ಚಿನ್ನ, ಇಂಧನ ಮಿತಬಳಕೆ ಬಗ್ಗೆ ಪ್ರಧಾನಿ ಸಲಹೆಗೆ ಡಿಸಿಎಂ ತಿರುಗೇಟು. ಮೊದಲು ಕೇಂದ್ರದ ಸಚಿವರು ತ್ಯಾಗ ಮಾಡಲಿ,. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬೊಮ್ಮಾಯಿ, ಅಂತಾರಾಷ್ಟ್ರೀಯ ಯುದ್ಧದ ಕಾರಣ ಮುಂಜಾಗ್ರತೆಯಿಂದ ಮೋದಿ ಈ ಸಲಹೆ ನೀಡಿದ್ದು, ಕಾಂಗ್ರೆಸ್‌ಗೆ ತ್ಯಾಗ, ದೇಶಭಕ್ತಿ ಗೊತ್ತಿಲ್ಲ ಎಂದು ಟೀಕೆ
ಬೆಂಗಳೂರು (ಮೇ.12): ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಶುಭ ಕಾರ್ಯಗಳಿಗೆ ಚಿನ್ನ ತೆಗೆದುಕೊಳ್ಳಬೇಡಿ ಎಂದು ಜನರಿಗೆ ಹೇಳಲು ಸಾಧ್ಯವೇ? ಜನರಿಗೆ ಸಲಹೆ ನೀಡುವ ಬದಲು ಮೊದಲು ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳಿಗೆ ಆ ಸೂಚನೆ ನೀಡಲಿ ಎಂದು ಉಪ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.

ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕೇಂದ್ರ ಸಚಿವರು, ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಮಾಡಲಿ. ನಂತರ ಮೋದಿ ಅವರು ಜನರಿಗೆ ಸಂದೇಶ ನೀಡಲಿ ಎಂದು ತಿಳಿಸಿದ್ದಾರೆ.
ಚಿನ್ನ, ತೈಲ ದರ ಏರಿಕೆಗೆ ಕಾರಣವೇನು? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ಅವರು ವಿವರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಜಗತ್ತಿನ ಪರಿಸ್ಥಿತಿ ಸರಿಯಿಲ್ಲ, ಇಂಥ ಸ್ಥಿತಿಯಲ್ಲಿ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂದು ಪ್ರಧಾನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತವಿರುವ ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳು, ಕಾರ್ಯಕರ್ತರಿಂದ ತ್ಯಾಗ ಆರಂಭಿಸಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ ನೀಡಲಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ಸಿಗೆ ತ್ಯಾಗ, ದೇಶಭಕ್ತಿ ಗೊತ್ತಿಲ್ಲ: ಬೊಮ್ಮಾಯಿ ಟೀಕೆ
ಗದಗ: ಇಸ್ರೆಲ್, ಅಮೆರಿಕ, ಇರಾನ್ ಯುದ್ಧ ಮುಗಿಯದ ಕಾರಣ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್ಸಿನವರಿಗೆ ತ್ಯಾಗ, ದೇಶಭಕ್ತಿ ಅನ್ನುವುದೇ ಗೊತ್ತಿಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಇಸ್ರೇಲ್, ಅಮೆರಿಕ ಯುದ್ಧ ನಡೆಯುತ್ತಿದೆ. ಉಕ್ರೇನ್-ರಷ್ಯಾ ಯುದ್ಧವಾದಾಗ ಬಹಳಷ್ಟು ಸಮಸ್ಯೆ ಆಗಿತ್ತು. ಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಗ್ಯಾಸ್ ಸಂಕಷ್ಟ ಬರಬಹುದು. ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಮಿತವ್ಯಯ ಬಳಕೆ ಮಾಡಬೇಕು ಎಂದಿದ್ದಾರೆ. ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಒಂದು ದಿನ ಉಪವಾಸ ಮಾಡಿ ಎಂದಿದ್ದರು. ಒಬ್ಬ ನಾಯಕನ ನೈತಿಕ ಬಲವಿದ್ದಾಗ ಮಾತ್ರ ಹೇಳಲು ಆಗುತ್ತದೆ. ಇದು ಕಾಂಗ್ರೆಸ್ಸಿನವರಿಗೆ ಅರ್ಥ ಆಗುವುದಿಲ್ಲ ಎಂದರು.


