ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿದ ವೈಯಕ್ತಿಕ ದಾಳಿಗೆ ಕಲಬುರಗಿಯ ಜನರು ನನ್ನ ಪರ ಪ್ರತಿಭಟನೆ, ಹೋರಾಟ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ (ಜೂ.02): ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿದ ವೈಯಕ್ತಿಕ ದಾಳಿಗೆ ಕಲಬುರಗಿಯ ಜನರು ನನ್ನ ಪರ ಪ್ರತಿಭಟನೆ, ಹೋರಾಟ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ‌ ಬಗ್ಗೆ ಪತ್ರಿಕಾ ಹೇಳಿಕೆ‌ ನೀಡಿರುವ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರ ಷಡ್ಯಂತ್ರಕ್ಕೆ ಪ್ರತಿಯಾಗಿ ಕಲಬುರಗಿಯ ಪ್ರಜ್ಞಾವಂತ ನಾಗರಿಕರು ನನ್ನನ್ನು ಬೆಂಬಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ. ರಾಜಕೀಯವಾಗಿ, ಸೈದ್ದಾಂತಿಕವಾಗಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯವರು ವೈಯಕ್ತಿಕ ದಾಳಿಗಳ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಿದರು.

ಇದನ್ನು ಕಂಡು ಸಹಿಸದೇ ಪ್ರಜ್ಞಾವಂತ ನಾಗರಿಕರಾದ ನೀವು ಸಿಡಿದೆದ್ದಿದ್ದೀರಿ ಎಂದು ಹೋರಾಟಗಾರರಿಗೆ ಪ್ರಿಯಾಂಕ್‌ ಧನ್ಯವಾದ ಹೇಳಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಮನುವಾದದ ಮನಸ್ಥಿತಿಯವರ ಕುತಂತ್ರಗಳು ಸಫಲವಾಗುವುದಿಲ್ಲ. ಪ್ರಿಯಾಂಕ್ ಖರ್ಗೆ ಒಂಟಿಯಲ್ಲ, ನನ್ನೊಂದಿಗೆ ಬಾಬಾ ಸಾಹೇಬರನ್ನು ಅನುಸರಿಸುವ ಹಾಗೂ ಬಸವಣ್ಣನನ್ನು ಆರಾಧಿಸುವ ಸಾವಿರಾರು ಪಡೆಗಳಿವೆ ಎಂಬುದನ್ನು ಕಲಬುರಗಿಯ ಹೋರಾಟ ಎತ್ತಿ ತೋರಿಸಿದೆ ಎಂದು ಸಚಿವ ಖರ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಿಲುವೇನು?: ಜಾತಿ ಗಣತಿ ವರದಿ ಬಗ್ಗೆ ವಿರೋಧ ಪಕ್ಷದವರು, ಬಿಜೆಪಿಯವರು ಅಪಪ್ರಚಾರ ನಿಲ್ಲಿಸಬೇಕು. ಇದರ ಜತೆಗೆ, ಜಾತಿ ಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರ ನಿಲುವೇನು ಎಂದು ತಿಳಿಸಬೇಕು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೊಂದು ಸುಳ್ಳು ವರದಿ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ, ಅವರು ವರದಿಯನ್ನು ತರಿಸಿಕೊಳ್ಳಬೇಕು. ಅದರಲ್ಲಿ ಯಾರ ಸಹಿಗಳು ಇವೆ ಎಂದು ನೋಡಲಿ. ಆಯೋಗದ ಸಮಿತಿಗೆ ಜಯಪ್ರಕಾಶ್ ಹೆಗ್ಡೆ, ಎಚ್.ಎಸ್.ಕಲ್ಯಾಣ ಕುಮಾರ್, ಬಿ.ಎಸ್.ರಾಜಶೇಖರ್, ಅರುಣ್ ಕುಮಾರ್, ಕೆ.ಟಿ.ಸುವರ್ಣ, ಶಾರದಾ ನಾಯ್ಕ್, ದಯಾನಂದ ಅವರು ಸದಸ್ಯರಾಗಿದ್ದರು. ಅವರೇ ವರದಿಗೆ ಸಹಿ ಮಾಡಿದ್ದಾರೆ.

ಇವರೆಲ್ಲ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೇಮಕಗೊಂಡವರು. ಇವರು ಕೂಡ ವರದಿ ಸಿದ್ಧಪಡಿಸುವಲ್ಲಿ ಪಾತ್ರ ಹೊಂದಿದ್ದಾರೆ. ಅದೇ ವರದಿಯನ್ನು ಸಂಪುಟದಲ್ಲಿ ಮಂಡಿಸಲಾಗಿದೆ ಎಂದರು. ಇದೊಂದು ಸರ್ವೇ ವರದಿ. ಸಚಿವ ಸಂಪುಟದಲ್ಲಿ ಮಂಡಿಸಿದ ಬಳಿಕ ಮುಖ್ಯಮಂತ್ರಿಯವರು ಸಚಿವರಿಂದ ಅಭಿಪ್ರಾಯ ಕೇಳಿದ್ದಾರೆ. ನಿಮ್ಮ ಸಮಾಜದ ಮುಖ್ಯಸ್ಥರೊಂದಿಗೆ ಮಾತನಾಡಿ, ಅಭಿಪ್ರಾಯ ಸಂಗ್ರಹಿಸಿ ಲಿಖಿತ ರೂಪದಲ್ಲಿ ಅಭಿಪ್ರಾಯ ನೀಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಆದರೂ, ಬಿಜೆಪಿಯವರಿಗೇಕೆ ಅಷ್ಟೊಂದು ಆತುರ ಎಂದು ಖರ್ಗೆ ಪ್ರಶ್ನಿಸಿದರು.