಲಿದೆ.

Latest Videos
Follow Us:
Download App:
  • android
  • ios