Lok Sabha Election 2024: ಗೆದ್ದರೆ ಬಯಲುಸೀಮೆಗೆ ಶಾಶ್ವತ ನೀರಾವರಿ: ಕೆ.ಸುಧಾಕರ್
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ಕೊಡುವ ಸರ್ಕಾರವಾಗಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಕಿಸಾನ್ ಸಮ್ಮಾನ್‌ನಡಿ ಬಿಜೆಪಿ ಸರ್ಕಾರ ರೈತರಿಗೆ 4,000 ರೂ. ನೀಡುತ್ತಿದ್ದರೆ, ಅದನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಬಿಜೆಪಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಸಹ ರಾಜ್ಯ ಕಾಂಗ್ರೆಸ್ ಕಿತ್ತುಕೊಂಡಿದೆ ಎಂದು ದೂರಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ(ಏ.05): ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದನಾದ ಬಳಿಕ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತೇನೆ. ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಗುರುವಾರ ಅಧಿಕ ಬೆಂಬಲಿಗರದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಬೃಹತ್ ರೋಡ್ ಶೋ ನಡೆಸುವುದರ ಮೂಲಕ ಶಕ್ತಿ ಪ್ರದರ್ಶನ ನಡೆಸಿ, ನಗರದ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ಇದ್ದಂತೆ: ಡಿ.ಕೆ.ಶಿವಕುಮಾರ್
ಕಿತ್ತುಕೊಳ್ಳುವ ಕಾಂಗ್ರೆಸ್ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ಕೊಡುವ ಸರ್ಕಾರವಾಗಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಕಿಸಾನ್ ಸಮ್ಮಾನ್‌ನಡಿ ಬಿಜೆಪಿ ಸರ್ಕಾರ ರೈತರಿಗೆ 4,000 ರೂ. ನೀಡುತ್ತಿದ್ದರೆ, ಅದನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಬಿಜೆಪಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಸಹ ರಾಜ್ಯ ಕಾಂಗ್ರೆಸ್ ಕಿತ್ತುಕೊಂಡಿದೆ ಎಂದು ದೂರಿದರು.
ಅಭಿವೃದ್ಧಿಯ ರಾಜಕಾರಣ, ದೇಶದ ಭದ್ರತೆ ಹಾಗೂ ಯುವಜನರ ಬದುಕು ರೂಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಮೋದಿಗೆ ಕುಟುಂಬ ಇಲ್ಲ ಪರಿವಾರ ಇಲ್ಲ ಎಂದು ಕಾಂಗ್ರೆಸ್ ನವರು ಆರೋಪ ಮಾಡಿದ್ರು. ಆದರೆ ಭಾರತ ದೇಶವೆಲ್ಲ ಮೋದಿಯ ಕುಟುಂಬವಾಗಿದೆ. ಮುಂದಿನ ದಿನಗಳಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಮತ್ತಷ್ಟು ಬಲ ಪಡಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ
ಕಾಂಗ್ರೆಸ್ ಸರ್ಕಾರ ಬಂದು ಎಲ್ಲವನ್ನು ಕಿತ್ತುಕೊಳ್ಳುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮಾಡಿದರು. ಹಾಲು ಒಕ್ಕೂಟವನ್ನು ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಕಿತ್ತುಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ರಸ್ತೆ, ಸೇತುವೆ ನಿರ್ಮಿಸಿಲ್ಲ. ಎಲ್ಲಿಯೂ ಅಭಿವೃದ್ಧಿ ನಡೆಯುತ್ತಿಲ್ಲ. ಯಾವುದೇ ಅಭಿವೃದ್ದಿಯ ಬಗ್ಗೆ ಹೇಳಿ ಕೊಳ್ಳಲು ಅವರ ಬಳಿ ಎನೂ ಇಲ್ಲಾ ಅದಕ್ಕೆ ಕಾಂಗ್ರೆಸ್ ನವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದರು.
ಕಣ್ಣೀರು ಹಾಕಿದ ಡಾ.ಸುಧಾಕರ್
ನಾನು ರೈತ ಕುಟುಂಬದವನೇ ಆಗಿದ್ದು ಈ ಮಣ್ಣಿನ ಮಗ, ನನ್ನ ತಾತಾ ರೈತ. ನನ್ನತಂದೆ ಶಿಕ್ಷಕರಾಗಿದ್ದರು. ರೈತರಾಗಿ ಕಾಯಕ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜನತೆಗೆ ನಾನು ಯಾವುದೇ ಮೋಸ ಮಾಡಿಲ್ಲಾ, ನಾನು ಯಾವತ್ತು ಜಾತಿ ರಾಜಕಾರಣ ಮಾಡಿಲ್ಲಾ. ಆದರೂ ಕಳೆದ ವಿಧಾನಸಭೆ ಚುನಾವಣೆಯ ಬಗ್ಗೆ ನೆನಪಿಸಿಕೊಂಡು ಅಜ್ಞಾತವಾಸ ಅನುಭಿಸಿದ್ದೇನೆ ಎಂದು ಗದ್ಗದಿತರಾದರು.
