ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಲು ಯುವ ಸಮುದಾಯ ಮುಂದಾಗಬೇಕು. ಅಮೃತ ಕಾಲದಲ್ಲಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ.

ಬೆಂಗಳೂರು (ಜು.06): ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಲು ಯುವ ಸಮುದಾಯ ಮುಂದಾಗಬೇಕು. ಅಮೃತ ಕಾಲದಲ್ಲಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ. ನಗರದಲ್ಲಿ ನಡೆದ ಐಐಟಿ ಮದ್ರಾಸ್‌ನ ಸಂಗಮ್-2025 ಜಾಗತಿಕ ಅನ್ವೇಷಣೆ ಮತ್ತು ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಕೋನವನ್ನು ಹೊಂದಿದೆ. ಈ ಅಮೃತ ಕಾಲದಲ್ಲಿ ಯುವ ಸಮುದಾಯ ದೇಶದ ಏಳಿಗೆಯಲ್ಲಿ ಪಾಲುದಾರನಾಗಬೇಕು ಎಂದರು.

ದಶಕದ ಹಿಂದೆ ಭಾರತ ಹಿಂದುಳಿದ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಆದರೆ, ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಹಲವು ಮಹತ್ವದ ಕಾರ್ಯಕ್ರಮಗಳ ಮೂಲಕ ಈ ತಡೆಗೋಡೆ ದಾಟಲಾಗಿದೆ. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್, ಲೋಕಲ್ ಟು ಗ್ಲೋಬಲ್, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಮಿಷನ್, ಜಲ್ ಜೀವನ್ ಮಿಷನ್ ಮುಂತಾದ ಕಾರ್ಯಕ್ರಮಗಳು ಒಂದು ಹಾರದಲ್ಲಿನ ಮುತ್ತುಗಳಿದ್ದಂತೆ. ಒಂದು ಮುತ್ತು ಕಡಿಮೆಯಾದರೂ, ಅದು ಹಾರ ಎನಿಸಿಕೊಳ್ಳುವುದಿಲ್ಲ. ಎಲ್ಲಾ ಸೌಲಭ್ಯಗಳನ್ನು ಸಮಾಜದ ತಳಭಾಗದ ವ್ಯಕ್ತಿಗಳಿಗೆ ತಲುಪಿಸಲು ಪ್ರಯತ್ನಿಸಲಾಗಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.

ವಿಶ್ವದ 11ನೇ ಅತಿದೊಡ್ಡ ಜಿಡಿಪಿಯಿಂದ ಇಂದು 5ನೇ ಸ್ಥಾನಕ್ಕೇರಿದ ಭಾರತ, ಈ ವರ್ಷಾಂತ್ಯದೊಳಗೆ 4ನೇ ಸ್ಥಾನಕ್ಕೇರಲಿದೆ. 2027ರ ಹೊತ್ತಿಗೆ 3ನೇ ಅತಿದೊಡ್ಡ ಆರ್ಥಿಕತೆ ಆಗಬಹುದು. ಆಳವಾದ ತಂತ್ರಜ್ಞಾನ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು 10,000 ಕೋಟಿ ರು. ಹಂಚಿಕೆ ಮಾಡಲಾಗಿತ್ತು. ನಾವೀನ್ಯತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಮತ್ತಷ್ಟು ಬೆಂಬಲಿಸಲು ಈಗ ಹೆಚ್ಚುವರಿಯಾಗಿ 10,000 ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.