ಜಮ್ಮು ಕಾಶ್ಮೀರಿದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಮೂವರು ಕನ್ನಡಿಗರು ಸೇರಿದಂತೆ ಅಮಾಯಕ ಪ್ರವಾಸಿಗರು ಬಲಿಯಾದ ಪ್ರಕರಣದಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.  

ಕಲಬುರಗಿ (ಏ.24): ಜಮ್ಮು ಕಾಶ್ಮೀರಿದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಮೂವರು ಕನ್ನಡಿಗರು ಸೇರಿದಂತೆ ಅಮಾಯಕ ಪ್ರವಾಸಿಗರು ಬಲಿಯಾದ ಪ್ರಕರಣದಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ‌ ಸೇನೆಯಲ್ಲಿ ನೇಮಕಾತಿ ಮಾಡಿಕೊಂಡಿಲ್ಲ, ಅಗ್ನಿವೀರ ಅಂತ ಕೇವಲ ಕೆಲವು ವರ್ಷಕ್ಕೆ ಸೀಮಿತವಾಗಿ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸೇನಾ ನೇಮಕಾತಿ ನಡೆಯುತ್ತಿಲ್ಲ ಎಂದರು.

ಹೆಚ್ಚುತ್ತಿರುವ ಜನಸಂಖ್ಯೆಗೆ ಅನಗುಣವಾಗಿ ಸೇನಾ ನೇಮಕಾತಿ ಮಾಡಿಕೊಂಡು ಬಂದೋಬಸ್ತ್ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಕೇಂದ್ರ ಗುಪ್ತ ಚರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿಯವರು ಕೇಂದ್ರದತ್ತ ಬೆರಳು ತೋರಿಸಿದರು. ಉಗ್ರರನ್ನು ಸದೆ ಬಡಿಯುವ ಕೆಲಸ ಪ್ರಧಾನಿ ಮೋದಿ ಮಾಡಬೇಕು. ಉಗ್ರರ ಮೂಲ ಗುರುತಿಸಿ ಸದೆ ಬಡೆಯಲು ಮಾಡಬೇಕಾದ ಎಲ್ಲಾ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇಂದಿರಾಗಾಂಧಿ ಪ್ರಧಾನಿ ಇದ್ದಾಗ ಶತ್ರು ರಾಷ್ಟ್ರ ಇಬ್ಬಾಗ ಆಗುವಂತೆ ಮಾಡಿದ್ದರು. ಅದಕ್ಕಾಗಿಯೇ ದೇಶ ಅವರನ್ನು ಉಕ್ಕಿನ ಮಹಿಳೆ ಎನ್ನುತ್ತದೆ. ಮೋದಿ ಸಹ ಇಂದಿರಾ ಗಾಂಧಿಯಂತೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪಬ್ಲಿಕ್‌ನಲ್ಲಿ ಮಾತನಾಡದಂತೆ ಹೈಕಮಾಂಡ್ ಹೇಳಿದೆ: ಕೆಪಿಸಿಸಿ ಅಧ್ಯಕ್ಷರ ಅಥವಾ ಸಿಎಂ ಬದಲಾವಣೆ ಕುರಿತ ಯಾವುದೇ ಚರ್ಚೆಗಳ ಬಗ್ಗೆ ನಾನು‌ ಪಬ್ಲಿಕ್‌ನಲ್ಲಿ (ಸಾರ್ವಜನಿಕವಾಗಿ) ಮಾತನಾಡುವುದಿಲ್ಲ, ಪಬ್ಲಿಕ್‌ನಲ್ಲಿ ಮಾತನಾಡದಂತೆ ಹೈಕಮಾಂಡ್ ಹೇಳಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನೂತನ ಬಸ್‌ ನಿಲ್ದಾಣ ಉದ್ಘಾಟನೆಗೆಂದು ಬುಧವಾರ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಾಧ್ವಾರಕ್ಕೆ ಆಗಮಿಸಿದ್ದ ಅವರು, ಈ ಕುರಿತ ಮಾಧ್ಯಮಗಳ ಪ್ರಶ್ನೆಗಳಿಗೆ ಮೇಲಿನಂತೆ ಪ್ರತಿಕ್ರಿಯಿಸಿದರು. 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಚಾರವಾಗಿ ಅಥವಾ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ನಾನು ಯಾವುದರ ಬಗ್ಗೆಯೂ ಮಾತಾಡಲ್ಲ ಎಂದ ಅವರು, ಬಹಳ ಸ್ಪಷ್ಟವಾಗಿ ಆ ರೀತಿ ಮಾತಾಡಬಾರದು ಅಂತ ಹೈಕಮಾಂಡ್ ಹೇಳಿದೆ ಎಂದರು. 

ಸರಣಿ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಚಿವ ಈಶ್ವರ ಖಂಡ್ರೆ

ಅಲ್ಲದೆ, ಯಾರು ಯಾರು ಈ ಬಗ್ಗೆ ಮಾತಾನಾಡುತ್ತಾರೆಯೋ, ಅವರ ಬಗ್ಗೆಯೂ ನಾನು ಕಮೆಂಟ್ (ಪ್ರತಿಕ್ರಿಯೆ) ಮಾಡಲ್ಲ ಎಂದರು. ಇನ್ನು, ಕರ್ನಾಟಕ ನಂಬರ್ ಒನ್ ಭ್ರಷ್ಟ ರಾಜ್ಯ ಎಂಬ ಶಾಸಕ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದ ಪರಿಸ್ಥಿತಿ ಅವರು ಹೇಳಿದ್ದಾರೆ, ನಮ್ಮ ಅವಧಿಯಲ್ಲಿ ಸುಧಾರಣೆ ಆಗುತ್ತಿದೆ. ಭ್ರಷ್ಟಾಚಾರ ಕಡಿಮೆ ಆಗುತ್ತಿದೆ, 3 ವರ್ಷದಲ್ಲಿ ಸಂಪೂರ್ಣ ಕಡಿಮೆ ಆಗುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇದ್ದಾಗ ನೂರಕ್ಕೆ ನೂರು ಭಾಗ ಭ್ರಷ್ಟಾಚಾರ ದೇಶದಲ್ಲಿ ಜಾಸ್ತಿ ಇತ್ತು ಅಂತ ಹೇಳಿದ್ದಾರೆ, ಆದರೆ ನಮ್ಮ ಅವಧಿಯಲ್ಲಿ ನಡೆದಿರುವುದಲ್ಲ ಎಂದರು.