3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ
ಆಗ ಸುಧಾಕರ್ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾಧಾನ ಪಡಿಸಿ ಮಾತನಾಡಿ, , ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ ಕೆ ಸುಧಾಕರ್ ಅನ್ನು 3 ಲಕ್ಷ ಮತಗಳ ಅಂತರದಿಂದ ಗೆಲ್ಲುಸಿಕೊಂಡು ಬರುವಂತೆ ಮತದಾರರಲ್ಲಿ ಮನವಿ ಮಾಡಿದರು.
ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಾರೆ. ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈಚಾಚಲಿಲ್ಲ. ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ಉತ್ತಮ ಆಡಳಿತ ಕೊಟ್ಟಿದ್ದೇನೆ. ಅದನ್ನ ಈಗಲೂ ಜನರು ನೆನಪು ಮಾಡಿಕೊಳ್ಳುತ್ತಾರೆ. ಜೆಡಿಎಸ್ ಬಿಜೆಪಿ ಮೈತ್ರಿಗೆ ಪ್ರಮೋದ್ ಸಾವಂತ್ ಪಾತ್ರ ದೊಡ್ಡದು. ಅವರೇ ದೆಹಲಿ ನಾಯಕರ ಭೇಟಿಗೆ ಕರೆದುಕೊಂಡು ಹೋಗಿದ್ದು, ಅವರ ಪ್ರಯತ್ನದ ಫಲವಾಗಿ ಇವತ್ತು ಜೆಡಿಎಸ್-ಬಿಜೆಪಿ ಮೈತ್ರಿ ಆಗಿದೆ ಎಂದು ಎಚ್ಡಿಕೆ ಹೇಳಿದರು.
ನೀರಾವರಿಗೆ ಅನುದಾನ ತರದಿದ್ದರೆ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ
ರಾಜ್ಯದ 28 ಸ್ಥಾನವನ್ನೂ ಗೆಲ್ಲಬೇಕು
ದೇಶದಲ್ಲಿ 400 ಕ್ಷೇತ್ರಗಳನ್ನು ಗೆಲ್ಲಲು ರಾಜ್ಯದಲ್ಲಿ 28 ಸ್ಥಾನ ಗೆಲ್ಲುವುದು ಅಗತ್ಯ. ಹತ್ತು ವರ್ಷದ ಆಡಳಿತದ ಬಳಿಕ ದೇಶದಲ್ಲಿ ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ದೇಶದಲ್ಲಿ ಮೋದಿ ಪರವಾದ ಅಲೆ ಇದೆ. ಈ ಅಲೆಯನ್ನು ಮತವಾಗಿ ಪರಿವರ್ತಿಸಬೇಕು ಎಂದು ಕರೆ ನೀಡಿದರು.
ಬೃಹತ್ ರೋಡ್ ಶೋ
ನಗರದ ವಕ್ಕಲಿಗರ ಕಲ್ಯಾಣ ಮಂಟಪದ ಬಳಿಯಿಂದ ಅಂಬೇಡ್ಕರ್ ವೃತ್ತದ ವರೆಗೂ ಬೃಹತ್ ರೋಡ್ ಶೋ ನಡೆಸಿದರು. ರೋಡ್ ಶೋ ನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಸಹಸ್ರಾರು ಕಾರ್ಯಕರ್ತರು ಬಾಗವಹಿಸಿದ್ದರು.
ರೋಡ್ ಶೋನಲ್ಲಿ ಸಂಸದರಾದ ಪಿ.ಸಿ.ಮೋಹನ್,ಮುನಿಸ್ವಾಮಿ, ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ,ಬೈರತಿ ಬಸವರಾಜ್,ಜಿ.ಟಿ ದೇವೇಗೌಡ,ಶಾಸಕ ಧೀರಜ್ ಮುನಿರಾಜು,ಮಾಜಿ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ, ಪಿಳ್ಳಮುನಿಶಾಮಪ್ಪ,ನಿಸರ್ಗ ನಾರಾಯಣಸ್ವಾಮಿ,ಡಾ.ಶ್ರೀನಿವಾಸ ಮೂರ್ತಿ,ಚಂದ್ರಣ್ಣ, ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮುಕ್ತ ಮುನಿಯಪ್ಪ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ರಾಮಲಿಂಗಪ್ಪ,ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ,ನಾಗರಾಜ್,ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಜೆಡಿಎಸ್ ಮುಖಂಡರಾದ ಕೆ.ಆರ್.ರೆಡ್ಡಿ, ಬಂಡ್ಲು ಶ್ರೀನಿವಾಸ್,ವೆಂಕಟರೆಡ್ಡಿ, ಮತ್ತಿತರರು ಭಾಗಿಯಾಗಿದ್ದರು.