Lok Sabha Election 2024: ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟ ಪಂಚಮಸಾಲಿ ನಾಯಕರು?
ಲೋಕಸಭಾ ಚುನಾವಣೆ ಕಾವು ಆರಂಭಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಯ ದಿನಾಂಕ ಪ್ರಕಟವಾಗಲಿದ್ದು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಕೂಡಿವೆ. ಟಿಕೆಟ್ ಪಡೆದುಕೊಳ್ಳಲು ತೆರೆಮರೆಯ ಕಸರತ್ತುಗಳು ಕೂಡ ಆರಂಭಗೊಂಡಿವೆ.
ಬೆಳಗಾವಿ(ಮಾ.15): ಲೋಕಸಭಾ ಚುನಾವಣೆ ಕಾವು ಆರಂಭಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಯ ದಿನಾಂಕ ಪ್ರಕಟವಾಗಲಿದ್ದು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಕೂಡಿವೆ. ಟಿಕೆಟ್ ಪಡೆದುಕೊಳ್ಳಲು ತೆರೆಮರೆಯ ಕಸರತ್ತುಗಳು ಕೂಡ ಆರಂಭಗೊಂಡಿವೆ. ಆದರೆ, ಯಾರಿಗೆ ಟಿಕೆಟ್ ನೀಡಿದರೆ ಉತ್ತಮ ಎನ್ನುವ ಚರ್ಚೆಗಳು ಕೂಡ ನಡೆದಿದೆ. ಯಾವ ಸಮುದಾಯದ ಅಭ್ಯರ್ಥಿ ಮಾಡಿದರೆ ತಮಗೆ ಲಾಭವಾಗಲಿದೆ ಎನ್ನುವ ಚರ್ಚೆ ಕೂಡ ಬಿಜೆಪಿ, ಕಾಂಗ್ರೆಸ್‌ನಲ್ಲಿ ಈಗ ಜೋರಾಗಿದೆ.
ಕಿತ್ತೂರು ಕರ್ನಾಟಕ ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರಗಳು ಹಾಲಿ ಬಿಜೆಪಿಯ ಸಂಸದರೇ ಇದ್ದಾರೆ. ವಿಜಯಪುರ ಎಸ್ಸಿ ಮೀಸಲು ಒಂದನ್ನು ಹೊರತುಪಡಿಸಿದರೆ ಉಳಿದ ಮೂರು ಕ್ಷೇತ್ರಗಳು ಸಾಮಾನ್ಯವಾಗಿವೆ. ಆದರೆ, ಬಹುತೇಕ ಈ ಕ್ಷೇತ್ರಗಳಲ್ಲಿ ಬಿಜೆಪಿಯು ಲಿಂಗಾಯತ ಸಮುದಾಯಕ್ಕೆ ಹೆಚ್ಚು ಮಣೆ ಹಾಕಿರುವುದು ಕಂಡುಬಂದಿದೆ. ಆದರೆ, ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷವು ಪಂಚಮಸಾಲಿಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ಈ ಹಿಂದಿನ ಅಭ್ಯರ್ಥಿಗಳೇ ಸಾಕ್ಷಿಯಾಗಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಬಿಜೆಪಿ ಬೆಳಗಾವಿಗೆ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಡ ಕೇಳಿಬಂದಿದೆ.
ಪಂಚ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನ: ಸಚಿವ ಸತೀಶ ಜಾರಕಿಹೊಳಿ
ಯತ್ನಾಳ, ಬಾಬಾಗೌಡ ಬಿಟ್ರೆ ಮತ್ಯಾರಿಗೂ ಸಿಕ್ಕಿಲ್ಲ ಅವಕಾಶ:
ವಿಜಯಪುರ ಸಾಮಾನ್ಯ ಕ್ಷೇತ್ರವಾಗಿದ್ದಾಗ 1999 ಮತ್ತು 2004ರಲ್ಲಿ ಪಂಚಮಸಾಲಿ ಸಮುದಾಯದ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರು. 2008ರಲ್ಲಿ ಅದು ವಿಜಯಪುರ ಮೀಸಲು ಕ್ಷೇತ್ರವಾದ ನಂತರ ಯತ್ನಾಳ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಇನ್ನು ಬೆಳಗಾವಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಬಾಬಾಗೌಡ ಪಾಟೀಲ (ಕೇವಲ ಒಂದು ವರ್ಷ) ಅವರು 1998ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಅದಾದ 1999ರಲ್ಲಿ ನಡೆದ ಚುನಾವಣೆಯಲ್ಲಿ ಅಮರಸಿಂಹ ನಾಯಕ ಅವರು ಆಯ್ಕೆಯಾದರು. ಬಳಿಕ 2004ರಿಂದ 2019ರವರೆಗೆ ಸುರೇಶ ಅಂಗಡಿ ಅವರೇ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸಂಸದರಾಗಿದ್ದರು. ಬಾಗಲಕೋಟೆ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿಯೂ ಪಂಚಮಸಾಲಿ ಮುಖಂಡರಿಗೆ ಆದ್ಯತೆ ಸಿಕ್ಕಿಲ್ಲ ಎಂಬ ಆರೋಪ ಕೂಡ ಬಿಜೆಪಿಯಲ್ಲಿ ಈಗ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಬಾರಿ ಬಾಗಲಕೋಟೆ, ಚಿಕ್ಕೋಡಿಯಲ್ಲಿ ಬಿಜೆಪಿ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ. ಉಳಿದಿರುವ ಬೆಳಗಾವಿ ಕ್ಷೇತ್ರಕ್ಕಾದರೂ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಕಾಂಗ್ರೆಸ್‌ನಲ್ಲಿ ಪಂಚಮಸಾಲಿಗೆ ಹೆಚ್ಚು ಆದ್ಯತೆ:
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿಯಲ್ಲಿ ಹೆಚ್ಚು ಪಂಚಮಸಾಲಿ ಸಮುದಾಯಕ್ಕೆ ಒತ್ತು ನೀಡಿದ್ದಾರೆ. 2014ರಲ್ಲಿ ಚಿಕ್ಕೋಡಿಯಿಂದ ಪ್ರಕಾಶ ಹುಕ್ಕೇರಿ, ಅದೇ ವರ್ಷ ಬೆಳಗಾವಿ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳಕರಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ, ಹುಕ್ಕೇರಿ ವಿಜೇತರಾದರೆ, ಹೆಬ್ಬಾಳಕರ ಸೋತಿದ್ದರು. 2019ರಲ್ಲಿಯೂ ಚಿಕ್ಕೋಡಿಯಿಂದ ಮತ್ತೆ ಅದೇ ಸಮುದಾಯದ ಪ್ರಕಾಶ ಹುಕ್ಕೇರಿ ಮತ್ತು ಬಾಗಲಕೋಟೆಯಿಂದ ವೀಣಾ ಕಾಶಪ್ಪನವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ, ಮೋದಿ ಅಲೆಯಲ್ಲಿ ಇಬ್ಬರೂ ಸೋಲಬೇಕಾಯಿತು. ಬಾಗಲಕೋಟೆಯಲ್ಲಿ ಈ ಬಾರಿಯೂ ಕಾಂಗ್ರೆಸ್‌ನಿಂದ ವೀಣಾ ಕಾಶಪ್ಪನವರ ಟಿಕೆಟ್‌ಗಾಗಿ ಮತ್ತೆ ಪೈಪೋಟಿಯಲ್ಲಿದ್ದಾರೆ. ಅದರಂತೆ ಚಿಕ್ಕೋಡಿಯಲ್ಲಿ ಪ್ರಕಾಶ ಹುಕ್ಕೇರಿ ಹೆಸರು ಕಾಂಗ್ರೆಸ್‌ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಕಾಂಗ್ರೆಸ್‌ನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಮತ ಬ್ಯಾಂಕ್‌ಗೆ ಮಾತ್ರ ಆ ಸಮುದಾಯ ಮೀಸಲಾಗಿದೆ. ಹೀಗಾಗಿ ಈ ಬಾರಿಯಾದರೂ ಪಂಚಮಸಾಲಿ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬ ವಾದ ಕೂಡ ಈಗ ಎದ್ದಿದೆ. ಬಸನಗೌಡ ಪಾಟೀಲ ಯತ್ನಾಳ ಮತ್ತು ಬಾಬಾಗೌಡ ಪಾಟೀಲ ಅವರ ತದನಂತರ ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಲೋಕಸಭೆಗೆ ಸ್ಪರ್ಧಿಸಲು ಯಾರಿಗೂ ಅವಕಾಶವನ್ನೇ ನೀಡಿಲ್ಲ. ಸಮಾಜಕ್ಕೆ ಅವಕಾಶ ಕೊಡಬೇಕೆಂಬ ಆಗ್ರಹ ಈಗ ಕೇಳಿಬರುತ್ತಿದೆ.
ರೈತರು ಉದ್ಯಮಿಗಳಾಗಿ ಬೆಳೆಯಬೇಕು: ಸಚಿವೆ ಶೋಭಾ ಕರಂದ್ಲಾಜೆ
ಅತ್ಯಂತ ವಿಶ್ವಾಸಿಕರು, ಪ್ರಾಮಾಣಿಕತೆ ಮೆರೆಯುವ ಸಮಾಜ ನಮ್ಮದು. ಉತ್ತರಕರ್ನಾಟಕ ಭಾಗದ ಪ್ರತಿಯೊಂದು ಕ್ಷೇತ್ರದಲ್ಲೂ ಪಚಮಸಾಲಿ ಸಮಾಜ ಪ್ರಬಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಈ ಬಾರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕನಿಷ್ಠ 2 ಟಿಕೆಟ್ ನೀಡಬೇಕಿತ್ತು. ಸಮುದಾಯಕ್ಕೆ ಸೂಕ್ತ ರಾಜಕೀಯ ಮನ್ನಣೆ ನೀಡಲು ಪಕ್ಷಗಳ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ನಿಷ್ಠೆಗೆ ಮತ್ತೊಂದು ಹೆಸರೇ ಪಂಚಮಸಾಲಿ ಸಮಾಜ. ರಾಜ್ಯದ ಪ್ರತಿಯೊಂದು ತಾಲೂಕು, ಜಿಲ್ಲೆಯಲ್ಲಿ ಸಂಘಟನೆ ಹೊಂದಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜದ ನಾಯಕರಿಗೆ ಟಿಕೆಟ್ ನೀಡಬೇಕು. ಎಲ್ಲ ಸಮಾಜದವರನ್ನೂ ಒಟ್ಟಿಗೆ ಕರೆದುಕೊಂಡು ಸಾಗುವ ಮನಸ್ಥಿತಿ, ಶಕ್ತಿ ಹೊಂದಿದ ಪಂಚಮಸಾಲಿಗರಿಗೆ ಅವಕಾಶ ಕೊಡಬೇಕು ಎಂದು ಹರಿಹರ ಪಂಚಮಸಾಲಿ ಮಹಾಪೀಠ ಶ್ರೀ ವಚನಾನಂದ ಜಗದ್ಗುರುಗಳು ಹೇಳಿದ್ದಾರೆ.