ಬೆಂಗ​ಳೂ​ರು (ಸೆ.11): ನಾವು ಸಚಿವರಾಗಲು 14 ತಿಂಗಳು ಕಾದಿದ್ದೆವು. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ಸ್ವಲ್ಪ ದಿನ ಸಹನೆಯಿಂದ ಕಾಯಬೇಕು. ಹೀಗೆಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಸಲಹೆ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 14 ತಿಂಗಳ ಕಾಲ ಕಾನೂನು ಹೋರಾಟ ನಡೆಸಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಚಿವರಾಗಿದ್ದೇವೆ. ಎಲ್ಲದಕ್ಕೂ ಕಾಲ ಬರಬೇಕು. ಇದಕ್ಕಾಗಿ ಸಹನೆಯಿಂದ ಕಾಯಬೇಕು. ಆತುರ ಪಡುವುದರಿಂದ ಪ್ರಯೋಜನವಾಗುವುದಿಲ್ಲ. ಪರಿಷತ್‌ ಸದಸ್ಯರಾಗಿರುವ ಎಚ್‌.ವಿಶ್ವನಾಥ್‌, ಆರ್‌.ಶಂಕರ್‌, ಎಂ.ಟಿ.ಬಿ.ನಾಗರಾಜ್‌ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ಇನ್ಮುಂದೆ ಬೇರೆ ರೋಗಿಗಳಿಗೂ ಚಿಕಿತ್ಸೆ: ಸಚಿವ ಜಾರಕಿಹೊಳಿ

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ಅವರು ಯುವ ನಾಯಕರಾಗಿದ್ದು, ಅವರಿಗೆ ಪಕ್ಷದಲ್ಲಿ ಭವಿಷ್ಯ ಇದೆ. ಯಡಿಯೂರಪ್ಪ ಅವರು ಜನನಾಯಕರಾಗಿ ಬೆಳೆದಂತೆ ವಿಜಯೇಂದ್ರ ಸಹ ಬೆಳೆಯಲಿದ್ದಾರೆ ಎಂದರು.