ಮೈಸೂರು:  ಸರ್ಕಾರ ಬೀಳುವ ರೀತಿ ಇದ್ದಿದ್ದರೆ ನಾನು ಇಷ್ಟು ಕೂಲ್ ಆಗಿ ಇರಲು ಸಾಧ್ಯವಿತ್ತ?  ಕೆಲವು ಮಾಧ್ಯಮದವರಿಗೆ ಯಾರು ಸುದ್ದಿ ಕೊಡುತ್ತಿದ್ದಾರೆ ಗೊತ್ತಿಲ್ಲ. ಕೆಲವರು ರಾಷ್ಟ್ರಪತಿ ಆಡಳಿತದ ದಿನಾಂಕವನ್ನೂ ನಿಗದಿ ಮಾಡಿದ್ದಾರೆ.  ಈ ರೀತಿಯ ಸುದ್ದಿಯಿಂದ ನನಗೆ ನಷ್ಟವಿಲ್ಲ. ಆದರೆ ರಾಜ್ಯದ ಜನಕ್ಕೆ ಗೊಂದಲ ಉಂಟಾಗಿ ನಷ್ಟ ಅನುಭವಿಸುತ್ತಾರೆ.  ನನ್ನ ಸರ್ಕಾರ  ಭದ್ರವಾಗಿದೆ.  ಯಾವ ಆತಂಕವೂ ಇಲ್ಲ. ಮುಂಬೈಗೆ ಹೋಗಿರುವ ಶಾಸಕರು ನನ್ನ ಸ್ನೇಹಿತರು.  ದೆಹಲಿಯಲ್ಲಿರುವ ಬಿಜೆಪಿ ಶಾಸಕರೂ ನನ್ನ ಸ್ನೇಹಿತರು, ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಲೋಕಸಭ ಚುನಾವಣೆಗ ಮುಹೂರ್ತ ನಿಗದಿ?
ಇಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಸಿಎಂ, ಫೆ.25ರೊಳಗೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತದೆ.  ಮಾರ್ಚ್ ಕೊನೆ ವಾರದಲ್ಲಿ ಚುನಾವಣಾ ನಡೆಯುವ ಸಾಧ್ಯತೆ ಇದೆ.
 ಮೈಸೂರು ಜಿಲ್ಲೆಯ ಕಾರ್ಯಕರ್ತರು ನನ್ನ ರಾಜಕೀಯ ಬೆಳವಣಿಗೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. 2006ರಿಂದ ಪಕ್ಷದ ಸಂಘಟನೆಗೆ ಮೈಸೂರಿನ ಜನತೆ ಎಲ್ಲಾ ರೀತಿಯ ಸಹಕಾರ ನೀಡಿದ್ದೀರಾ. ಕಳೆದ ಚುನಾವಣೆಯಲ್ಲಿ ಮೈಸೂರಿನಿಂದಲೇ ಪ್ರಚಾರ ಆರಂಭಿಸಿದ್ದೆ. 

ನನಗೆ 70 ರಿಂದ 75 ಸೀಟ್ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಕೆಲವು ಕಾರಣಗಳಿಂದ ಹಿನ್ನೆಡೆಯಾಯಿತು. ಇಲ್ಲದಿದ್ದರೆ ಕನಿಷ್ಠ 70ಸ್ಥಾನವನ್ನಾದರೂ ನಾವು ಗೆಲ್ಲುತ್ತಿದ್ದೆವು, ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ರಫೇಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ಯಾವುದೇ ಪ್ರಕರಣಗಳಿರಲಿಲ್ಲ. ಕಡಿಮೆ ಅವಧಿಯ ಉತ್ತಮ ಅಡಳಿವನ್ನು ದೇವೇಗೌಡರು ನೀಡಿದ್ದರು. ಮೋದಿ ಓಟವನ್ನು ನಿಲ್ಲಿಸಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿ‌ಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. 28ಕ್ಕೆ 28ಸ್ಥಾನಗಳನ್ನು ಜೆಡಿಎಸ್ ಗೆಲ್ಲುಸುವ ಕೆಲಸ ಮಾಡಬೇಕು.  ಬಿಜೆಪಿಯವರು ನಮ್ಮ ಸರ್ಕಾರಕ್ಕೆ ಹಲವಾರು ಡೆಡ್‌ಲೈನ್ ನೀಡಿದರು. ಆದರೆ ಯಾವುದೇ ಡೆಡ್‌ಲೈನ್‌ನಲ್ಲೂ ಸರ್ಕಾರ ಬೀಳಲಿಲ್ಲ.  ನಮ್ಮ ಸರ್ಕಾರಕ್ಕೆ ತಾಯಿ ಚಾಮುಂಡೇಶ್ವರಿ ಆಶಿರ್ವಾದವಿದೆ. 5ವರ್ಷ ಸರ್ಕಾರ ಸುಭದ್ರವಾಗಿರುತ್ತೆ. ಕಾರ್ಯಕರ್ತರು ಆತಂಕಪಡುವ  ಅಗತ್ಯವಿಲ್ಲ, ಎಂಬ ಭರವಸೆ ನೀಡಿದರು. 

ಬಡ್ಡಿ ರಹಿತ ಸಾಲ ಯೋಜನೆ ಜಾರಿ:
ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ತರುತ್ತಿದ್ದೇವೆ. ಮೈಸೂರಿನ ಎಲ್ಲಾ ಬೀದಿಬದಿ ವ್ಯಾಪಾರಿಗಳು ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಿ. ಮಹಿಳೆಯರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ಕೂಡಾ ನೀಡಲು ಯೋಜನೆ ಸಿದ್ದವಾಗಿದೆ. ರೈತರಿಗಷ್ಟೇ ಅಲ್ಲ ಭೂಮಿ ಇಲ್ಲದ ಬಡವರ ಪರವೂ ಸರ್ಕಾರ ಕೆಲಸ ಮಾಡುತ್ತಿದೆ. ಮೈಸೂರಿನ ಪಾಲ್ಕನ್ ಕಾರ್ಖಾನೆಯಲ್ಲಿ ಪುನರ್ ಪ್ರಾರಂಭಿಸಲು ಸಭೆ ಕರೆದಿದ್ದೇವೆ. ಕಾರ್ಖಾನೆ ಪ್ರಾರಂಭಿಸಿ ಪಾಲ್ಕಾನ್ ಕಾರ್ಮಿಕರಿಗೆ ಪುನರ್ ಉದ್ಯೋಗ ಕಲ್ಪಿಸಲಾಗುತ್ತದೆ. ಈ ಅವಕಾಶಗಳನ್ನು ಜನ ಕಳೆದುಕೊಳ್ಳಬಾರದು.ಜೆಡಿಎಸ್ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ.