ಲಿಂಗಾಯತ ಸಮುದಾಯಕ್ಕೆ ದಕ್ಕಿದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಒಕ್ಕಲಿಗ/ ಒಬಿಸಿ ಶಾಸಕನಿಗೆ ವಿಪಕ್ಷ ಸ್ಥಾನ ಫಿಕ್ಸ್?
ಅಶ್ವತ್ಥನಾರಾಯಣ, ಅಶೋಕ್, ಸುನೀಲ್‌ಕುಮಾರ್ ಹೆಸರು ಮುಂಚೂಣಿಗೆ, ಲಿಂಗಾಯತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ವಿಪಕ್ಷ ಹುದ್ದೆಗೆ ಇನ್ನೆರಡು ಪ್ರಮುಖ ಸಮುದಾಯ ಪರಿಗಣನೆ ಸಾಧ್ಯತೆ.
ಬೆಂಗಳೂರು(ನ.11): ಲಿಂಗಾಯತ ಸಮುದಾಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ನಿಭಾಯಿಸಲಿರುವ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗಗಳ ಸಮುದಾಯಕ್ಕೆ (ಒಬಿಸಿ) ನೀಡುವುದು ಬಹುತೇಕ ನಿಶ್ಚಿತವಾಗಿದೆ.
ಮೇಲ್ನೋಟಕ್ಕೆ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಸಿಗಬಹುದು ಎಂಬ ಮಾತು ಕೇಳಿಬರುತ್ತಿದ್ದರೂ ಜೆಡಿಎಸ್ ಜತೆಗಿನ ಮೈತ್ರಿಯಾಗುವುದು ತೀರ್ಮಾನವಾಗಿರುವ ಹಿನ್ನೆಲೆಯಲ್ಲಿ ಒಬಿಸಿಗೆ ಅವಕಾಶ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.
ಜೆಡಿಎಸ್ ಕೋಟೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದ ತಂತ್ರಗಾರನಿಗೆ ಒಲಿದ ರಾಜ್ಯಾದ್ಯಕ್ಷ ಸ್ಥಾನ..!
ಒಕ್ಕಲಿಗ ಸಮುದಾಯಕ್ಕೆ ನೀಡುವುದಾದರೆ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಆರ್.ಅಶೋಕ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಅಶ್ವತ್ಥನಾರಾಯಣ ಅವರಿಗೆ ಹೆಚ್ಚು ಅವಕಾಶವಿದೆ ಎಂಬ ಮಾತು ಕೇಳಿಬಂದಿದೆ. ಇನ್ನು ಒಬಿಸಿ ವರ್ಗವನ್ನು ಪರಿಗಣಿಸುವ ನಿರ್ಧಾರ ಕೈಗೊಂಡಲ್ಲಿ ಮಾಜಿ ಸಚಿವ ವಿ.ಸುನೀಲ್‌ಕುಮಾರ್ ಅವರನ್ನು ಪರಿಗಣಿಸುವ ನಿರೀಕ್ಷೆಯಿದೆ.