ನಮ್ಮ ಗ್ಯಾರಂಟಿ ಜನರ ಬದುಕಿಗಾಗಿ, ಚುನಾವಣೆಗಲ್ಲ: ಡಿ.ಕೆ.ಶಿವಕುಮಾರ್
ಬೆಳಗಾವಿಯಲ್ಲಿ ಪ್ರಜಾಧ್ವನಿ ಪ್ರಾರಂಭಿಸಿದ ನಂತರ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಜೆಟ್ ನಲ್ಲಿ ಇದಕ್ಕಾಗಿ 52 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ಕಲಬುರಗಿ(ಮಾ.14): ನಮ್ಮ ಗ್ಯಾರಂಟಿ ಯೋಜನೆಗಳನ್ನು ದೇಶದಲ್ಲಿ ಜನ ಮೆಚ್ಚಿದ್ದಾರೆ. ಬಿಜೆಪಿಯವರು ಒಪ್ಪಿ ಮೋದಿ ಗ್ಯಾರಂಟಿ ಯೋಜನೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಐದೂ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಅನುಷ್ಠಾನಗೊಳಿಸಿ ಬಹಳ ಆತ್ಮವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇನೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಬದುಕಿಗಾಗಿ, ಚುನಾವಣೆಗೆ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ. ಮಾ.10ಕ್ಕೆ ನಾನು ಕಾಂಗ್ರೆಸ್ ಅಧ್ಯಕ್ಷನಾಗಿ ನಾಲ್ಕು ವರ್ಷ ಪೂರ್ಣಗೊಂಡಿದೆ. ಬೆಳಗಾವಿಯಲ್ಲಿ ಪ್ರಜಾಧ್ವನಿ ಪ್ರಾರಂಭಿಸಿದ ನಂತರ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಜೆಟ್ ನಲ್ಲಿ ಇದಕ್ಕಾಗಿ 52 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.
ಕಲಬುರಗಿಯಲ್ಲಿ ಜನಸ್ಪಂದನ ಕಾರ್ಯಕ್ರಮ: ಸತತ 5 ಗಂಟೆ ಕುಳಿತು ಅಹವಾಲು ಆಲಿಸಿದ ಪ್ರಿಯಾಂಕ್ ಖರ್ಗೆ
ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ:
ನಾವು ಪ್ರತಿ ತಾಲೂಕು, ಜಿಲ್ಲೆಗಳಲ್ಲಿ 15 ಕಾರ್ಯಕರ್ತರನ್ನು ಒಳಗೊಂಡಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ. ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಿಗೆ ತಾಲೂಕು ಮಟ್ಟದಲ್ಲಿ ಕಚೇರಿ ಹಾಗೂ 25 ಸಾವಿರ ಗೌರವಧನ, ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ಜಿಲ್ಲಾ ಮಟ್ಟದಲ್ಲಿ ಕಚೇರಿ ಹಾಗೂ 50 ಸಾವಿರ ಗೌರವಧನ ನೀಡಲಾಗುವುದು. ರಾಜ್ಯ ಮಟ್ಟದ ಸಮಿತಿಯಲ್ಲಿ ಓರ್ವ ಅಧ್ಯಕ್ಷರು ಹಾಗೂ ಐವರು ಉಪಾಧ್ಯಕ್ಷರನ್ನು ಒಳಗೊಂಡಿದೆ. ಅಧ್ಯಕ್ಷರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಲಾಗುವುದು. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆಂದರು.
ಅಭಿವೃದ್ಧಿಗೆ 1.26 ಲಕ್ಷ ಕೋಟಿ ಅನುದಾನ:
ಇನ್ನು ನಮ್ಮ ಸರ್ಕಾರ ಮಂಡಿಸಿರುವ 3.74 ಲಕ್ಷ ಕೋಟಿ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊರತಾಗಿ ಅಭಿವೃದ್ಧಿ ಯೋಜನೆಗಳಿಗೆ ₹1.26 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ. ಕನ್ನಡದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಎಲ್ಲಾ ವ್ಯಾಪಾರ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡ ಭಾಷೆ ಬಳಕೆ ಮಾಡುವ ಬಗ್ಗೆ ಪ್ರತ್ಯೇಕ ಕಾನೂನು ಜಾರಿಗೆ ತರಲಾಗಿದೆ ಎಂದರು.
