40 ಪರ್ಸೆಂಟ್‌ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾಗೂ ಪಾಲಿದೆ: ಶಿವರಾಜ ತಂಗಡಗಿ
* ಕೆಂಪಣ್ಣ ಜವಾಬ್ದಾರಿಯುತ ವ್ಯಕ್ತಿ, ಸುಮ್ಮನೆ ಆರೋಪ ಮಾಡಲ್ಲ
* ರಾಜ್ಯ ಮತ್ತು ಕೇಂದ್ರಕ್ಕೂ ತಲಾ ಶೇ. 20 ಪಾಲು ಇರಬೇಕು
* ಬಿಜೆಪಿಯಲ್ಲಿ ತತ್ವ- ಸಿದ್ಧಾಂತವೇ ಗೊತ್ತಿಲ್ಲ. ಮೂಲ ಬಿಜೆಪಿಗರೇ ಅಲ್ಲಿಲ್ಲ
ಕೊಪ್ಪಳ(ಜೂ.29): ರಾಜ್ಯದಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ವ್ಯವಹಾರದಲ್ಲಿ ಕೇಂದ್ರದ ನಾಯಕರಾದ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪಾಲಿದ್ದು, ಪಾಲು ಕಮ್ಮಿಯಾಗಿರುವುದಕ್ಕೆ ಇದೀಗ ವಿವರಣೆ ಕೇಳುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ದಾಖಲೆಯನ್ನು ನೀಡಿದ್ದಾರೆ. ಹೀಗಾಗಿ ರಾಜ್ಯ ಮತ್ತು ಕೇಂದ್ರಕ್ಕೂ ತಲಾ ಶೇ. 20 ಪಾಲು ಇರಬೇಕು ಎಂದರು.
ಡಿಸೆಂಬರ್‌ನಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರಾಹುಲ್, ಪ್ರಿಯಾಂಕಾ: ತಂಗಡಗಿ
ಕೆಂಪಣ್ಣ ಜವಾಬ್ದಾರಿಯುತ ವ್ಯಕ್ತಿ. ನಿನ್ನೆ ಮೊನ್ನೆ ಗುತ್ತಿಗೆದಾರ ಕೆಲಸ ಮಾಡುತ್ತಿಲ್ಲ. ಹಲವು ವರ್ಷದಿಂದ ಗುತ್ತಿಗೆದಾರರಾಗಿದ್ದಾರೆ. ಅವರು ಆರೋಪವನ್ನು ಸುಮ್ಮನೆ ಮಾಡುವುದಿಲ್ಲ. ಕೆಂಪಣ್ಣ ಆರೋಪ ಮಾಡಿ ಬಹಳಷ್ಟುದಿನಗಳು ಕಳೆದಿವೆ. ಈಗೇಕೆ ಅವರಿಂದ ಮಾಹಿತಿ ಕೇಳಿದ್ದಾರೆ ಎಂದರು.
ಬಿಜೆಪಿಯಲ್ಲಿ ತತ್ವ- ಸಿದ್ಧಾಂತವೇ ಗೊತ್ತಿಲ್ಲ. ಮೂಲ ಬಿಜೆಪಿಗರೇ ಅಲ್ಲಿಲ್ಲ. ಬೊಮ್ಮಾಯಿ ಅವರು ಜನತಾದಳದಿಂದ ಬಿಜೆಪಿಗೆ ಹೋದವರು. ಅವರಿಗೆ ಯಾವುದೇ ಸಿದ್ಧಾಂತ ಗೊತ್ತಿಲ್ಲ ಎಂದರು.