ಬೆಂಗಳೂರು[ಜ.26]: ರಾಜ್ಯ ಸರ್ಕಾರವು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೂ ಹಣವಿಲ್ಲದ ದುಸ್ಥಿತಿಗೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹತಾಶರನ್ನಾಗಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ರಾಜ್ಯವನ್ನು ದಂಡಿಸುತ್ತಿರುವಂತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೇಂದ್ರದಿಂದ ಅನುದಾನ ತರಲು ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನಿಮ್ಮ ಅಧಿಕಾರ ದಾಹಕ್ಕಾಗಿ ರಾಜ್ಯದ ಹಿತ ಏಕೆ ಬಲಿ ಕೊಡುತ್ತೀರಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಕೇಂದ್ರವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಶನಿವಾರ ಸರಣಿ ಟ್ವೀಟ್‌ಗಳ ಮೂಲಕ ಹರಿಹಾಯ್ದಿರುವ ಅವರು, ನರೇಂದ್ರ ಮೋದಿ ದೇಶವನ್ನು ಹಾಗೂ ಯಡಿಯೂರಪ್ಪ ರಾಜ್ಯವನ್ನು ದಿವಾಳಿ ಮಾಡಲು ನಿರ್ಧಾರ ಮಾಡಿದ ಹಾಗಿದೆ. ತಮ್ಮ ವೈಫಲ್ಯದಿಂದ ದೇಶವನ್ನು ಕಬರಸ್ತಾನ್‌ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರು ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಜಪ ಮಾಡುತ್ತಿದ್ದಾರೆ. ನಾಯಕನ ಮೇಲ್ಪಂಕ್ತಿಯನ್ನು ಅನುಸರಿಸುತ್ತಿರುವ ರಾಜ್ಯದ ನಾಯಕರು ರಾಜ್ಯದ ಆರ್ಥಿಕ ದುಸ್ಥಿತಿ ಮರೆಮಾಚಲು ತಲೆಕೆಟ್ಟವರಂತೆ ಕೋಮುದ್ವೇಷಕ್ಕೆ ಪ್ರಚೋದನೆ ನೀಡುವುದರಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಮೇಲೆ ಮೋದಿಗೇಕೆ ಇಷ್ಟು ಸಿಟ್ಟು:

ಖಾಲಿ ಖಜಾನೆ ತುಂಬಲು ರಾಜ್ಯ ಸರ್ಕಾರವು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಪೀಡಿಸುತ್ತಿದೆ. ಸುಭಿಕ್ಷೆಯಿಂದ ಇದ್ದ ರಾಜ್ಯ ಅರಾಜಕತೆಯತ್ತ ಸಾಗುತ್ತಿದೆ. ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ತೆರಿಗೆ ಪಾಲು ಬರುತ್ತಿಲ್ಲ. ಜಿಎಸ್‌ಟಿ ಪರಿಹಾರ ಕೊಡುತ್ತಿಲ್ಲ. ಇತ್ತ ಸಂಪುಟ ವಿಸ್ತರಣೆಗೂ ಒಪ್ಪಿಗೆ ಕೊಡುತ್ತಿಲ್ಲ. ಇಪ್ಪತ್ತು ವರ್ಷಗಳಲ್ಲಿಯೇ ಮೊದಲ ಬಾರಿ ಕೇಂದ್ರ ಸರ್ಕಾರದ ವರಮಾನ ಇಳಿಕೆಯಾಗುತ್ತಿದೆ. ಕರ್ನಾಟಕದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೋಡಿಗೆ ಇಷ್ಟುಸಿಟ್ಟು ಏಕೆ ಎಂದು ಪ್ರಶ್ನಿಸಿದರು.

ಅಡ್ಡಕಸುಬಿಗಳ ಕೈಗೆ ಅಧಿಕಾರ:

ರಾಜ್ಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೂ ಕಾಸಿಲ್ಲದ ದುಸ್ಥಿತಿ ನಿರ್ಮಾಣವಾಗಿದೆ. ದಿನದಿನಕ್ಕೂ ಸಾಲದ ಹೊರೆ ಹೆಚ್ಚಾಗುತ್ತಿದೆ, ಕೇಂದ್ರದ ಅನುದಾನದ ಬಾಕಿ ಏರುತ್ತಿದೆ. ಶೀಘ್ರದಲ್ಲಿ ನೌಕರರ ಸಂಬಳಕ್ಕೂ ತತ್ವಾರ ಬರಲಿದೆ. ಹಣ ಇಲ್ಲದೆ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿದ್ದು, ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಡ್ಡಕಸುಬಿಗಳ ಕೈಗೆ ಅಧಿಕಾರ ಕೊಟ್ಟರೆ ಇದೇ ಗತಿ ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆ, ಅತೃಪ್ತರ ಓಲೈಕೆ, ಹೈಕಮಾಂಡ್‌ಗೆ ಮೊರೆ, ಭಿನ್ನಮತೀಯರಿಗೆ ಸಮಾಧಾನ. ಇವಿಷ್ಟೇ ಕೆಲಸದಲ್ಲಿ ಯಡಿಯೂರಪ್ಪ ಅವರು ಆರು ತಿಂಗಳು ಕಳೆದಿದ್ದಾರೆ. ಆಡಳಿತ ಕೈಗೆ ಸಿಗುತ್ತಿಲ್ಲ. ಹೈಕಮಾಂಡ್‌ ಕ್ಯಾರೇ ಎನ್ನುತ್ತಿಲ್ಲ. ಯಡಿಯೂರಪ್ಪ ಮುಳುಗುತ್ತಿದ್ದಾರೆ. ಜತೆಗೆ ರಾಜ್ಯವನ್ನೂ ಮುಳುಗಿಸಲು ಹೊರಟಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗುತ್ತಿದೆ. ಅಧಿಕಾರಿಗಳು ಬಜೆಟ್‌ ಮಾಡುವುದು ಹೇಗೆ ಎಂದು ತಲೆ ಮೇಲೆ ಕೈಯಿಟ್ಟು ಕುಳಿತಿದ್ದಾರೆ. ಯಡಿಯೂರಪ್ಪ ಅವರೇ, ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯದ ಹಿತ ಏಕೆ ಬಲಿ ಕೊಡುತ್ತೀರಿ ಎಂದು ಒತ್ತಾಯಿಸಿದರು.