ಚನ್ನಪಟ್ಟಣ ಉಪಚುನಾವಣೆ: ಅನಿತಾ, ನಿಖಿಲ್, ಜಯಮುತ್ತು ಪೈಕಿ ಒಬ್ಬರು ಇಂದು ಫೈನಲ್?

ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರು ಕಣಕ್ಕಿಳಿಯುತ್ತಾರೋ ಅಥವಾ ಬೇರೆಯವರು ಸ್ಪರ್ಧಿಸುತ್ತಾರೋ ಎಂಬ ಕುತೂಹಲಕ್ಕೆ ತೆರೆ ಬೀಳಬೇಕಾಗಿದೆ. ಅಂದರೆ, ನಿಖಿಲ್, ಅನಿತಾ ಹಾಗೂ ಪಕ್ಷದ ಸ್ಥಳೀಯ ಕಾರ್ಯಕರ್ತ ಜಯಮುತ್ತು ಅವರ ಪೈಕಿ ಯಾರು ಅಭ್ಯರ್ಥಿಯಾಗಬಹುದು ಎಂಬುದನ್ನು ಕಾದು ನೋಡಬೇಕು. 
 

One of Anita Kumaraswamy Nikhil Kumaraswmy Jayamuthu is the final on October 22nd grg

ಬೆಂಗಳೂರು(ಅ.22):  ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಕಬ್ಬಿಣದ ಕಡಲೆಯಾಗಿದ್ದು, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಬಂಡಾಯದ ಕಾರಣ ಕೇಸರಿ ಪಕ್ಷವು ತನ್ನ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಜೆಡಿಎಸ್‌, ಇಂದು(ಮಂಗಳವಾರ) ಕ್ಷೇತ್ರದ ಪ್ರಮುಖರ ಸಭೆ ಕರೆದಿದ್ದು, ಅಲ್ಲಿ ಚರ್ಚಿಸಿದ ಬಳಿಕ ಬಿಜೆಪಿ ಸಹಮತದೊಂದಿಗೆ ತನ್ನದೇ ಅಂತಿಮ ಅಭ್ಯರ್ಥಿಯ ಆಯ್ಕೆ ಮಾಡುವ ನಿರೀಕ್ಷೆ ಇದೆ.

ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರು ಕಣಕ್ಕಿಳಿಯುತ್ತಾರೋ ಅಥವಾ ಬೇರೆಯವರು ಸ್ಪರ್ಧಿಸುತ್ತಾರೋ ಎಂಬ ಕುತೂಹಲಕ್ಕೆ ತೆರೆ ಬೀಳಬೇಕಾಗಿದೆ. ಅಂದರೆ, ನಿಖಿಲ್, ಅನಿತಾ ಹಾಗೂ ಪಕ್ಷದ ಸ್ಥಳೀಯ ಕಾರ್ಯಕರ್ತ ಜಯಮುತ್ತು ಅವರ ಪೈಕಿ ಯಾರು ಅಭ್ಯರ್ಥಿಯಾಗಬಹುದು ಎಂಬುದನ್ನು ಕಾದು ನೋಡಬೇಕು. ಯೋಗೇಶ್ವರ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದರಿಂದ ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಬಗ್ಗೆ ಹಿಂದೇಟು ಹಾಕುವೆ ಸಾಧ್ಯತೆಯಿದೆ. 

ಅಧಿಕಾರದ ಹಪಾಹಪಿಗಾಗಿ ಕೆಲಸ ಮಾಡುತ್ತಿಲ್ಲ: ನಿಖಿಲ್ ಕುಮಾರಸ್ವಾಮಿ

ತೀರಾ ಅನಿವಾರ್ಯವಾದರೆ ಪುತ್ರ ನಿಖಿಲ್ ಬದಲು ಪತ್ನಿ ಅನಿತಾರನ್ನು ಅಭ್ಯರ್ಥಿಯನ್ನಾಗಿಸಬಹುದು. ಇಲ್ಲದಿದ್ದರೆ ಪಕ್ಷದ ಕಾರ್ಯಕರ್ತರಿಗೆ ಒಳ್ಳೆಯ ಸಂದೇಶ ನೀಡಬೇಕೆಂಬ ನಿಲವಿಗೆ ಬಂದರೆ ಜಯಮುತ್ತುಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. 

ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ನಡೆಸುತ್ತಿರುವ ಪ್ರಯತ್ನಕ್ಕೆ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ಅಡ್ಡಿಯನ್ನುಂಟು ಮಾಡಿದೆ. ಈ ಮೂಲಕ ಚನ್ನಪಟ್ಟಣ ಕ್ಷೇತ್ರದ ರಾಜಕೀಯ ಮತ್ತೊಂದು ಮಜಲು ಪಡೆದುಕೊಂಡಿದೆ. ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುವುದು ಮೇಲ್ನೋಟಕ್ಕೆ ಖಚಿತವಾಗಿದ್ದರೂ ಗೊಂದಲಗಳು ಮಾತ್ರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸೋಮವಾರ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ನಿಖಿಲ್ ಉಪಸ್ಥಿತರಿದ್ದರು. 

ಚರ್ಚೆಯ ಸಂದರ್ಭದಲ್ಲಿ ಚನ್ನಪಟ್ಟಣದ ನಾಯಕರ ಸಭೆಯನ್ನು ಕರೆದು ಚರ್ಚಿಸಿ ಅಂತಿಮಗೊಳಿಸುವಂತೆ ಕುಮಾರಸ್ವಾಮಿಗೆ ದೇವೇಗೌಡ ಸೂಚನೆ ನೀಡಿದರು ಎಂದು ಹೇಳಲಾಗಿದೆ. ಮಂಗಳವಾರ ಚನ್ನಪಟ್ಟಣ ನಾಯಕರ ಸಭೆ ಕರೆಯಲಾಗಿದೆ. 

ಚನ್ನಪಟ್ಟಣದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸಭೆ ನಡೆಸಲಾಗುವುದು, ಸಭೆಯಲ್ಲಿ ಚನ್ನಪಟ್ಟಣದ ನಾಯಕರು ಭಾಗವಹಿಸಲಿದ್ದಾರೆ. ಈ ವೇಳೆ ಯೋಗೇಶ್ವರ್ ರಾಜೀನಾಮೆ ಮತ್ತು ಸತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಸೇರಿದಂತೆ ಚರ್ಚೆ ನಡೆಸಲಾಗುವುದು. ಜೆಡಿಎಸ್ ಅಭ್ಯರ್ಥಿಯ ಹೆಸರನ್ನು ಅಂತಿಮವಾಗಿ ಪ್ರಕಟಿಸುವ ಮುನ್ನ ಬಿಜೆಪಿ ಹೈಕಮಾಂಡ್ ಜತೆಗೂ ಒಮ್ಮೆ ಚರ್ಚಿಸುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಕುಮಾರಸ್ವಾಮಿ ಕುಟುಂಬದವರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿರುವುದರಿಂದ ಸ್ಥಳೀಯ ನಾಯಕ ಜಯಮುತ್ತು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಎಂದು ಹೇಳಲಾಗಿದೆ. ಈಗಾಗಲೇ ನಿಖಿಲ್ ಸ್ಪರ್ಧಿಸುವುದಿಲ್ಲ ಎಂದು ಸಷ್ಟವಾಗಿ ಹೇಳಿದ್ದಾರೆ. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಸ್ಪರ್ಧಿಸುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಸಿ.ಪಿ.ಯೋಗೇಶ್ವರ್ ಬಗ್ಗೆ ನಿಖಿಲ್ ತೀವ್ರ ಬೇಸರ 

ಬೆಂಗಳೂರು: 'ಚನ್ನಪಟ್ಟಣ ಟಿಕೆಟ್ ಸಂಬಂಧಿಸಿದಂತೆ ನಾವು ಯೋಗೇಶ್ವ‌ರ್ ವಿಚಾರದಲ್ಲಿ ದೊಡ್ಡ ಔದಾರ್ಯತೆ ತೋರಿದ್ದೇವೆ. ಪಕ್ಷದ ನಾಯಕರು ಅವರಿಗೆ ಆಹ್ವಾನ ಕೊಟ್ಟಿದ್ದಾರೆ, ಇನ್ನೇನು ಮಾಡಬೇಕು' ಎಂದು ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರದಿಂದ ಹೇಳಿದ್ದಾರೆ. 

ಚನ್ನಪಟ್ಟಣ ಟಿಕೆಟ್ ಜೆಡಿಎಸ್‌ಗೇ: ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟ ನಿಖಿಲ್ ಕುಮಾರಸ್ವಾಮಿ!

ಸೋಮವಾರ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಚನ್ನಪಟ್ಟಣ ಕ್ಷೇತ್ರದ ಸಂಬಂಧ ಯಾವುದೇ ತೀರ್ಮಾನ ಕೈಗೊಳ್ಳಲು ಬಿಜೆಪಿ ವರಿಷ್ಠರು ನಮಗೆ ಅಧಿಕಾರ ನೀಡಿದ್ದಾರೆ. ಆದರೂ ಮೈತ್ರಿಗೆ ಯಾವುದೇ ರೀತಿಯ ಅಗೌರವ ತೋರ ಬಾರದು ಎಂಬ ಕಾರಣಕ್ಕಾಗಿ ನಮ್ಮ ನಡೆ ಏನೇ ಇದ್ದರೂ ಮೈತ್ರಿಗೆ ಕಪ್ಪು ಚುಕ್ಕೆ ಬರಬಾರದೆಂದು ನಡೆದುಕೊಳ್ಳುತ್ತಿದ್ದೇವೆ ಎಂದರು.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಕಾಠ್ಯಕರ್ತರ ಸಭೆ ಕರೆದಿದ್ದೇನೆ. ಆ ಸಭೆಯ ಬಳಿಕವೇ ನಾನು ಉಪಚುನಾವಣೆ ಬಗ್ಗೆ ಮಾತನಾಡುತ್ತೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios