ಭೋಪಾಲ್[ಮಾ. 4]: ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳ ರಾಜಕೀಯ ಚಿತ್ರಣವ್ನನೇ ಬದಲಾಯಿಸಿದ್ದ ರೆಸಾರ್ಟ್ ಪೊಲಿಟಿಕ್ಸ್ ಬಿಸಿ ಸದ್ಯ ಮಧ್ಯಪ್ರದೇಶ ಸರ್ಕಾರಕ್ಕೂ ಬಿಸಿ ಮುಟ್ಟಿಸಿದೆ. ರಾತ್ರೋ ರಾತ್ರಿ ಕೈ ಶಾಸಕರು ರೆಸಾರ್ಟ್ ಸೇರಿದ್ದು, ಇಲ್ಲಿನ ಮುಖ್ಯಮಂತ್ರಿ ಕಮಲನಾಥ್ ರಿಗೆ ನಡುಕ ಹುಟ್ಟಿಸಿದೆ. 

ಹೌದು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ 15 ತಿಂಗಳು ಸರಿದಿವೆ. ಸರ್ಕಾರ ರಚಿಸುವ ವೇಳೆಯೂ ರೆಸಾರ್ಟ್ ರಾಜಕಾರಣದ ಬಿಸಿ ಕಾಂಗ್ರೆಸ್ ಗೆ ತಟ್ಟಿತ್ತಾದರೂ ಇತರ ಪಕ್ಷದ ನಾಯಕರ ಬೆಂಬಲದೊಂದಿಗೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸರ್ಕಾರ ಸುಭದ್ರವಾಗಿದೆ ಎನ್ನುವಷ್ಟರಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಗುರುಗಾಂವ್​ನ ಸ್ಟಾರ್​ ಹೋಟೆಲ್​ ಸೇರಿಕೊಂಡಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆ ಮುಖ್ಯಮಂತ್ರಿ ಕಮಲನಾಥ್ ರನ್ನು ಕಂಗೆಡಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ 'ನಾಲ್ವರು ಕಾಂಗ್ರೆಸ್ ಶಾಸಕರು ಸ್ಟಾರ್ ಹೋಟೆಲ್ ಸೇರಿರುವುದು ನಿಜ. ಈ ವಿಷಯ ತಿಳಿಯುತ್ತಿದ್ದಂತೆ ಸಚಿವರಾದ ಜಿತು ಪತ್ವಾರಿ ಮತ್ತು ಜೈವರ್ಧನ್ ಸಿಂಗ್ ಹೋಟೆಲ್ ಬಳಿ ಹೋಗಿ, ಆ ಶಾಸಕರ ಮನವೊಲಿಸಲು ಪ್ರಯತ್ನಿಸಿದ ಸಚಿವರು ರಮಾಬಾಯಿ ಅವರನ್ನು ವಾಪಾಸ್​ ಕರೆತಂದಿದ್ದಾರೆ. ಆ ವೇಳೆ ಬಿಜೆಪಿಯವರು ಅವರನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಶಾಸಕ ಬಿಸಾಹುಲಾಲ್ ಸಿಂಗ್ ಅವರನ್ನು ಕೂಡ ಸಂಪರ್ಕಿಸಲಾಗಿದೆ' ಎಂದಿದ್ದಾರೆ.

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ 114 ಸ್ಥಾನಗಳನ್ನು ಮತ್ತು ಬಿಜೆಪಿ 107 ಸ್ಥಾನಗಳನ್ನು ಪಡೆದಿತ್ತು. BSPಯಿಂದ ಇಬ್ಬರು, ಸಮಾಜವಾದಿ ಪಕ್ಷದಿಂದ ಓರ್ವ ಹಾಗೂ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು. ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಪಕ್ಷ, ಕಾಂಗ್ರೆಸ್​ ಮತ್ತು ಇತರೆ ಪಕ್ಷದ ಶಾಸಕರನ್ನು ರೆಸಾರ್ಟ್​ ರಾಜಕಾರಣದ ಮೂಲಕ ತನ್ನತ್ತ ಸೆಳೆದು, ಸರ್ಕಾರ ರಚಿಸಲು ತಂತ್ರ ರೂಪಿಸಿತ್ತು. ಆದರೆ ಈ ಪ್ಲಾನ್ ಪ್ಲಾಪ್ ಆಗಿದ್ದು, ಪರಿಣಾಮವಾಗಿ ಕಮಲನಾಥ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು.