ಪ್ರಸಕ್ತ 2025–26ನೇ ಹಣಕಾಸು ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ರಾಜ್ಯಕ್ಕೆ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದ್ದು, ತಕ್ಷಣ ಬಿಡುಗಡೆ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರು (ಮೇ.26): ಪ್ರಸಕ್ತ 2025–26ನೇ ಹಣಕಾಸು ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ರಾಜ್ಯಕ್ಕೆ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದ್ದು, ತಕ್ಷಣ ಬಿಡುಗಡೆ ಮಾಡುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರ ಬರೆದಿರುವ ಖರ್ಗೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಅಗತ್ಯವಿರುವ ಎಲ್ಲ ಬಳಕೆಯ ಪ್ರಮಾಣಪತ್ರಗಳು ಮತ್ತು ದಾಖಲೆಗಳನ್ನು ಸಲ್ಲಿಸಿದಾಗ್ಯೂ, ಹಣವನ್ನು ಬಿಡುಗಡೆ ಮಾಡದ ಕಾರಣ ರಾಜ್ಯ ಪ್ರಸ್ತುತ ತೀವ್ರ ಆರ್ಥಿಕ ಮತ್ತು ಆಡಳಿತಾತ್ಮಕ ನಿರ್ಬಂಧಗಳನ್ನು ಎದುರಿಸುತ್ತಿದೆ ಎಂದು ವಿವರಿಸಿದ್ದಾರೆ.
ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯ ಭದ್ರತೆಯನ್ನು ಒದಗಿಸುವ ಈ ಮಹತ್ವದ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಯೋಜನೆಯ ಅವಶ್ಯಕತೆಗಳಿಗೆ ಅನುಗುಣವಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಸಾಮಗ್ರಿ ಹಾಗೂ ನಿಧಿಗಳನ್ನು ಬಿಡುಗಡೆ ಮಾಡದ ಪರಿಣಾಮವಾಗಿ 787.20 ಕೋಟಿ ರು. ಮೊತ್ತದ ಬಿಲ್ ಬಾಕಿ ಉಳಿದಿವೆ. ಇದರೊಂದಿಗೆ ಸುಮಾರು 600 ಕೋಟಿ ರು. ವೇತನ ಹೊಣೆಗಾರಿಕೆಗಳು ಬಾಕಿ ಇವೆ. ಹೀಗಾಗಿ ಬಾಕಿ ಇರುವ ವೇತನ, ಸಾಮಗ್ರಿ ಮತ್ತು ಆಡಳಿತಾತ್ಮಕ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
ಜಾತಿಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಿಲುವೇನು?: ಜಾತಿ ಗಣತಿ ವರದಿ ಬಗ್ಗೆ ವಿರೋಧ ಪಕ್ಷದವರು, ಬಿಜೆಪಿಯವರು ಅಪಪ್ರಚಾರ ನಿಲ್ಲಿಸಬೇಕು. ಇದರ ಜತೆಗೆ, ಜಾತಿ ಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರ ನಿಲುವೇನು ಎಂದು ತಿಳಿಸಬೇಕು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೊಂದು ಸುಳ್ಳು ವರದಿ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ, ಅವರು ವರದಿಯನ್ನು ತರಿಸಿಕೊಳ್ಳಬೇಕು. ಅದರಲ್ಲಿ ಯಾರ ಸಹಿಗಳು ಇವೆ ಎಂದು ನೋಡಲಿ. ಆಯೋಗದ ಸಮಿತಿಗೆ ಜಯಪ್ರಕಾಶ್ ಹೆಗ್ಡೆ, ಎಚ್.ಎಸ್.ಕಲ್ಯಾಣ ಕುಮಾರ್, ಬಿ.ಎಸ್.ರಾಜಶೇಖರ್, ಅರುಣ್ ಕುಮಾರ್, ಕೆ.ಟಿ.ಸುವರ್ಣ, ಶಾರದಾ ನಾಯ್ಕ್, ದಯಾನಂದ ಅವರು ಸದಸ್ಯರಾಗಿದ್ದರು. ಅವರೇ ವರದಿಗೆ ಸಹಿ ಮಾಡಿದ್ದಾರೆ.
ಇವರೆಲ್ಲ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೇಮಕಗೊಂಡವರು. ಇವರು ಕೂಡ ವರದಿ ಸಿದ್ಧಪಡಿಸುವಲ್ಲಿ ಪಾತ್ರ ಹೊಂದಿದ್ದಾರೆ. ಅದೇ ವರದಿಯನ್ನು ಸಂಪುಟದಲ್ಲಿ ಮಂಡಿಸಲಾಗಿದೆ ಎಂದರು. ಇದೊಂದು ಸರ್ವೇ ವರದಿ. ಸಚಿವ ಸಂಪುಟದಲ್ಲಿ ಮಂಡಿಸಿದ ಬಳಿಕ ಮುಖ್ಯಮಂತ್ರಿಯವರು ಸಚಿವರಿಂದ ಅಭಿಪ್ರಾಯ ಕೇಳಿದ್ದಾರೆ. ನಿಮ್ಮ ಸಮಾಜದ ಮುಖ್ಯಸ್ಥರೊಂದಿಗೆ ಮಾತನಾಡಿ, ಅಭಿಪ್ರಾಯ ಸಂಗ್ರಹಿಸಿ ಲಿಖಿತ ರೂಪದಲ್ಲಿ ಅಭಿಪ್ರಾಯ ನೀಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಆದರೂ, ಬಿಜೆಪಿಯವರಿಗೇಕೆ ಅಷ್ಟೊಂದು ಆತುರ ಎಂದು ಖರ್ಗೆ ಪ್ರಶ್ನಿಸಿದರು.
ವರದಿ ಮೂಲ ಪ್ರತಿ ಕಳೆದುಹೋಗಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ವರದಿಯ ಎಲ್ಲಾ ಡೇಟಾ ಜಿಲ್ಲಾಧಿಕಾರಿಗಳ ಬಳಿ ಇದೆ. ಅಗತ್ಯವಿದ್ದರೆ ಆರ್.ಅಶೋಕ್ ಮನೆಗೆ ತಲುಪಿಸಲಾಗುತ್ತದೆ. ವರದಿಯಲ್ಲಿ ಲೋಪ ಇದ್ದರೆ ಪರಿಶೀಲಿಸಬಹುದು. ಬರೀ ಸುಳ್ಳು ಹೇಳಿಕೊಂಡು ಓಡಾಡುವುದೇ ಅವರ ಕೆಲಸನಾ? ಅನುಮಾನ ಇದ್ದರೆ ವರದಿ ಸಿದ್ಧಪಡಿಸಿದವರನ್ನು ಕರೆಸಿಕೊಂಡು ಮಾತನಾಡಲಿ. ದತ್ತಾಂಶ ಸರಿ ಇದೆಯಾ? ತಿದ್ದಿದ್ದಾರಾ ಎಂದು ಅವರನ್ನೇ ಕೇಳಲಿ ಎಂದು ಹೇಳಿದರು.


