ನನ್ನ ಸಮಾಧಿಯನ್ನು ವಿಪಕ್ಷ ಬಯಸುತ್ತಿದೆ: ಮೋದಿ ವಾಗ್ದಾಳಿ
ಮೋದಿ ನಿಮ್ಮ ಸಮಾಧಿ ತೋಡಲಾಗುತ್ತದೆ' ಎಂದು ಈ ಹಿಂದೆ ಕಾಂಗ್ರೆಸ್ ನಾಯಕನೊಬ್ಬನೀಡಿದ ಹೇಳಿಕೆಯ ವಿರುದ್ಧವೂ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ
ನಂದೂರ್‌ಬಾರ್ (ಮಹಾರಾಷ್ಟ್ರ)(ಮೇ.11): ಇತ್ತೀಚೆಗಷ್ಟೇ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು 'ಔರಂಗಜೇಬ್‌ನಂತೆ ಮೋದಿಯವರನ್ನು ಮಹಾರಾಷ್ಟ್ರದಲ್ಲಿ ಜೀವಂತ ಸಮಾಧಿ ಮಾಡಲಾಗುತ್ತದೆ' ಎಂದು ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಕೆಲವು ವಿಪಕ್ಷ ನಾಯಕರು ನನ್ನನ್ನು ಜೀವಂತ ಸಮಾಧಿಯನ್ನಾಗಿ ನೋಡಬೇಕೆಂದು ಬಯಸ್ತಿದ್ದಾರೆ. ಆದರೆ, ದೇಶದ ಜನತೆಯೇ ನನಗೆ ಭದ್ರತಾ ಕವಚ. ಅವರು ನನಗೆ ಹಾನಿಯಾಗಲು ಬಿಡುವುದಿಲ್ಲ' ಎಂದು ಗುಡುಗಿದ್ದಾರೆ.
ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, 'ಮೋದಿ ನಿಮ್ಮ ಸಮಾಧಿ ತೋಡಲಾಗುತ್ತದೆ' ಎಂದು ಈ ಹಿಂದೆ ಕಾಂಗ್ರೆಸ್ ನಾಯಕನೊಬ್ಬನೀಡಿದ ಹೇಳಿಕೆಯ ವಿರುದ್ಧವೂ ಹರಿಹಾಯ್ದರು. 'ತಮ್ಮ ಮತದಾರರನ್ನು (ಒಂದು ಕೋಮನ್ನು) ಮನಸ್ಸಿನಲ್ಲಿಟ್ಟುಕೊಂಡು ಅವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಇವೆಲ್ಲವನ್ನೂ ನೋಡಿ ನಿಜವಾಗಿಯೂ ದುಃ ಖಿತರಾಗಿರಬೇಕು' ಎಂದು ಚಾಟಿ ಬೀಸಿದರು.
ಬರೆದು ಇಟ್ಟುಕೊಳ್ಳಿ ಮೋದಿ ಮತ್ತೆ ಪ್ರಧಾನಿ ಆಗೋಲ್ಲ: ರಾಹುಲ್ ಗಾಂಧಿ
ಇದೇ ವೇಳೆ, ಉದ್ಧವ್ ಠಾಕ್ರೆ ಬಣದ ಶಿವಸೇನೆಯನ್ನು 'ನಕಲಿ ಶಿವಸೇನೆ' ಎಂದು ಜರಿದ ಮೋದಿ, 'ನಕಲಿ ಶಿವಸೇನೆ ನನ್ನನ್ನು ಈ ರೀತಿ ನೋಡಲು ಬಯಸುತ್ತಿದೆ. ಅವರು ತಮ್ಮ ನೆಚ್ಚಿನ ಮತ ಬ್ಯಾಂಕ್‌ಗೆ ಇಷ್ಟವಾಗುವ ರೀತಿಯಲ್ಲಿ ನನ್ನನ್ನು ನಿಂದಿಸುತ್ತಾರೆ. ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಾಂಬ್ ಸ್ಫೋಟದ ಆರೋಪಿಗಳನ್ನು ಪಕ್ಷಕ್ಕೆ ತೆಗೆದುಕೊಳ್ಳುತ್ತಾರೆ. ಇದರಿಂದ ಜನರು ಅವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ' ಎಂದು ತೀಕ್ಷ್ಯ ವಾಗ್ದಾಳಿಯನ್ನು ನಡೆಸಿದರು. 1993ರ ಮುಂಬೈ ಬಾಂಬ್ ದಾಳಿ ಆರೋಪಿ ಇಕ್ಸಾಲ್ ಮೂಸಾ ಯಾನೆ ಬಾಬಾ ಚೌವ್ಹಾಣ್, ಶಿವಸೇನೆ-ಕಾಂಗ್ರೆಸ್ ಕೂಟದ ಮುಂಬೈ ವಾಯವ್ಯ ಅಭ್ಯರ್ಥಿ ಅಮೋಲ್ ಕೀರ್ತಿಕರ್‌ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಅದನ್ನು ಈ ಮೂಲಕ ಮೋದಿ ಪರೋಕ್ಷವಾಗಿ ಪ್ರಸ್ತಾಪಿಸಿದರು.
ಸಮಾಧಿ ಹೇಳಿಕೆ ಮೋದಿ ನೀಡಿದ್ದೇಕೆ?
ಮೇ 9ರಂದು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಮಾತನಾಡಿದ್ದ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್, 'ಗುಜರಾತ್‌ನ ದಾಹೋದ್ ನಲ್ಲಿ ಮೊಘಲರ ದೊರೆ ಔರಂಗಜೇಬ್ ಹುಟ್ಟಿದ. ಮೋದಿ ಕೂಡ ಗುಜರಾತಲ್ಲೇ ಹುಟ್ಟಿದ್ದು. ಅದಕ್ಕೇ ಔರಂಗಜೇಬನ ಥರ ವರ್ತಿಸ್ತಾರೆ. ನಾವು ಔರಂಗಜೇಬನನ್ನೇ ಸಮಾಧಿ ಮಾಡಿದ್ದೇವೆ. ಹಾಗಾದರೆ ಮೋದಿ ಯಾವ ಲೆಕ್ಕ?' ಎಂದಿದ್ದರು. ಇದಕ್ಕೆ ಮೋದಿ ತಿರುಗೇಟು ಕೊಟ್ಟಿದ್ದಾರೆ.