ನೀರಿನ ಅಭಾವ ನೀಗಿಸುತ್ತೇವೆ, ಬರ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ 7 ಸಾವಿರ ಕೊಳವೆ ಬಾವಿಗಳು ಬತ್ತಿದ್ದು ಇದರಿಂದ ಕೆಲವು ಕಡೆ ನೀರಿನ ಅಭಾವ ಎದುರಾಗಿದೆ. ಉಳಿದ ಕಡೆ ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ.
ರಾಜ್ಯದ ಇತರೆ ಭಾಗಗಳಲ್ಲಿ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಅವರಿಗೆ ಹಣ ನೀಡಲಾಗಿದೆ. ನೀರಿನ ಅಭಾವದ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರು ಸಭೆ ಮಾಡಿ ಚರ್ಚಿಸುತ್ತಿದ್ದಾರೆಂದು ಹೇಳಿದರು.
ಮೌನದಿಂದಲೇ ಅನಂತ ಕುಮಾರ್ ಹೆಗಡೆ ಮಾತು ಒಪ್ಪಿದ ಬಿಜೆಪಿ ಹಾಗೂ ಪ್ರಧಾನಿ:
ಬಿಜೆಪಿ ಸಂಸದರೊಬ್ಬರು ನಾವು ಸಂವಿಧಾನ ಬದಲಾವಣೆ ಮಾಡಬೇಕಾದರೆ ನಮಗೆ 400 ಕ್ಷೇತ್ರಗಳನ್ನು ಗೆಲ್ಲಿಸಿ ಎಂಬ ಹೇಳಿಕೆ ಖಂಡನೀಯ. ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತಿನಂತೆ ಸಂಸದರ ಹೇಳಿಕೆ ಬಗ್ಗೆ ಪ್ರಧಾನ ಮಂತ್ರಿಗಳು, ಬಿಜೆಪಿ ಹೈಕಮಾಂಡ್ ನಾಯಕರ ಮೌನ ನೋಡಿದರೆ, ಹೆಗಡೆ ಮಾತಿಗೆ ಇವರೆಲ್ಲರ ಸಮ್ಮತಿ ಇದ್ದಂತೆಯೇ ಅಲ್ಲವೆ? ಎಂದು ಪ್ರಶ್ನಿಸಿದರು.
ಬರೀ ಘೋಷಣೆ ಹಾಕ್ಕೊಂಡು ಹೋದ್ರೆ ಜನ ಮತ ಹಾಕ್ತಾರಾ? ಬಿಜೆಪಿ ವಿರುದ್ಧ ಸಚಿವ ಶರಣ ಪ್ರಕಾಶ ವಾಗ್ದಾಳಿ
ಸಂಸದರ ಹೇಳಿಕೆಯನ್ನು ಖಂಡಿಸುವುದಾಗಿದ್ದರೆ ಬಿಜೆಪಿ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಿತ್ತು. ನಮ್ಮ ಪಕ್ಷ ಆಗಿದ್ದರೆ ಇಷ್ಟು ಹೊತ್ತಿಗೆ ಇಂತಹ ಹೇಳಿಕೆ ಕೊಟ್ಟವರನ್ನು ಉಚ್ಚಾಟಿಸಲಾಗುತ್ತಿತ್ತು. ಬಿಜೆಪಿಯ ಭಾವನೆ ಹಾಗೂ ಆಂತರಿಕ ಧ್ವನಿಯನ್ನು ಸಂಸದರು ಬಹಿರಂಗವಾಗಿ ಹೇಳಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕು, ನಮ್ಮ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು, ಜನತೆಗೆ ಡಿಕೆಶಿ ಕರೆ ನೀಡಿದರು.
ಅಫಜಲ್ಪುರ, ಜೇವರ್ಗಿ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಭೀಮಾ ನದಿ ನೀರು ಬಿಡುವಂತೆ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, "ನಮ್ಮ ಸರ್ಕಾರ ಈಗಾಗಲೇ ಪತ್ರ ಬರೆದಿದ್ದು, ತೆಲಂಗಾಣದವರೂ ಕೇಳುತ್ತಿದ್ದಾರೆ. ಇಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಇದೆ. ನಮ್ಮ ರಾಜ್ಯ ಕಾಪಾಡಿಕೊಂಡು ಬೇರೆ ರಾಜ್ಯಕ್ಕೆ ಸಹಕಾರ ನೀಡಲು ನಾವು ಸಿದ್ಧವಿದ್ದೇವೆ. ಬೇರೆ ರಾಜ್ಯಗಳು ನಮಗೆ ಸಹಕಾರ ನೀಡಬೇಕು" ಎಂದರು.