ಇಂಡಿ ಮೈತ್ರಿಕೂಟಕ್ಕೆ ಮತ್ತಷ್ಟು ಹಿನ್ನೆಡೆ: ದೆಹಲಿಯಲ್ಲಿ ಎಎಪಿಗೆ ಶಾಕ್; 20ಕ್ಕೂ ಹೆಚ್ಚು ಆಪ್ ನಾಯಕರು ಕೈ ಪಕ್ಷಕ್ಕೆ ಸೇರ್ಪಡೆ!
ದೆಹಲಿ ಕಾಂಗ್ರೆಸ್‌ನ ಮಾಜಿ ಕಾರ್ಯದರ್ಶಿಗಳಾದ ಕುಲದೀಪ್ ಭಾಟಿ ಮತ್ತು ಯೋಗೇಂದ್ರ ಭಾಟಿ ಹಾಗೂ ಬ್ಲಾಕ್ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ಆಪ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ನವದೆಹಲಿ (ಸೆಪ್ಟೆಂಬರ್ 29, 2023): ಈಶಾನ್ಯ ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) 20 ಕ್ಕೂ ಹೆಚ್ಚು ನಾಯಕರು ಮತ್ತು ಪದಾಧಿಕಾರಿಗಳು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರಿದ್ದು, ಈ ಮೂಲಕ ಆಫ್‌ಗೆ ಶಾಕ್ ನೀಡಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನವರು ಕೈ ಪಕ್ಷವನ್ನು ಸೇರುವ ನಿರೀಕ್ಷೆಯಿದೆ ಎಂದು ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಗುಂಪಿನಲ್ಲಿ ದೆಹಲಿ ಕಾಂಗ್ರೆಸ್‌ನ ಮಾಜಿ ಕಾರ್ಯದರ್ಶಿಗಳಾದ ಕುಲದೀಪ್ ಭಾಟಿ ಮತ್ತು ಯೋಗೇಂದ್ರ ಭಾಟಿ ಹಾಗೂ ಬ್ಲಾಕ್ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ಸೇರಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷ ಸೇರಲು ಎಎಪಿ ಅನ್ನು ತೊರೆದಿದ್ದಾರೆ. ಕಾಂಗ್ರೆಸ್‌ನ ದೆಹಲಿ ಘಟಕದ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಈ ಹಿಂದೆ ಪಕ್ಷ ತೊರೆದಿರುವ ನಾಯಕರು ಮತ್ತು ಕಾರ್ಯಕರ್ತರಿಗೆ ಮಾತೃ ಪಕ್ಷಕ್ಕೆ ವಾಪಸಾಗುವಂತೆ ಕರೆ ನೀಡಿದ್ದರು.
ಇದನ್ನು ಓದಿ: 3 ಲಕ್ಷ ರೂ. ಹೋಟೆಲ್‌ನಲ್ಲಿ ಮಜಾ ಮಾಡೋರಿಗೆ ಜನರ ನೋವು ಅರ್ಥವಾಗಲ್ಲ: ದೀದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಈ ಮಧ್ಯೆ, ಸದ್ಯದಲ್ಲಿಯೇ ಇನ್ನೂ ಹೆಚ್ಚಿನ ವ್ಯಕ್ತಿಗಳು ಪಕ್ಷಕ್ಕೆ ಸೇರುವ ನಿರೀಕ್ಷೆಯಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಇನ್ನು, ಇದರಿಂದ ವಿರೋಧ ಪಕ್ಷದ ಮೈತ್ರಿಯ ಮೇಲೆ ಸಂಭಾವ್ಯ ಪರಿಣಾಮದ ಬಗ್ಗೆ ಕೇಳಿದಾಗ, ಕಾಂಗ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸಿದೆ ಎಂದು ಹಿರಿಯ ನಾಯಕ ಹೇಳಿದ್ದಾರೆ. ಮೈತ್ರಿ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದ್ದು, ಆ ನಿರ್ಧಾರಕ್ಕೆ ಪಕ್ಷ ಬದ್ಧವಾಗಿರುತ್ತದೆ. ತನ್ನನ್ನು ಹುರಿದುಂಬಿಸುವುದು ಮತ್ತು ಪುನಶ್ಚೇತನಗೊಳಿಸುವುದು ಪಕ್ಷದ ಪ್ರಾಥಮಿಕ ಗುರಿಯಾಗಿದೆ ಎಂದು ಹಿರಿಯ ಸದಸ್ಯರು ವಿವರಿಸಿದರು.
ಅರವಿಂದರ್ ಸಿಂಗ್ ಲವ್ಲಿ ಬಿಜೆಪಿ ಮತ್ತು ಎಎಪಿ ಎರಡೂ ಪಕ್ಷಗಳನ್ನು ಟೀಕಿಸಿದ್ದು, ಅವರ ವಿವಾದಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗಿವೆ ಎಂದು ಆರೋಪಿಸಿದರು. ಇನ್ನೊಂದೆಡೆ, ಬಿಜೆಪಿ ಸಮಾಜದಲ್ಲಿ ಒಡಕು ಮತ್ತು ಹಗೆತನವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ ಅವರು, ಅಭಿವೃದ್ಧಿ ಯೋಜನೆಗಳ ವಿಳಂಬಕ್ಕೆ ಬಿಜೆಪಿಯನ್ನು ದೂಷಿಸುವ ಮೂಲಕ ಆಪ್ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: I.N.D.I.A ಒಕ್ಕೂಟಕ್ಕೆ ಬಿಗ್ ಶಾಕ್: ಬಂಗಾಳ, ಕೇರಳದಲ್ಲಿ ಮೈತ್ರಿಕೂಟಕ್ಕೆ ಬೆಂಬಲವಿಲ್ಲವೆಂದ ಈ ಪಕ್ಷ!