ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡಲು ರಾಹುಲ್ ಗಿಂತ ಕರ್ನಾಟಕ ಕಾಂಗ್ರೆಸ್ ಮುಖಂಡ ಸಮರ್ಥ ಎಂದು ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗಿದೆ. 

ಮಲ್ಲಿಕಾರ್ಜುನ ಖರ್ಗೆಗೆ ಈ ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆ ಇದೆ ಎಂದು ದಾವಣಗೆರೆ ಛಲವಾದಿ ಮಹಾಸಭಾ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿದರು. 

ಪ್ರಧಾನಿ ಮೋದಿಯವರನ್ನು ಎದುರಿಸುವ ತಾಕತ್ತು ಖರ್ಗೆ ಅವರಿಗಿದೆ. ರಾಹುಲ್ ಗಾಂಧಿಯಿಂದ ಮೋದಿಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಅದು ಕೇವಲ ಮಲ್ಲಿಕಾರ್ಜುನ ಖರ್ಗೆಯವರಿಂದ ಮಾತ್ರ ಸಾಧ್ಯ ಎಂದು ಹೇಳಿದರು. 

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊದಲ ದಲಿತ ಮುಖಂಡ ದಿ ಕೆ.ಎಚ್‌.ರಂಗನಾಥ್‌, ದಿ.ಬಸವಲಿಂಗಪ್ಪ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆದರೆ ಆಗಲಿಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಮಾತ್ರವಲ್ಲ, ಈ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ ಎಂದರು.